ಪ್ರಯಾಣಿಕರೇ ಗಮನಿಸಿ; ಫೆಬ್ರವರಿ 20ರಿಂದ ಖಾಸಗಿ ಬಸ್ ದರ ಹೆಚ್ಚಳ
ಮೈಸೂರು, ಫೆಬ್ರವರಿ 18: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಜಾರಿಯಾದಾಗಿನಿಂದ ಖಾಸಗಿ ಬಸ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದು, ನಷ್ಟವನ್ನು ಸರಿದೂಗಿಸಿಕೊಳ್ಳುವ ಸಲುವಾಗಿ ಪ್ರಯಾಣ ದರ ಏರಿಕೆಗೆ ಮುಂದಾಗಿದ್ದಾರೆ. ಫೆಬ್ರವರಿ 20ರಿಂದ ಮೈಸೂರು-ಚಾಮರಾಜನಗರ ಜಿಲ್ಲೆಯಲ್ಲಿ ಪರಿಷ್ಕೃತ ದರ ಜಾರಿಗೆ ಬರಲಿದೆ.
ಇತ್ತೀಚೆಗೆ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಖಾಸಗಿ ಬಸ್‌ಗಳ ಮಾಲೀಕರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಸಂಘದ ಅಧ್ಯಕ್ಷ ಕೆ.ಶಿವಲಿಂಗು ಹಾಗೂ ಚಾಮರಾಜನಗರ ಸಂಘದ ಅಧ್ಯಕ್ಷ ಅನ್ವರ್ ಪಾಷ ಅಧ್ಯಕ್ಷತೆಯಲ್ಲಿ ನಡೆದ ಸಭೆ ಈ ದರ ಏರಿಕೆಯ ತೀರ್ಮಾನಕ್ಕೆ ಬಂದಿದೆ. ಸರಾಸರಿ ಶೇ.೫ರಷ್ಟು ಪ್ರಯಾಣ ದರ ಏರಿಕೆ ಮಾಡಿರುವುದಾಗಿ ಸಂಘದ ಪದಾಧಿಕಾರಿಗಳು ಹೇಳಿದ್ದಾರೆ.

ಕೋವಿಡ್ ನಂತರ ಎರಡೂ ಜಿಲ್ಲೆಗಳ ಖಾಸಗಿ ಬಸ್ ಉದ್ಯಮ ನಷ್ಟಕ್ಕೆ ಸಿಲುಕಿದೆ. ಅದರಿಂದ ಕೊಂಚವಾದರೂ ಸುಧಾರಿಸಿಕೊಳ್ಳುವ ಸಲುವಾಗಿ 2022ರಲ್ಲಿಯೇ ಪ್ರಯಾಣ ದರ ಏರಿಕೆಯ ತೀರ್ಮಾನಕ್ಕೆ ಬಂದಿದ್ದೆವು. ಆದರೆ, ಪೂರ್ಣವಾಗಿ ಜಾರಿಗೊಳಿಸಿರಲಿಲ್ಲ. ಇದೀಗ ಮತ್ತೊಮ್ಮೆ ದರ ಏರಿಕೆಯನ್ನು ಸಂಘವು ಅನುಮೋದಿಸಿದ್ದು, ಫೆಬ್ರವರಿ 20ರಿಂದಲೇ ಅನ್ವಯ ಆಗುವಂತೆ ಜಾರಿಗೆ ತರಲು ತೀರ್ಮಾನಿಸಿದ್ದೇವೆ ಎಂದು ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಶಿವಲಿಂಗು ತಿಳಿಸಿದರು.
ದಿನೇ ದಿನೇ ಡಿಸೇಲ್ ದರ ಏರಿಕೆ ಜೊತೆಗೆ ಬಸ್ ಬಿಡಿ ಭಾಗಗಳು, ವಾಹನ ವಿಮೆ ಹಾಗೂ ಟೋಲ್ ಹೆಚ್ಚಳದಿಂದಾಗಿ ಈ ದರ ಏರಿಕೆ ಅನಿವಾರ್ಯವಾಗಿತ್ತು. ಈಗಲೂ ಕೆಎಸ್ಆರ್‌ಟಿಸಿ ಬಸ್‌ಗಳಿಗೆ ಹೋಲಿಸಿದರೆ ಖಾಸಗಿ ಬಸ್‌ಗಳ ದರ ಕಡಿಮೆ ಇದೆ ಎಂದು ಹೇಳಿದ ಅವರು, ಹಿಂದೊಮ್ಮೆ ಮೈಸೂರು- ಚಾಮರಾಜನಗರ- ಕೊಳ್ಳೇಗಾಲ ಭಾಗದಲ್ಲಿ ಖಾಸಗಿ ಬಸ್‌ಗಳ ಸೇವೆ ಏಕಚಕ್ರಾಧಿಪತ್ಯ ಸ್ಥಾಪಿಸಿತ್ತು. ಆದರೆ, ಹಂತಹಂತವಾಗಿ ಕೆಎಸ್ಆರ್‌ಟಿಸಿ ಬಸ್ ಸೇವೆ ವಿಸ್ತರಿಸಿದ್ದು, ಇದರಿಂದಾಗಿ ಕ್ರಮೇಣ ಖಾಸಗಿ ಬಸ್‌ಗಳ ಪ್ರಯಾಣಿಕರ ಸಂಖ್ಯೆಯೂ ಕಡಿಮೆಯಾಗುತ್ತ ಬಂದಿದೆ.

ಕೋವಿಡ್ ನಂತರದಲ್ಲಿ ಅರ್ಧದಷ್ಟು ಬಸ್‌ಗಳು ಸೇವೆಯನ್ನೇ ಬಂದ್ ಮಾಡಿವೆ. ಶಕ್ತಿ ಯೋಜನೆಯ ನಂತರ ಮಹಿಳಾ ಪ್ರಯಾಣಿಕರು ಬಸ್‌ಗಳಿಂದ ವಿಮುಖವಾಗಿದ್ದು, ಬಹುತೇಕ ಬಸ್ ಮಾಲೀಕರು ನಷ್ಟದ ಹಾದಿಯಲ್ಲಿದ್ದಾರೆ. ನಾಲ್ಕೈದು ವರ್ಷಗಳ ಹಿಂದೆ ಈ ಮಾರ್ಗಗಳಲ್ಲಿ 110-120 ಖಾಸಗಿ ಬಸ್‌ಗಳು ನಿತ್ಯ ಸಂಚರಿಸುತ್ತಿದ್ದವು. ಈಗ ಇವುಗಳ ಸಂಖ್ಯೆ 50-60ಕ್ಕೆ ಇಳಿದಿದೆ. ಏಳೆಂಟು ಬಸ್ ಹೊಂದಿದ್ದವರು ಮೂರ್ನಾಲ್ಕು ವಾಹನ ಓಡಿಸುತ್ತಿದ್ದಾರೆ. ಒಂದು-ಎರಡು ಬಸ್ ಇದ್ದವರು ಸೇವೆಯನ್ನು ಬಂದ್ ಮಾಡಿ ಬೇರೆ ಉದ್ಯಮದತ್ತ ಮುಖ ಮಾಡುತ್ತಿದ್ದಾರೆ.
ಶಕ್ತಿಯೋಜನೆಯಿಂದ ಖಾಸಗಿ ಬಸ್‌ಗಳಿಗೆ ಸಂಕಷ್ಟ
ಕಳೆದ ಒಂದೂವರೆ ವರ್ಷದಿಂದ ಮಹಿಳಾ ಪ್ರಯಾಣಿಕರು ಈ ಬಸ್‌ಗಳಿಂದ ದೂರವಾಗಿದ್ದಾರೆ. ನಿತ್ಯ ಓಡಾಡುತ್ತಿದ್ದ ಶಿಕ್ಷಕರು, ಬ್ಯಾಂಕ್ ಹಾಗೂ ಸರ್ಕಾರಿ ಉದ್ಯೋಗಿ ಪ್ರಯಾಣಿಕರು ಕಡಿಮೆಯಾಗಿದ್ದಾರೆ. ಇದೆಲ್ಲದರಿಂದ ಒಟ್ಟಾರೆ ಆದಾಯ ಕುಸಿಯುತ್ತಿದೆ. ಶುಭ ಸಮಾರಂಭಗಳು, ಪ್ರವಾಸ-ಸಮಾವೇಶಗಳ ಸೇವೆಯಿಂದ ಒಂದಿಷ್ಟು ಆದಾಯ ಬರುತ್ತಿದೆ ಎಂದು ಬಸ್ ಮಾಲೀಕರು ಹೇಳುತ್ತಿದ್ದಾರೆ.
ಒಟ್ಟಾರೆಯಾಗಿ ಹೇಳಬೇಕೆಂದರೆ ನಿಧಾನವಾಗಿ ಖಾಸಗಿ ಬಸ್‌ಗಳ ಯುಗಾಂತ್ಯ ಆರಂಭವಾಗಿದ್ದು, ಲಾಭಕ್ಕಿಂತ ನಷ್ಟವೇ ಹೆಚ್ಚುತ್ತಿರುವ ಕಾರಣದಿಂದಾಗಿ ಬಹಳಷ್ಟು ಮಾಲೀಕರು ಬಸ್‌ಗಳನ್ನು ಮಾರಾಟ ಮಾಡಿ ಕೈತೊಳೆದುಕೊಂಡಿದ್ದಾರೆ ಬೆರಳೆಣಿಕೆಯ ಮಂದಿಯಷ್ಟೇ ಬಸ್‌ಗಳನ್ನು ಓಡಿಸುತ್ತಿದ್ದಾರೆ. ಶಕ್ತಿ ಯೋಜನೆ ಬಳಿಕ ಪ್ರಯಾಣಿಕರ ಸಂಖ್ಯೆ ತೀರಾ ಕಡಿಮೆಯಾಗಿದೆ. ಜೊತೆಗೆ ಸರ್ಕಾರಿ ಬಸ್‌ಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ತೀರಾ ಅನಿವಾರ್ಯವಿದ್ದವರು ಮಾತ್ರ ಖಾಸಗಿ ಬಸ್‌ಗಳತ್ತ ಮುಖ ಮಾಡುತ್ತಿದ್ದಾರೆ. ಇದೆಲ್ಲ ಕಾರಣಗಳಿಂದ ಖಾಸಗಿ ಬಸ್ ಮಾಲೀಕರು ಸಂಕಷ್ಟಕ್ಕೀಡಾಗುತ್ತಿದ್ದಾರೆ.












Click it and Unblock the Notifications