ಹೆಚ್ಚುತ್ತಿರುವ ಕೊರೊನಾ ಕೇಸ್; ಮೈಸೂರಿನಲ್ಲಿ 2ನೇ ಕೋವಿಡ್ ಆಸ್ಪತ್ರೆಗೆ ಚಿಂತನೆ
ಮೈಸೂರು, ಜೂನ್ 27: ಮೈಸೂರಿನಲ್ಲಿ ದಿನೇ ದಿನೇ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 2ನೇ ಕೋವಿಡ್ ಆಸ್ಪತ್ರೆ ಆರಂಭ ಮಾಡಲು ಯೋಜಿಸಲಾಗಿದೆ.
ಉದ್ಘಾಟನೆಯಾಗದ ತಾಯಿ ಮಕ್ಕಳ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಆರಂಭಿಸಲು ಚಿಂತನೆ ನಡೆದಿದೆ. ಹೀಗಾಗಿ ಮೈಸೂರಿನ ತುಳಸಿ ದಾಸಪ್ಪ ತಾಯಿ ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ಕಾಮಗಾರಿಯನ್ನು ಇಂದು ಸಂಸದ ಪ್ರತಾಪ್ ಸಿಂಹ ಪರಿಶೀಲನೆ ನಡೆಸಿದರು.
ಮೈಸೂರಿನಲ್ಲಿ ಸೋಂಕು ಸಾಮುದಾಯಿಕವಾಗಿ ಹರಡಬಹುದು; ಜಿಲ್ಲಾಧಿಕಾರಿ ಕಳವಳ
ಈ ಆಸ್ಪತ್ರೆಯ ಕಾಮಗಾರಿಯು ಮುಕ್ತಾಯ ಹಂತದಲ್ಲಿದ್ದು, ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಆಸ್ಪತ್ರೆಯನ್ನು ಬಳಸಿಕೊಳ್ಳಲು ಚಿಂತನೆ ಮಾಡಲಾಗಿದೆ. ತ್ವರಿತವಾಗಿ ಕಾಮಗಾರಿ ಮುಗಿಸಲು ಸೂಚನೆ ನೀಡಲಾಗಿದೆ ಎಂದು ಪ್ರತಾಪ್ ಸಿಂಹ ತಿಳಿಸಿದರು. ಇದೇ ಸಂದರ್ಭ ಆಸ್ಪತ್ರೆ ಪರಿಶೀಲನೆಗೆ ಬಂದ ಪ್ರತಾಪ್ ಸಿಂಹ ಅವರಿಗೆ ಸ್ಥಳೀಯ ಜನಪ್ರತಿನಿಧಿಗಳು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು.
"ನಮಗೆಲ್ಲಾ ತಿಳಿಸದೇ ನೀವೇ ಭೇಟಿ ಮಾಡಿದರೆ ಹೇಗೆ, ನಮಗೆಲ್ಲ ಮಾಹಿತಿ ಕೊಡುವವರು ಯಾರು" ಎಂದು ಸ್ಥಳೀಯ ಕಾರ್ಪೊರೇಟರ್ ಹಾಗೂ ಆಸ್ಪತ್ರೆಯ ಸುರಕ್ಷಾ ಕಮಿಟಿ ಸದಸ್ಯರು ಪ್ರಶ್ನಿಸಿದ್ದಾರೆ. ಕಾರ್ಪೊರೇಟರ್ ಹಾಗೂ ಶಾಸಕರ ಗಮನಕ್ಕೆ ಬಾರದೆ ನೀವು ಹೇಗೆ ಹೀಗೆ ಭೇಟಿ ನೀಡುತ್ತೀರಾ? ನಾವೆಲ್ಲ ಯಾಕ್ ಇದ್ದೀವಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಾಹಿತಿ ನೀಡುವುದರಲ್ಲಿ ಗೊಂದಲ ಉಂಟಾಗಿದೆ ಎಂದು ಪ್ರತಾಪ್ ಸಿಂಹ ಸಮಜಾಯಿಷಿ ನೀಡಿದರು.