ಪೊಲೀಸ್ ವಶದಲ್ಲಿರುವ ವಿಷಪ್ರಸಾದ ಆರೋಪಿಗಳ ಟ್ರೀಟ್ ಮೆಂಟ್ ಹೇಗಿದೆ ?
ಮೈಸೂರು, ಡಿಸೆಂಬರ್ 21 : ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮನ ದೇವಾಲಯದಲ್ಲಿ ಡಿ.14ರಂದು ಪ್ರಸಾದಕ್ಕೆ ವಿಷ ಬೆರೆಸಿ 15 ಜನರ ಸಾವಿಗೆ ಕಾರಣರಾಗಿದ್ದ ನಾಲ್ವರು ಪ್ರಮುಖ ಆರೋಪಿಗಳ ಪೈಕಿ ಮೂವರನ್ನು ಡಿವೈಎಸ್ ಪಿ ಪುಟ್ಟಮಾದಯ್ಯ ನಿನ್ನೆ( ಗುರುವಾರ ) ದೇವಾಲಯಕ್ಕೆ ಕರೆತಂದು ಸ್ಥಳ ಪರಿಶೀಲನೆ ನಡೆಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಮಧ್ಯಾಹ್ನದವರೆಗೆ ರಾಮಾಪುರ ಠಾಣೆಯಲ್ಲಿಯೇ ನಾಲ್ವರೂ ಆರೋಪಿಗಳ ವಿಚಾರಣೆ ನಡೆಸಿದ ಡಿವೈಎಸ್ಪಿ ಪುಟ್ಟಮಾದಯ್ಯ ನೇತೃತ್ವದಲ್ಲಿ ಒಂದನೇ ಆರೋಪಿ ಇಮ್ಮಡಿ ಮಹದೇವಸ್ವಾಮಿಯನ್ನು ಠಾಣೆಯಲ್ಲಿಯೇ ಬಿಟ್ಟು ಉಳಿದ ಮೂವರು ಆರೋಪಿಗಳಾದ ದೇಗುಲದ ವ್ಯವಸ್ಥಾಪಕ ಮಾದೇಶ, ಆತನ ಪತ್ನಿ ಅಂಬಿಕಾ, ಸುಳ್ವಾಡಿ ನಾಗರಕಲ್ಲಿನ ಅರ್ಚಕ ದೊಡ್ಡಯ್ಯ ತಂಬಡಿ ಅವರನ್ನು ಸಂಜೆ 4 ಗಂಟೆಗೆ ಘಟನಾ ಸ್ಥಳಕ್ಕೆ ಕೆರೆದೊಯ್ದರು.
ಅಂಬಿಕಾಳನ್ನು ವಾಹನದಲ್ಲೇ ಇರಿಸಿ, ಮಾದೇಶ ಹಾಗೂ ದೊಡ್ಡಯ್ಯನನ್ನು ಅರ್ಧ ಗಂಟೆ ಕಾಲ ಅಡುಗೆ ಮನೆಯಲ್ಲೇ ವಿಚಾರಣೆ ಮಾಡಲಾಯಿತು. ಇದೊಂದು ವಿಶೇಷ ಪ್ರಕರಣವಾಗಿದ್ದು, ಆರೋಪಿಗಳನ್ನು ಕೂಲಂಕಷವಾಗಿ ವಿಚಾರಣೆ ಮಾಡಬೇಕಿದೆ. ಸಂದೇಹಗಳನ್ನು ಖಚಿತಪಡಿಸಿಕೊಳ್ಳಲು ಈ ಮಹಜರು ಮಾಡಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಮುಂದೆ ಓದಿ...

4 ಆರೋಪಿಗಳಿಗೆ 3 ಸೆಲ್
ರಾಮಾಪುರ ಪೊಲೀಸ್ ಠಾಣೆಗೆ ಬುಧವಾರ ರಾತ್ರಿ ಸುಮಾರು 10.30ಕ್ಕೆ ನಾಲ್ವರೂ ಆರೋಪಿಗಳನ್ನು ಕರೆತರಲಾಯಿತು. ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿ ಮತ್ತು ಅಂಬಿಕಾಳನ್ನು ಪ್ರತ್ಯೇಕ ಸೆಲ್ ನಲ್ಲಿ ಇರಿಸಿದರೆ, ಮತ್ತಿಬ್ಬರು ಆರೋಪಿಗಳಾದ ಮಾದೇಶ ಮತ್ತು ದೊಡ್ಡಯ್ಯನನ್ನು ಒಂದೇ ಸೆಲ್ ನಲ್ಲಿ ಇರಿಸಲಾಯಿತು.

ಸೆಲ್‍ನಲ್ಲಿಯೇ ಶಿವಪೂಜೆ
ಇಮ್ಮಡಿ ಮಹದೇವಸ್ವಾಮಿ ಗುರುವಾರ ಬೆಳಿಗ್ಗೆ 6.30ಕ್ಕೆ ನಿದ್ದೆಯಿಂದ ಎದ್ದು, 8.30ರ ತನಕ ಪುಸ್ತಕ ಓದಿ, ಬಳಿಕ ಠಾಣೆಯಲ್ಲಿಯೇ ಸ್ನಾನ ಮುಗಿಸಿ ಸೆಲ್‍ನಲ್ಲಿಯೇ ಶಿವಪೂಜೆ ನೆರವೇರಿಸಿದರು. ಈತನಿಗೆ ಅಧಿಕ ರಕ್ತದೊತ್ತಡ ಇದ್ದು, 2 ಗಂಟೆಗೊಮ್ಮೆ ಅವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಸಮಯಕ್ಕೆ ಸರಿಯಾಗಿ ಮಾತ್ರೆಗಳನ್ನು ನೀಡಲಾಗುತ್ತಿದೆ. ರಾಮಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ತಪಾಸಣೆಗೆ ಒಳಪಡಿಸಲಾಗುತ್ತಿದೆ.

ಮಾದೇಶನಿಗೆ ಉಪ್ಪಿಟ್ಟು
ಆರೋಪಿ ಮಾದೇಶನಿಗೆ ಸಕ್ಕರೆ ಕಾಯಿಲೆ ಇರುವ ಕಾರಣ ಗುರುವಾರ ಬೆಳಿಗ್ಗೆ ಆತನಿಗೆ ಉಪ್ಪಿಟ್ಟು ಉಪಾಹಾರ ನೀಡಿದರೆ, ಉಳಿದ ಮೂವರಿಗೂ ರೈಸ್ ಬಾತ್ ನೀಡಲಾಯಿತು. ಈ ವೇಳೆ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಆರೋಪಿಗಳನ್ನು ಭದ್ರತೆಯಲ್ಲಿ ಕರೆತರಲಾಗಿತ್ತು. ಈ ವೇಳೆ ಸುಳ್ವಾಡಿಯಲ್ಲಿ ಜನಸ್ತೋಮವೇಸೇರಿತ್ತು. ಎಲ್ಲರನ್ನೂ ದೇವಸ್ಥಾನದಿಂದ ಬಲು ದೂರದಲ್ಲೇ ತಡೆಯಲಾಗಿತ್ತು.

ಅವಧಿ ವಿಸ್ತರಣೆ ಆಗುತ್ತದೆಯೇ?
ಕೊಳ್ಳೇಗಾಲ ಜೆಎಂಎಫ್ ಸಿ ನ್ಯಾಯಾಧೀಶರ ಮುಂದೆ ಈ ನಾಲ್ವರೂ ಆರೋಪಿಗಳನ್ನು ಬುಧವಾರ ರಾತ್ರಿ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ 4 ದಿನ ತಮ್ಮ ಕಸ್ಟಡಿಗೆ ಪೊಲೀಸರು ಈಗಾಗಲೇ ತೆಗೆದುಕೊಂಡಿದ್ದಾರೆ. ಇನ್ನಷ್ಟು ವಿಚಾರಣೆಗೆ ಕಾಲಾವಕಾಶ ವಿಸ್ತರಿಸುವಂತೆ ನ್ಯಾಯಾಧೀಶರ ಬಳಿ ಕೋರಿಕೆ ಸಲ್ಲಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಇಂತಹ ಪ್ರಕರಣಗಳಲ್ಲಿ ಇದೊಂದು ಸಹಜ ಪ್ರಕ್ರಿಯೆ ಹಾಗೂ ಬೆಳವಣಿಗೆಯಾಗಿದೆ.












Click it and Unblock the Notifications