ವರಮಹಾಲಕ್ಮಿ ಹಬ್ಬಕ್ಕೂ ರೇಷ್ಮೆ ಸೀರೆ ಡಿಸ್ಕೌಂಟ್ ಆಫರ್ ಇಲ್ಲ
ಮೈಸೂರು, ಆಗಸ್ಟ್ 23 : ಸಚಿವ ಸಾರಾ ಮಹೇಶ್ ರವರ ಕನಸಿನ ಯೋಜನೆಯಾದ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಮಹಿಳೆಯರಿಗೆ ಕಡಿಮೆ ದರದಲ್ಲಿ ಮೈಸೂರು ಸಿಲ್ಕ್ ಸೀರೆ ನೀಡುವ ಯೋಜನೆಯನ್ನು ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ (ಕೆಎಸ್‍ಐಸಿ ) ತೆಗೆದುಹಾಕಿದೆ.
ಕೊಡಗು ಪ್ರವಾಹ ಪರಿಸ್ಥಿತಿ ಎದುರಾದ ಕಾರಣ ರಿಯಾಯಿತಿ ದರದಲ್ಲಿ ಸೀರೆ ಮಾರಾಟ ಇಲ್ಲ ಎಂದು ಕೆಎಸ್ಐಸಿ ತಿಳಿಸಿದೆ.

ಈ ಹಿನ್ನೆಲೆ ಹಬ್ಬದ ಪ್ರಯುಕ್ತ ರಿಯಾಯಿತಿ ದರದಲ್ಲಿ ಸೀರೆ ಕೊಳ್ಳಲು ಬಂದ ಮಹಿಳೆಯರು ಫಲಕ ನೋಡಿ ನಿರಾಸೆಯಿಂದ ಹಿಂದಿರುಗುತ್ತಿದ್ದಾರೆ.
ಇತ್ತ ಮೈಸೂರಿನಲ್ಲಿ ಸಿಲ್ಕ್ ಸೀರೆಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡದಿರಲು ಆಗ್ರಹಿಸಿ ಸಿಲ್ಕ್ ಸೀರೆ ತಯಾರಿಕಾ ಕಂಪೆನಿಯ ನೌಕರರು ಪತ್ರಿಭಟನೆ ನಡೆಸಿದ್ದಾರೆ.
ರಿಯಾಯಿತಿ ದರದಲ್ಲಿ 10,500 ರೂ. ರೇಷ್ಮೆಸೀರೆಯನ್ನು 4,500 ರೂ.ಗೆ ಗ್ರಾಹಕರು ಕೊಂಡುಕೊಳ್ಳಬಹುದಿತ್ತು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಮೈಸೂರು ಸಿಲ್ಕ್ ಫ್ಯಾಕ್ಟರಿ ನೌಕರರು, ರಿಯಾಯಿತಿ ದರದಲ್ಲಿ ನೀಡಿದರೆ ಫ್ಯಾಕ್ಟರಿಗೆ ಕೋಟ್ಯಂತರ ರೂಪಾಯಿ ನಷ್ಟ ಆಗಲಿದೆ. ಮೊದಲು ರಿಯಾಯಿತಿ ದರದ ಹಣವನ್ನು ಒದಗಿಸಿ. ಆ ಬಳಿಕ ರಿಯಾಯಿತಿ ದರದಲ್ಲಿ ಸೀರೆ ಮಾರಾಟ ಮಾಡಿ ಎಂದು ಪ್ರತಿಭಟನೆ ನಡೆಸಿದರು.
ಈ ಯೋಜನೆಯಿಂದ ಸಂಸ್ಥೆಗೆ 6 ಕೋಟಿ ನಷ್ಟ ಆಗಲಿದೆ. ಹೀಗಾಗಿ ವರಮಹಾಲಕ್ಷ್ಮಿ ಹಬ್ಬದಂದು ರಿಯಾಯಿತಿ ದರದಲ್ಲಿ ಸೀರೆ ಮಾರಾಟ ಮಾಡಲು ನಾವು ಬಿಡುವುದಿಲ್ಲ. ಕಡಿಮೆ ದರದಲ್ಲಿ ಸೀರೆ ಕೊಡುವ ಕ್ರಮವನ್ನು ಕೂಡಲೇ ಕೈ ಬಿಡಬೇಕು. ಇಲ್ಲವಾದರೆ ಫ್ಯಾಕ್ಟರಿ ಮುಚ್ಚಲಿದೆ.
ಇದು ಸರ್ಕಾರಿ ಸಂಸ್ಥೆಯಾಗಿರುವುದರಿಂದ ಈಗಾಗಲೇ 10% ರಿಯಾಯಿತಿ ನೀಡಲಾಗುತ್ತಿದೆ. ಕೂಡಲೇ ಈ ಯೋಜನೆ ಕೈಬಿಡುವಂತೆ ನೌಕರರು ಆಗ್ರಹಿಸಿದರು.












Click it and Unblock the Notifications