ರಾಜಕೀಯ ಪಕ್ಷಗಳಿಂದ ಸೌಹಾರ್ದತೆಗೆ ಧಕ್ಕೆ: ಪ್ರಕಾಶ್ ರೈ
ಮೈಸೂರು, ಜನವರಿ 30 : ರಾಜಕೀಯ ಪಕ್ಷಗಳು ಮನುಷ್ಯರ ನಡುವಿನ ಸೌಹಾರ್ದತೆಯನ್ನು ಹಾಳು ಮಾಡಲು ಹೊರಟಿವೆ ಎಂದು ನಟ ಪ್ರಕಾಶ್ ರೈ ದೂರಿದರು.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ, ಕ'ರ್ನಾಟಕ ಸೌಹಾರ್ದ ಪರಂಪರೆ ಉಳಿಸೋಣ' ಎಂಬ ಧ್ಯೇಯದೊಂದಿಗೆ ಮೈಸೂರಿನಲ್ಲಿ ಸೌಹಾರ್ದತೆಗಾಗಿ ಕರ್ನಾಟಕ ವತಿಯಿಂದ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆಯಲ್ಲಿ ಮಾತನಾಡಿರು. 'ರಾಜ್ಯದ ಜನರು ಬೇಸತ್ತು ಹೋಗಿದ್ದಾರೆ. ರಾಜಕೀಯ ಪಕ್ಷಗಳು ಸೌಹಾರ್ದತೆಯನ್ನು ಹಾಳು ಮಾಡಲು ಹೊರಟಿವೆ. ಸೌಹಾರ್ದತೆ ನಮ್ಮ ಬೆನ್ನೆಲುಬು ಜನರ - ಜನರ ಮಧ್ಯವೇ ಸೌಹಾರ್ದತೆಯಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ' ಎಂದು ಕಿಡಿ ಕಾರಿದರು.
"ಇಂತಹ ರಾಜಕೀಯ ಪಕ್ಷಗಳಿಗೆ ಜನರು ಉತ್ತರ ಕೊಡುತ್ತಾರೆ. ಪ್ರತಿಯೊಬ್ಬ ಪ್ರಜೆಯು ತಾನೊಬ್ಬ ಪ್ರಜೆಯಾಗಿ ಉಳಿದು ಸ್ವತಂತ್ರವಾಗಿ ಇರಲು ಅವಕಾಶ ಮಾಡಿಕೊಡಬೇಕು. ಯಾರು ಕೋಮುಗಲಭೆ ಸೃಷ್ಟಿಸಿ ರಾಜಕಾರಣ ಮಾಡುತ್ತಾರೋ ಅವರು ಗೆಲ್ಲಲು ಸಾಧ್ಯವಿಲ್ಲ. ಯಾರು ಉತ್ತಮ ಕೆಲಸ ಮಾಡುತ್ತಾರೋ ಅವರು ಗೆಲ್ಲುತ್ತಾರೆ."

"ರಕ್ತಪಾತ, ಕೊಲೆ, ದರೋಡೆ ಇದನ್ನು ಯಾರೇ ಮಾಡಿದರೂ ತಪ್ಪು ತಪ್ಪೇ. ಈ ಒಂದು ಕರೆಗಾಗಿ ರಾಜ್ಯದುದ್ದಕ್ಕೂ ಜನ ಸೇರುತ್ತಿದ್ದಾರೆ. ಸೌಹಾರ್ದತೆಯನ್ನು ಕೆಡಿಸುವವರಿಗೆ ಇದೊಂದು ದೊಡ್ಡ ಪಾಠ. ಮೌನವಾಗಿರುವ ಜನ ಯಾರೂ ಇದನ್ನ ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ, ಯಾರು ಶಾಂತಿಯನ್ನ ಕದಡುತ್ತಿದ್ದಾರೆ, ಅವರಿಗೆ ಉತ್ತರ ಕೊಡುವ ಸಮಯ ಬಂದಿದೆ ಎಂದು ಮಾರ್ಮಿಕವಾಗಿ ವಾಗ್ದಾಳಿ ನಡೆಸಿದರು. "
ನಮಗೆ ನೆಮ್ಮದಿ ಬೇಕು. ಪ್ರತಿಯೊಬ್ಬ ಪ್ರಜೆಯೂ ಭಯವಿಲ್ಲದೆ ನಿರ್ಭಯವಾಗಿ, ಧೈರ್ಯವಾಗಿ ಪ್ರಶ್ನಿಸುತ್ತ ಪ್ರಜೆಯಾಗಿ ಉಳಿಯುವ ಸ್ವಾತಂತ್ರ್ಯ ಬೇಕು. ಎಲ್ಲರೂ ನಾಯಕರಾಗುವುದು ಬೇಡ. ನಮಗೆ ಜನ ಮುಖ್ಯ. ನಮ್ಮನ್ನ ಪ್ರಜೆಗಳಾಗಿರುವುದಕ್ಕೆ ಬಿಡಿ, ನಮ್ಮ ಕಷ್ಟಗಳನ್ನ ಹೇಳಿಕೊಳ್ಳಲು ಬಿಡಿ, ನಮ್ಮ ಧ್ವನಿಯನ್ನ ಏರಿಸುವುದಕ್ಕೆ ಬಿಡಿ. ಅದು ನಮ್ಮ ಹಕ್ಕು ಎಂದರು.

ಇನ್ನು ಮಾನವ ಸರಪಳಿಯಲ್ಲಿ ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ, ಪ್ರೊ. ಭಗವಾನ್, ದೇವನೂರು ಮಹಾದೇವ, ರಹಮತ್ ತರೀಕೆರೆ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.












Click it and Unblock the Notifications