'ಸೂರಜ್ ದೈವ ಭಕ್ತ': ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ- ಎಚ್‌ಡಿ ರೇವಣ್ಣ ಹೀಗಂದಿದ್ದು ಯಾಕೆ?
ಮೈಸೂರು ಜುಲೈ 2: ಸೂರಜ್ ರೇವಣ್ಣ ದೈವ ಭಕ್ತನಾದರೇ ಪ್ರಜ್ವಲ್ ರೇವಣ್ಣ ಹೇಗೆ? ಎನ್ನುವ ಪ್ರಶ್ನೆ ಎಚ್‌ಡಿ ರೇವಣ್ಣ ಅವರ ಮಾತಿನಿಂದ ಮೂಡಿದೆ. ಇಂದು ಮಾಜಿ ಸಚಿವ ಎಚ್‌ಡಿ ರೇವಣ್ಣ ಅವರು ತಮ್ಮಿಬ್ಬರು ಮಕ್ಕಳ ಬಗ್ಗೆ ಮಾತನಾಡಿದ ರೀತಿ ಕೆಲ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಎಚ್‌ಡಿ ರೇವಣ್ಣ ಅವರು, 'ನಾನು ಸದ್ಯ ಪ್ರಜ್ವಲ್ ರೇವಣ್ಣನನ್ನು ನೋಡಲು ಹೋಗುವುದಿಲ್ಲ. ನಾನು ಪ್ರಜ್ವಲ್ ಭೇಟಿಗೆ ಹೋದರೆ ಏನೋ ಹೇಳಿಕೊಟ್ಟ ರೇವಣ್ಣ ಅಂತಾರೆ. ಹೀಗಾಗಿ ನಾನು ಪ್ರಜ್ವಲ್ ಭೇಟಿ ಮಾಡುವುದಿಲ್ಲ' ಎಂದು ಹೇಳಿದರು.

ಹಾಗೇ ಸೂರಜ್ ರೇವಣ್ಣ ಅವರನ್ನು ಭೇಟಿ ಮಾಡಲು ಹೋಗಿದ್ರಾ ಎಂಬ ಪ್ರಶ್ನೆಗೆ ಉತ್ತರಿಸಿದ ರೇವಣ್ಣ, 'ಸೂರಜ್ ದೈವ ಭಕ್ತ. ಆತ ಸಲೀಸಾಗಿ ಜೈಲಿನಿಂದ ಹೊರಬರುತ್ತಾನೆ. ಸದ್ಯ ಯಾವ ವಿಚಾರಗಳನ್ನೂ ನಾನು ಮಾತನಾಡುವುದಿಲ್ಲ. ಎಲ್ಲವೂ ನ್ಯಾಯಾಲಯದ ಮುಂದೆ ಇದೆ. ಎಲ್ಲವೂ ಮುಗಿಯಲಿ, ಆಮೇಲೆ ಎಲ್ಲವನ್ನೂ ಎಳೆ ಎಳೆಯಾಗಿ ಬಿಚ್ಚಿಡುತ್ತೇನೆ. ಎಲ್ಲದಕ್ಕೂ ಕಾಲ ಉತ್ತರ ನೀಡಲಿದೆ. ನಾನು ಯಾವುತ್ತೂ ಯಾವುದಕ್ಕೂ ಹೆದರುವುದಿಲ್ಲ' ಎಂದು ರೇವಣ್ಣ ಹೇಳಿದ್ದಾರೆ.
ಪ್ರಜ್ವಲ್ ರೇವಣ್ಣ ಅವರ ಬಗ್ಗೆ ಮಾತನಾಡುವಾಗ ಅವರನ್ನು ರೇವಣ್ಣ ಭೇಟಿ ಮಾಡಲು ತೆರಳುವುದಿಲ್ಲ ಎಂದಷ್ಟೇ ಹೇಳಿದರು. ಆದರೆ ಸೂರಜ್ ರೇವಣ್ಣ ಅವರ ಬಗ್ಗೆ ಕೇಳಿದಾಗ ಅವರು ಹೇಳಿದ್ದು, ಸೂರಜ್ ದೈವ ಭಕ್ತ ಎಂದು. ಹಾಗಾದರೆ ಸೂರಜ್ ದೈವ ಭಕ್ತನಾದರೆ ಪ್ರಜ್ವಲ್ ದೈವ ಭಕ್ತರಲ್ಲವೇ? ಅವರು ದೇವರನ್ನು ನಂಬುವುದಿಲ್ಲವೇ? ಪ್ರಜ್ವಲ್ ಸಲೀಸಾಗಿ ಹೊರಬರುವುದಿಲ್ಲವೇ? ಎನ್ನುವ ಪ್ರಶ್ನೆಗಳು ಉದ್ಬವಿಸಿವೆ.
ಸಾಮಾನ್ಯವಾಗಿ ಎಚ್‌ಡಿ ರೇವಣ್ಣ ಆಧ್ಯಾತ್ಮದಲ್ಲಿ ಹೆಚ್ಚು ನಂಬಿಕೆ ಉಳ್ಳವರು. ಹೋದಲ್ಲಿ ಬಂದಲ್ಲಿ ಜೊತೆಯಲ್ಲಿ ನಿಂಬೆಹಣ್ಣು ಇಟ್ಟುಕೊಂಡು ಓಡಾಡುವ ರೇವಣ್ಣ ಎಲ್ಲವನ್ನೂ ದೇವರ ಮೇಲೆ ಬಿಡುತ್ತಾರೆ. ಸದ್ಯ ನಡೆಯುವ ಘಟನೆಯಿಂದ ದೇವರು ಕಾಪಾಡುತ್ತಾನೆ ಎಂದೇ ಅವರು ನಂಬಿದ್ದಾರೆ.

ನಮಗೆ ದೇವರು ಬಿಟ್ಟರೆ ಇನ್ಯಾರು ಗತ ಎಂದು ಮಾತು ಆರಂಭಿಸಿದ ರೇವಣ್ಣ, 'ಸೋಮವಾರ ನನ್ನ ಪತ್ನಿ ಮಗನನ್ನು ನೋಡಿಕೊಂಡು ಬಂದಿದ್ದಾರೆ. ಮಗ ಅಲ್ವಾ ಮನಸ್ಸು ಸೆಳೆಯುತ್ತೆ ಹೀಗಾಗಿ ಹೋಗಿದ್ದಾರೆ ಅಷ್ಟೇ. ತಾಯಿ-ಮಗ ಏನು ಮಾತನಾಡಿದ್ದಾರೆ ಎಂದು ನನಗೆ ಗೊತ್ತಿಲ್ಲ. ನಾನು ಅವರಿಗೆ ಕೇಳಿಲ್ಲ' ಎಂದರು.
ಮಾಜಿ ಸಚಿವ ಎಚ್‌ಡಿ ರೇವಣ್ಣ ಅವರ ಇಬ್ಬರೂ ಪುತ್ರರು ಜೈಲಿನಲ್ಲಿದ್ದಾರೆ. ಪ್ರಜ್ವಲ್ ರೇವಣ್ಣ ಅವರು ಅತ್ಯಾಚಾರ ಪ್ರಕರಣದಲ್ಲಿ ಹಾಗೂ ಸೂರಜ್ ರೇವಣ್ಣ ಅವರು ಅಸಹಜ ಲೈಂಗಿಕ ಆರೋಪದಡಿ ಜೈಲುವಾಸ ಅನುಭವಿಸುತ್ತಿದ್ದಾರೆ. ಇದರಿಂದ ಸಹಜವಾಗಿ ನೋವಿನಲ್ಲಿರುವ ಎಚ್‌ಡಿ ರೇವಣ್ಣ ಪ್ರಜ್ವಲ್ ರೇವಣ್ಣ ಅವರನ್ನು ಸದ್ಯಕ್ಕೆ ನೋಡಲು ಹೋಗುವುದಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಸೂರಜ್ ರೇವಣ್ಣ ದೈವ ಭಕ್ತ. ಸುಲಭವಾಗಿ ಹೊರಬರುತ್ತಾರೆ ಎಂದು ಹೇಳಿದರು.
ರೇವಣ್ಣ ಮಾತಿನಲ್ಲಿ ಪ್ರಜ್ವಲ್ ರೇವಣ್ಣ ಸುಲಭವಾಗಿ ಹೊರ ಬರಲು ಆಗುವುದಿಲ್ಲ. ಆದರೆ ಸೂರಜ್ ಸುಲಭವಾಗಿ ಹೊರಬರುತ್ತಾರೆ ಎನ್ನುವುದು ಸ್ಪಷ್ಟವಾಗಿತ್ತು. ಅಲ್ಲದೆ ರೇವಣ್ಣ ಅವರ ಮಾತಿನಲ್ಲಿ ಒಬ್ಬ ಮಗ ದೈವ ಭಕ್ತನಲ್ಲ, ಮತ್ತೊಬ್ಬ ಮಗ ದೈವ ಭಕ್ತ ಎಂದಿರುವುದು ಸ್ಪಷ್ಟವಾಗಿತ್ತು. ಪ್ರಜ್ವಲ್ ದೈವ ಭಕ್ತನಾಗದೇ ಇದ್ದಿದ್ದರಿಂದ ಜೈಲಿನಿಂದ ಸುಲಭವಾಗಿ ಹೊರಬರಲು ಆಗುವುದಿಲ್ಲ ಎಂಬರ್ಥದಲ್ಲಿ ರೇವಣ್ಣ ಹೇಳಿರುವುದು ಕಂಡುಬಂದಿದೆ. ಇದರಿಂದ ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಹಚ್ಚಿದರಾ ರೇವಣ್ಣ ಎಂಬ ಪ್ರಶ್ನೆ ಮೂಡಿದೆ. ಒಟ್ಟಿನಲ್ಲಿ ಇಬ್ಬರೂ ಮಕ್ಕಳನ್ನು ಹೊರ ತರುವ ಪ್ರಯತ್ನದಲ್ಲಿ ರೇವಣ್ಣ ಇದ್ದು ಮೊದಲು ದೈವ ಭಕ್ತ ಹೊರಬರುತ್ತಾನಾ? ಅಥವಾ ಪ್ರಜ್ವಲ್ ಹೊರಬರುತ್ತಾರಾ? ಕಾದು ನೋಡಬೇಕಿದೆ.












Click it and Unblock the Notifications