ಮೈಸೂರು: ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಆರೋಪಿಗೆ ಗುಂಡೇಟು
ಮೈಸೂರು, ಮಾರ್ಚ್ 22: ಸ್ಥಳ ಮಹಜರು ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಮೈಸೂರು ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗುಜ್ಜೇಗೌಡನಪುರ ಗ್ರಾಮದ ಬಳಿ ಘಟನೆ ನಡೆದಿದ್ದು, ಕೇರಳ ಮೂಲದ ಆರೋಪಿ ಆದರ್ಶ್ ಎಂಬಾತನೇ ಗುಂಡೇಟು ತಿಂದು ಆಸ್ಪತ್ರೆಗೆ ದಾಖಲಾದ ಆರೋಪಿ ಎಂದು ಗುರುತಿಸಲಾಗಿದೆ.
ದರೋಡೆ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಮಹಜರ್ ನಡೆಸುವ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿ ಆಗಲು ಯತ್ನಿಸಿದ ಹಿನ್ನಲೆ ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿ ಹಿಡಿದಿದ್ದಾರೆ. ಆರೋಪಿ ನಡೆಸಿದ ದಾಳಿಯಲ್ಲಿ ಸಬ್ ಇನ್ಸ್ಪೆಕ್ಟರ್ ಹಾಗೂ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.

ಕೆಲವು ದಿನಗಳ ಹಿಂದೆ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಆರೋಹಳ್ಳಿ ಬಳಿ ಹಾಡಹಗಲೇ ಕೇರಳ ಮೂಲದ ಉದ್ಯಮಿಯನ್ನು ಅಡ್ಡಗಟ್ಟಿ ದರೋಡೆ ನಡೆಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ 3 ಆರೋಪಿಗಳನ್ನು ಬಂಧಿಸಿದ್ದರು. ಇನ್ನೂ ಮೂವರು ಆರೋಪಿಗಳನ್ನು ಕೇರಳದಲ್ಲಿ ಬಂಧಿಸಲಾಗಿದ್ದು ಈ ಪೈಕಿ ಆದರ್ಶ್ ಸಹ ಒಬ್ಬ.
ದರೋಡೆ ನಡೆದ ಸ್ಥಳದ ಬಳಿ ಪೊಲೀಸರಿಗೆ ಕ್ವಾಲಿಸ್ ಕಾರು ದೊರೆತಿತ್ತು. ಇದರ ಮಾಲೀಕ ಆದರ್ಶ್ ಎಂದು ಪತ್ತೆ ಹಚ್ಚಲಾಗಿತ್ತು. ಆದರ್ಶ್ ಹಾಗೂ ಸಂಗಡಿಗರ ಬಂಧನಕ್ಕೆ ಸಾಕಷ್ಟು ಕಸರತ್ತು ನಡೆಸಿದ್ದ ಜಿಲ್ಲಾ ಪೊಲೀಸರಿಗೆ ಬಂಧನ ಸವಾಲಾಗಿತ್ತು. ಕೊನೆಗೂ ಆದರ್ಶ್ ಪೊಲೀಸರ ಬಲೆಗೆ ಬಿದ್ದಿದ್ದ. ಈತನನ್ನು ಕಾರು ದೊರೆತ ಸ್ಥಳಕ್ಕೆ ಮಹಜರ್ ನಡೆಸುವ ಸಲುವಾಗಿ ಜಯಪುರ ಸಬ್ ಇನ್ಸ್ಪೆಕ್ಟರ್ ಪ್ರಕಾಶ್, ಪಿರಿಯಾಪಟ್ಟಣ ಸಿಪಿಐ ದೀಪಕ್ ಹಾಗೂ ಇಬ್ಬರು ಸಿಬ್ಬಂದಿಗಳು ಕರೆದೊಯ್ದಿದ್ದಾರೆ.
ಕಾರು ಪತ್ತೆಯಾದ ಸ್ಥಳವನ್ನು ಆದರ್ಶ್ ಗುರುತಿಸಿದ್ದಾನೆ. ನಂತರ ಮೂತ್ರವಿಸರ್ಜನೆ ನೆಪವೊಡ್ಡಿ ರಸ್ತೆ ಬದಿಯಲ್ಲಿ ನಿಂತಿದ್ದಾನೆ. ಈ ವೇಳೆ ಯಾರೋ ಕುಡಿದು ಬಿಸಾಕಿದ್ದ ಬಿಯರ್ ಬಾಟಲಿ ಈತನ ಕೈಗೆ ಸಿಕ್ಕಿದೆ. ಬಾಟಲಿಯನ್ನು ಹೊಡೆದು ಸಬ್ ಇನ್ಸ್ಪೆಕ್ಟರ್ ಪ್ರಕಾಶ್ ಹಾಗೂ ಸಿಬ್ಬಂದಿ ಹರೀಶ್ ಮೇಲೆ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ.
ಪ್ರಕಾಶ್ ಸಾಕಷ್ಟು ಬಾರಿ ಶರಣಾಗುವಂತೆ ಮನವಿ ಮಾಡಿದರೂ ದಾಳಿ ನಡೆಸಲು ಮುಂದಾಗಿದ್ದಾನೆ. ಈ ವೇಳೆ ಜೊತೆಯಲ್ಲಿದ್ದ ಇನ್ಸ್ಪೆಕ್ಟರ್ ದೀಪಕ್ ಆತ್ಮರಕ್ಷಣೆಗಾಗಿ ತಮ್ಮಲ್ಲಿದ್ದ ಪಿಸ್ತೂಲ್ ನಿಂದ ಆದರ್ಶ್ ಮೇಲೆ ಗುಂಡು ಹಾರಿಸಿದ್ದಾರೆ. ಪರಿಣಾಮ ಆದರ್ಶ್ ಎಡಗಾಲಿಗೆ ಗುಂಡು ತಗುಲಿ ಬಿದ್ದಿದ್ದಾನೆ. ಗಾಯಗೊಂಡ ಪ್ರಕಾಶ್ ಹಾಗೂ ಹರೀಶ್ ಮತ್ತು ಆದರ್ಶ್ ಅವರನ್ನು ಚಿಕಿತ್ಸೆಗಾಗಿ ಕೆ.ಆರ್.ಆಸ್ಪತ್ರೆಗೆ ಸೇರಿಸಲಾಗಿದೆ. ಪ್ರಕಾಶ್, ಹರೀಶ್ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಗುಂಡು ತಗುಲಿದ ಆದಶ್‌ನನ್ನು ಮೇಟಗಳ್ಳಿಯಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ನಡೆದ ಸ್ಥಳಕ್ಕೆ ಎಸ್‌ಪಿ ವಿಷ್ಣುವರ್ಧನ್, ಅಡಿಷನಲ್ ಎಸ್‌ಪಿ ಮಲ್ಲಿಕ್, ಡಿವೈಎಸ್‌ಪಿ ಕರೀಂ ರಾವುತರ್, ಸರ್ಕಲ್ ಇನ್ಸ್ಪೆಕ್ಟರ್ ಶೇಖರ್ ಹಾಗೂ ಸಿಬ್ಬಂದಿ ಭೇಟಿ ಪರಿಶೀಲನೆ ನಡೆಸಿದರು. ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications