PM Modi Road Show: ಏಪ್ರಿಲ್ 30ರಂದು ಸಾಂಸ್ಕೃತಿ ನಗರಿಗೆ "ನಮೋ" ಆಗಮನ: ಸ್ವಾಗತಕ್ಕೆ ಸಿದ್ಧತೆ ಹೇಗಿದೆ?-ಮಾಹಿತಿ
ಮೈಸೂರು, ಏಪ್ರಿಲ್, 28: ವಿಧಾನಸಭೆ ಚುನಾವಣೆ ಹಿನ್ನೆಲೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಏಪ್ರಿಲ್ 30ರಂದು ಪ್ರಧಾನಿ ನರೇಂದ್ರ ಮೋದಿ ಅವರು 4 ಕಿಲೋ ಮೀಟರ್ ರೋಡ್ ಶೋ ನಡೆಸಲಿದ್ದಾರೆ ಎಂದು ಶಾಸಕ ಎಸ್.ಎ.ರಾಮದಾಸ್ ಮಾಹಿತಿ ನೀಡಿದರು.
ನಗರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೇಲೂರಿನಿಂದ ಹೆಲಿಪ್ಯಾಡ್ ಮೂಲಕ ಮೋದಿ ಅವರು ಮೈಸೂರಿನ ಮಹಾರಾಜ ಮೈದಾನದಲ್ಲಿ ಬಂದಿಳಿಯಲಿದ್ದಾರೆ. ನಂತರ ಅಲ್ಲಿಂದ ರಸ್ತೆ ಮೂಲಕ ಗನ್‌ಹೌಸ್ ತಲುಪಲಿದ್ದಾರೆ. ಅಲ್ಲಿಂದ 4 ಕಿಲೋ ಮೀಟರ್ ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ನಾದಸ್ವರದ ಮೂಲಕ ಸ್ವಾಗತ
ತೆರೆದ ವಾಹನದ ಮೂಲಕ ನರೇಂದ್ರ ಮೋದಿ ಅವರ ರ್‍ಯಾಲಿ ಗನ್ ಹೌಸ್‌ನಿಂದ ಸಂಜೆ 5:30ರಿಂದ ಪ್ರಾರಂಭವಾಗುತ್ತದೆ. ಈ ವೇಳೆ ಮೈಸೂರಿನ ಸಾಂಪ್ರಾದಾಯಿಕ ಪ್ರತೀಕವಾದ ಮೈಸೂರು ಮಲ್ಲಿಗೆ, ವಿಳ್ಯದೆಲೆ, ಶ್ರೀಗಂಧ ನೀಡಿ ಮೋದಿ ಅವರನ್ನು ಸ್ವಾಗತಿಸಲಾಗುವುದು. 100ಕ್ಕೂ ಹೆಚ್ಚು ಜನ ನಾದ ಸ್ವರದ ಮೂಲಕ ಮೋದಿ ಅವರನ್ನು ಸ್ವಾಗತಿಸಲಿದ್ದಾರೆ. ಹತ್ತಾರು ಕಲಾತಂಡಗಳು ಕೂಡ ಇವರಿಗೆ ಸಾಥ್ ನೀಡಲಿವೆ. ಸಾಂಪ್ರಾದಾಯಿಕ ಉಡುಪುಗಳ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಎಲ್ಲೆಲ್ಲಿ ರ್‍ಯಾಲಿ?
ಗನ್‌ಹೌಸ್‌ನಿಂದ ಸಂಸ್ಕೃತ ಪಾಠಶಾಲೆ, ನಗರ ಪಾಲಿಕೆ ಸರ್ಕಲ್ ಮೂಲಕ ಸಿಟಿ ಬಸ್ ಸ್ಟ್ಯಾಂಡ್, ಕೆ.ಆರ್.ಸರ್ಕಲ್ ಅದೇ ಮಾರ್ಗದಲ್ಲಿ ಸಯ್ಯಾಜಿ ರಾವ್ ರಸ್ತೆ, ಆಯುರ್ವೇದ ಸರ್ಕಲ್, ಹೈವಿ ಸರ್ಕಲ್, ಮಿಲೇನಿಯಂ ಸರ್ಕಲ್‌ವರೆಗೂ ರೋಡ್ ಶೋ ಇರುತ್ತದೆ. ರೋಡ್ ಶೋ ವೇಳೆ 80ರಿಂದ 1 ಲಕ್ಷ ಜನ ಸೇರಿಸಲು ಉದ್ದೇಶಿಸಿದ್ದೇವೆ.
ಹಾಗೆಯೆ ಪ್ರಧಾನಿ ನರೇಂದ್ರ ಮೋದಿ ಅವರು ನಡೆದು ಬಂದ ದಾರಿ ಕೊಡುಗೆ ಸಾರುವ ಕಟೌಟ್, ಸಾಧನೆಗಳನ್ನು ಬಿಂಬಿಸುವ ಬಿತ್ತಿಚಿತ್ರಗಳನ್ನು ತೋರಿಸಲಾಗುತ್ತದೆ. ಅಲ್ಲದೆ ಹಿರಿಯ ನಾಗರಿಕರಿಗೆ ಕೂರಲು ಐದು ಕಡೆ ಸ್ಥಳಾವಕಾಶ ಕಲ್ಪಿಸಲಾಗುತ್ತದೆ.
ಈ ವೇಳೆ ಸಂಸದ ಪ್ರತಾಪ್ ಸಿಂಹ, ಕೆ.ಆರ್.ಕ್ಷೇತ್ರದ ಅಭ್ಯರ್ಥಿ ಟಿ.ಎಸ್.ಶ್ರೀವತ್ಸ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ನಂಜನಗೂಡಿನಲ್ಲಿ ಮೇ 6ಕ್ಕೆ ಸಾರ್ವಜನಿಕ ಸಭೆ
ನಂಜನಗೂಡು ವಿಧಾನಸಭಾ ಕ್ಷೇತ್ರ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಮೇ 6ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ಸಭೆ ನಡೆಸಲಿದ್ದಾರೆ. ಬಿಜೆಪಿಯಿಂದ ಎರಡನೇ ಬಾರಿಗೆ ಹರ್ಷವರ್ಧನ್ ಟಿಕೆಟ್ ಪಡೆದುಕೊಂಡಿದ್ದರೆ, ಕಾಂಗ್ರೆಸ್‌ನಿಂದ ಧ್ರುವನಾರಾಯಣ್ ಅವರ ಪುತ್ರ ದರ್ಶನ್ ಧ್ರುವನಾರಾಯಣ್ ಕಣದಲ್ಲಿದ್ದಾರೆ.
ಸಂಚಾರ ಮಾರ್ಗಗಳಲ್ಲಿ ಬದಲಾವಣೆ
ಇನ್ನು ರಾಷ್ಟ್ರ ನಾಯಕರು ರಾಜ್ಯದ ಕಡೆ ಮುಖ ಮಾಡಿದ್ದು, ಭರ್ಜರಿ ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಚುನಾವಣಾ ಪ್ರಚಾರ ಮಾಡಲು ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 30 ರಂದು ಆಗಮಿಸಲಿದ್ದು, ಈ ಹಿನ್ನೆಲೆ ಹಲವು ಸಂಚಾರ ಮಾರ್ಗಗಳಲ್ಲಿ ಬದಲಾವಣೆ ಮಾಡಲಾಗಿದೆ.
ಚನ್ನಪಟ್ಟಣದ ಮೂಲಕ ಹಾದು ಹೋಗಿರುವ ಮೈಸೂರು-ಬೆಂಗಳೂರು ಹೆದ್ದಾರಿ ಮತ್ತು ಚನ್ನಪಟ್ಟಣ-ಮದ್ದೂರು ಸಂಪರ್ಕಿಸುವ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಇನ್ನು ಸವಾರರ ಅನುಕೂಲಕ್ಕಾಗಿ ಪರ್ಯಾಯ ಮಾರ್ಗಸೂಚಿಯನ್ನು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಶೆಟ್ಟಿಹಳ್ಳಿ ಗ್ರಾಮದ ಸಮೀಪದ ನರೇಂದ್ರ ಮೋದಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಆಗಮನದ ಹಿನ್ನೆಲೆಯಲ್ಲಿ ಏಪ್ರಿಲ್ 30ರಂದು ಬೆಳಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ರಾಮನಗರ ಹಾಗೂ ಮಂಡ್ಯ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಮೈಸೂರು-ಬೆಂಗಳೂರು ಮತ್ತು ಚನ್ನಪಟ್ಟಣ-ಮದ್ದೂರು ಮಾರ್ಗಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.












Click it and Unblock the Notifications