ರಸ್ತೆ ಮೇಲೆ ಒಕ್ಕಣೆ ಮಾಡುವ ರೈತರ ಮೇಲೆ ಕ್ರಿಮಿನಲ್ ಕೇಸು!
ಮೈಸೂರು, ಜನವರಿ 18: ಈಗ ಒಕ್ಕಣೆ ಸಮಯವಾಗಿದ್ದು ರೈತರು ಸಾರ್ವಜನಿಕ ರಸ್ತೆಗಳ ಮೇಲೆ ಬೆಳೆಗಳನ್ನು ಒಕ್ಕಣೆ ಮಾಡಬಾರದು ಎಂದು ಲೋಕೋಪಯೋಗಿ ಇಲಾಖೆ ಎಚ್ಚರಿಕೆ ನೀಡಿದೆ. ನಿಯಮ ಉಲ್ಲಂಘನೆ ಮಾಡಿದರೆ ಕ್ರಿಮಿನಲ್ ಕೇಸು ದಾಖಲಿಸುವುದಾಗಿ ತಿಳಿಸಲಾಗಿದೆ.
ಪಿರಿಯಾಪಟ್ಟಣ ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಕುಮಾರ್ ಈ ಕುರಿತು ಹೇಳಿಕೆ ನೀಡಿದ್ದಾರೆ. "ರೈತರು ಒಂದು ವೇಳೆ ಸೂಚನೆ ಉಲ್ಲಂಘಿಸಿ ಒಕ್ಕಣೆ ಮಾಡಿದರೆ ಮುಲಾಜಿಲ್ಲದೆ ಅಂತಹವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು" ಎಂದು ಹೇಳಿದ್ದಾರೆ.
"ಸಾರ್ವಜನಿಕ ರಸ್ತೆಗಳಲ್ಲಿ ಒಕ್ಕಣೆ ಮಾಡುವುದರಿಂದ ವಾಹನ ಸಂಚಾರಕ್ಕೆ ತೊಂದರೆ ಆಗುತ್ತದೆ. ಅನೇಕ ಬಾರಿ ಒಣಗಿದ ಬೆಳೆಯು ವಾಹನಗಳ ಸೈಲೆನ್ಸರ್‌ಗೆ ತಗುಲಿ ಬೆಂಕಿ ಹೊತ್ತಿಕೊಂಡು ವಾಹನಗಳೇ ಉರಿದು ಹೋಗಿವೆ. ಅಲ್ಲದೆ ವಾಹನದಲ್ಲಿದ್ದವರೂ ಸಾವನ್ನಪ್ಪಿದ ಘಟನೆಗಳೂ ನಡೆದಿವೆ" ಎಂದು ಕುಮಾರ್ ತಿಳಿಸಿದ್ದಾರೆ.

ಆದ್ದರಿಂದ, ರೈತರು ರಸ್ತೆಯ ಮೇಲೆ ಒಕ್ಕಣೆ ಮಾಡಬಾರದು ಎಂದು ಸೂಚನೆ ನೀಡಲಾಗಿದೆ. ರೈತರು ಒಕ್ಕಣೆ ಮಾಡುವುದು ಕಂಡು ಬಂದರೆ ವಾಹನ ಸವಾರರು, ಸಾರ್ವಜನಿಕರು ಇಲಾಖೆಗೆ ಮಾಹಿತಿ ನೀಡಬೇಕೆಂದು ಮನವಿ ಮಾಡಲಾಗಿದೆ.
ಪಿರಿಯಾಪಟ್ಟಣ ತಾಲೂಕಿನಲ್ಲಿ ಬಹುತೇಕ ಕಡೆಗಳಲ್ಲಿ ರೈತರು ಹುರುಳಿ, ರಾಗಿ, ಜೋಳ, ಭತ್ತ, ಅಲಸಂದೆ ಮುಂತಾದ ಬೆಳೆಗಳನ್ನು ಒಣಗಿಸಲು ರಸ್ತೆಗಳಲ್ಲಿ ಹರಡುತ್ತಾರೆ. ಇದರಿಂದ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಹಾಗೂ ಸಾರ್ವಜನಿಕರಿಗೆ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ.
ಬಿರು ಬಿಸಿಲಿನ ತಾಪಕ್ಕೆ ಕಾದ ರಸ್ತೆಗಳ ಮೇಲೆ ಬೆಳೆಗಳ ಒಕ್ಕಣೆ ಮಾಡುವುದರಿಂದ ಸಂಚರಿಸುವ ವಾಹನಗಳಿಗೆ ಬೇಗನೆ ಬೆಂಕಿ ಹೊತ್ತಿಕೊಂಡು ಪ್ರಾಣಾಪಾಯವಾಗುವ ಸಂಭವವಿರುತ್ತದೆ. ಆದ್ದರಿಂದ, ರೈತರು ಹೊಲಗಳಲ್ಲಿಯೇ ಬೆಳೆಗಳ ಒಕ್ಕಣೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.












Click it and Unblock the Notifications