Mysuru Planetarium: ತಾರಾಲಯ ಉದ್ಘಾಟನೆ ಬಗ್ಗೆ ಅಪ್‌ಡೇಟ್ ಕೊಟ್ಟ ನಿರ್ಮಲಾ ಸೀತಾರಾಮನ್
ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಮೈಸೂರು ವಿಶ್ವವಿದ್ಯಾಲಯದ ಜಯಚಾಮರಾಜ ಒಡೆಯರ್ ಉನ್ನತ ಕಲಿಕಾ ಕೇಂದ್ರದ ಆವರಣದಲ್ಲಿ 86 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ವಿಶ್ವದ ಮೊದಲ ಗುಮ್ಮಟಾಕಾರದ ತಾರಾಲಯ ಕಾಮಗಾರಿಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವೀಕ್ಷಿಸಿದರು.
ಕಾಮಗಾರಿ ವೀಕ್ಷಣೆ ಮಾಡಿದ ಬಳಿಕ ಸುದ್ದಿಗಾರ ಜೊತೆ ಮಾತನಾಡಿದ ಅವರು, ಕೋವಿಡ್‌ನಿಂದಾಗಿ ಕಾಮಗಾರಿ ವಿಳಂಬವಾಗಿದ್ದು, 2025ರ ಸೆಪ್ಟೆಂಬರ್ ಒಳಗೆ ಕಾಮಗಾರಿ ಪೂರ್ಣಗೊಳ್ಳುತ್ತದೆ. ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಹಾಗೂ ಮೈಸೂರಿಗೆ ಬರುವ ಪ್ರವಾಸಿಗರು ಚಾಮುಂಡಿದೇವಿ ಬೆಟ್ಟದ ದೇವಸ್ಥಾನಕ್ಕೆ ಹೋಗುತ್ತಾರೆ. ಹೀಗೆ ಬಂದವರು ಒಮ್ಮೆ ತಾರಾಲಯಕ್ಕೂ ಭೇಟಿ ನೀಡಬಹುದು ಎಂದರು.

ಭಾರತೀಯ ಖಗೋಳ ಭೌತಶಾಸ ಸಂಸ್ಥೆಯ 41ನೇ ಪ್ಲಾನಿಟೋರಿಯಂ ಇದಾಗಿದ್ದು, ಇದು ಅತ್ಯಾಧುನಿಕವಾಗಿರಲಿದೆ. ಪ್ರಸ್ತುತ ಎಲ್‌ಇಡಿ ಡೂಮ್‌ನ ಅಭಿವೃದ್ಧಿ ಮತ್ತು ಸಿವಿಲ್ ನಿರ್ಮಾಣ ಕೆಲಸವೂ ಪ್ರಗತಿಯಲ್ಲಿದೆ. 8ಕೆ ರೆಸಲ್ಯೂಶನ್ ಹೊಂದಿರುವ ಕಾಸ್ಮಸ್ ಹೈಟೆಕ್ 15-ಮೀಟರ್ ಎಲ್ಇಡಿ ಗುಮ್ಮಟಾಕಾರದ ವಿಶ್ವದ ಮೊದಲ ಓರೆಯಾದ ತಾರಾಲಯ ಇದಾಗಿದೆ ಎಂದು ಮಾಹಿತಿ ನೀಡಿದರು.
ಎಲ್ಇಡಿ ಗುಮ್ಮಟವನ್ನು ಕೊನಿಕಾ-ಮಿನೋಲ್ಟಾ (ಜಪಾನ್), ಆರ್‌ಎಸ್‌ಎ-ಕಾಸ್ಮಸ್ (ಫ್ರಾನ್ಸ್) ಮತ್ತು ಮೆಸರ್ಸ್ ಆರ್ಬಿಟ್- ಅನಿಮೇಟ್ (ಇಂಡಿಯಾ) ಕನ್ಸೋರ್ಟಿಯಂ ಅಭಿವೃದ್ಧಿಪಡಿಸುತ್ತಿವೆ. ಜತೆಗೆ, ನೆರವು ಸಹ ನೀಡುತ್ತಿವೆ. ತಾರಾಲಯಕ್ಕೆ ಬೇಕಾದ ಬಿಡಿಭಾಗಗಳನ್ನು ಜಪಾನ್, ಫ್ರಾನ್ಸ್‌ನಿಂದ ತರಿಸಿಕೊಳ್ಳಲಾಗುತ್ತಿದೆ. ಕರ್ನಾಟಕ ಸೇರಿದಂತೆ ದೇಶ-ವಿದೇಶಗಳಿಂದಲೂ ಮಕ್ಕಳು ಇಲ್ಲಿಗೆ ಬರಬಹುದು. ಆ ಮೂಲಕ ಆಕಾಶಕಾಯಗಳ ಕೌತುಕಗಳನ್ನು ಕಣ್ತುಂಬಿಕೊಳ್ಳಬಹುದು ಎಂದು ಹೇಳಿದರು.
ಈ ತಾರಾಲಯ ನಿರ್ಮಾಣಕ್ಕೆ ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯಿಂದ 5 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ರಾಜ್ಯದ ಯುವಜನರಲ್ಲಿ ಬಾಹ್ಯಾಕಾಶ ಮತ್ತು ವಿಶ್ವ ವಿಜ್ಞಾನದ ಬಗ್ಗೆ ಆಸಕ್ತಿಯನ್ನು ಬೆಳೆಸಲು ಡಿಜಿಸ್ಟಾರ್ 7 ತಾರಾಲಯವನ್ನು ಸ್ಥಾಪಿಸುವ ಕಲ್ಪನೆಯಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.












Click it and Unblock the Notifications