ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೈದ್ಯರ ಪತ್ನಿಗೆ ಕೊರೊನಾ; 7 ತಿಂಗಳಾದರೂ ತೆರೆಯಲೇ ಇಲ್ಲ ಆಸ್ಪತ್ರೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಅಕ್ಟೋಬರ್ 31: ಇಡೀ ಜಗತ್ತನ್ನೇ ಬಾಧಿಸುತ್ತಿರುವ ಕೊರೊನಾ ಸಾಂಕ್ರಾಮಿಕದ ವಿರುದ್ಧ ಸರ್ಕಾರಿ ಸಂಸ್ಥೆಗಳು ಮತ್ತು ಸಾರ್ವಜನಿಕರು ಅಹರ್ನಿಶಿ ಹೋರಾಟ ನಡೆಸುತ್ತಿದ್ದಾರೆ.

ಅದರಲ್ಲೂ ಆರೋಗ್ಯ ಕ್ಷೇತ್ರದ ಸಿಬ್ಬಂದಿ ಈ ಸಾಂಕ್ರಾಮಿಕದ ವಿರುದ್ಧ ವಾರಿಯರ್ ಗಳಾಗಿ ಹೋರಾಡುತ್ತಿದ್ದಾರೆ. ಆದರೆ ನಂಜನಗೂಡು ತಾಲೂಕಿನಲ್ಲಿರುವ ಆಸ್ಪತ್ರೆಯೊಂದು ಇದಕ್ಕೆ ವ್ಯತಿರಿಕ್ತವಾಗಿದೆ. ನಂಜನಗೂಡು ತಾಲೂಕಿನ ಕಾಡಂಚಿನ ಪ್ರದೇಶದ ಜನತೆಯ ಅನುಕೂಲಕ್ಕೆಂದು ಸರ್ಕಾರ ಆಸ್ಪತ್ರೆ ನಿರ್ಮಿಸಿ ಅಲ್ಲಿಗೊಬ್ಬ ವೈದ್ಯರು ಹಾಗೂ ಸಿಬ್ಬಂದಿ ನೇಮಿಸಿದೆ. ಬಡ ಜನತೆ ಸೇವೆ ಮಾಡಲೆಂದೇ ನಿರ್ಮಿಸಿದ ಈ ಆಸ್ಪತ್ರೆ ಕಳೆದ ಏಳು ತಿಂಗಳಿನಿಂದ ಬೀಗ ಹಾಕಿದೆ. ಇದು ತಾಲೂಕಿನ ಕಾಡಂಚಿನಲ್ಲಿರುವ ಈರೇಗೌಡನಹುಂಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಸ್ತುತ ಚಿತ್ರಣ. ಮುಂದೆ ಓದಿ...

 ಏಳು ತಿಂಗಳಾದರೂ ತೆರೆದಿಲ್ಲ ಆಸ್ಪತ್ರೆ

ಏಳು ತಿಂಗಳಾದರೂ ತೆರೆದಿಲ್ಲ ಆಸ್ಪತ್ರೆ

ಕಾಯಿಲೆ ಗುಣಪಡಿಸಿಕೊಳ್ಳಲು ಆಸ್ಪತ್ರೆಗೆ ಬರುವ ರೋಗಿಗಳು ಬಾಗಿಲು ಹಾಕಿರುವುದನ್ನು ನೋಡಿ ದೂರದ ಮಡುವಿನಳ್ಳಿಯತ್ತ ಹೋಗಬೇಕಿದೆ. ತಾಲೂಕಿನಲ್ಲಿ ಕೊರೊನಾ ಹೆಚ್ಚಾಗಿದ್ದಾಗ, ಕಳೆದ ಏಪ್ರಿಲ್ ತಿಂಗಳಲ್ಲಿ ಇಲ್ಲಿ ಕೆಲಸ ಮಾಡುತ್ತಿದ್ದ ವೈದ್ಯರ ಪತ್ನಿಗೆ ಕೊರೊನಾ ಸೋಂಕು ಬಂದಿದೆ ಎಂಬ ಕಾರಣಕ್ಕೆ ಹಾಕಿದ ಆಸ್ಪತ್ರೆಯ ಬೀಗ ಮಾತ್ರ ಏಳು ತಿಂಗಳಾದರೂ ತೆರೆದೇ ಇಲ್ಲ ಎನ್ನುತ್ತಾರೆ ಈ ಗ್ರಾಮದ ಜನತೆ.

 ಸಿಬ್ಬಂದಿಯೂ ಇತ್ತ ತಲೆ ಹಾಕಿಲ್ಲ

ಸಿಬ್ಬಂದಿಯೂ ಇತ್ತ ತಲೆ ಹಾಕಿಲ್ಲ

ಆ ವೈದ್ಯರ ಬದಲಿಗೆ ಬೇರೆ ವೈದ್ಯರು ಕೂಡ ಇಲ್ಲಿಗೆ ಏಕೆ ಬರುತ್ತಿಲ್ಲ ಎಂದು ಪ್ರಶ್ನಿಸುವ ಗ್ರಾಮದ ಹತ್ತಾರು ಜನರ ಪ್ರಶ್ನೆಗೆ ಉತ್ತರಿಸುವವರಾದರೂ ಯಾರು? ಅಂದು ವೈದ್ಯರೊಂದಿಗೆ ಹೋದ ಸಿಬ್ಬಂದಿ ಕೂಡ ಇತ್ತ ತಲೆ ಹಾಕಿಲ್ಲ. ಹೀಗಾಗಿ ಆರೋಗ್ಯ ಕೇಂದ್ರದ ಬೀಗ ಇಂದಿಗೂ ತೆರೆದಿಲ್ಲ. ಕೊರೊನಾ ಸೋಂಕಿತರಿಗಾಗಿ ವಿವಿಧೆಡೆ ಹಣ ನೀಡಿ ಬಾಡಿಗೆಗೆ ಕಟ್ಟಡವನ್ನು ಪಡೆಯುತ್ತಿರುವ ಸರ್ಕಾರ, ತನ್ನದೇ ಆದ ಸ್ವಂತ ಕಟ್ಟಡ ಹೊಂದಿರುವ ಆಸ್ಪತ್ರೆಯ ಬಾಗಿಲು ಮುಚ್ಚಿದ್ದರೂ ಮೌನವಾಗಿದೆ.

ಹುಟ್ಟಿಕೊಂಡಿವೆ ಹಲವಾರು ಪ್ರಶ್ನೆಗಳು

ಹುಟ್ಟಿಕೊಂಡಿವೆ ಹಲವಾರು ಪ್ರಶ್ನೆಗಳು

ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಜಾಣ ಕುರುಡರಂತೆ ವರ್ತಿಸುತ್ತಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಕಳೆದ ಏಳು ತಿಂಗಳಿಂದ ಈ ಆಸ್ಪತ್ರೆಗೆ ಬಂದ ಉಚಿತ ಔಷಧಿಗಳ ಕಥೆ ಏನು? ಅವುಗಳು ಏನಾದವು? ವೈದ್ಯರಿಲ್ಲದ ಆಸ್ಪತ್ರೆಯ ಸಿಬ್ಬಂದಿ ಏನಾದರು? ಅವರಿಗೆಲ್ಲ ಕೊರೊನಾದಂತಹ ಸಂಕಷ್ಟದ ಸಮಯದಲ್ಲೂ ಏಳು ತಿಂಗಳ ಕಾಲ ರಜೆ ನೀಡಿದವರು ಯಾರು? ಅದು ಸಂಬಳ ಸಹಿತವೋ ಅಥವಾ ಸಂಬಳ ರಹಿತವೋ ಎಂಬ ಹಲವು ಪ್ರಶ್ನೆಗಳು ಉದ್ಭವಿಸಿವೆ.

 ಬಡಜನರ ಸೇವೆ ಪುನರಾರಂಭವಾಗಬೇಕಿದೆ

ಬಡಜನರ ಸೇವೆ ಪುನರಾರಂಭವಾಗಬೇಕಿದೆ

ಕುರಿತು ಪ್ರತಿಕ್ರಿಯಿಸಿದ ಜಿ.ಪಂ ಸದಸ್ಯೆ ಪುಷ್ಪಾ ನಾಗೇಶ್ ರಾಜ್, ಆಸ್ಪತ್ರೆ ಬಾಗಿಲು ಹಾಕಿರುವ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಗಳ ಗಮನಕ್ಕೆ ತಂದಿದ್ದರೂ ಈ ಆಸ್ಪತ್ರೆಗೆ ವೈದ್ಯರು ಬರಲೂ ಇಲ್ಲ, ಬೀಗ ತೆರೆಯಲೂ ಇಲ್ಲ. ಈಗಲಾದರೂ ಇಲ್ಲಿ ಬಡ ಜನತೆಯ ಸೇವೆ ಪುನರಾರಂಭವಾಗಬೇಕು ಎಂದಿದ್ದಾರೆ.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಮರನಾಥ್ ಪ್ರತಿಕ್ರಿಯಿಸಿ ಆಸ್ಪತ್ರೆ ಬಾಗಿಲು ಹಾಕಿರುವ ಕುರಿತು ನನ್ನಲ್ಲಿ ಮಾಹಿತಿ ಇಲ್ಲ. ನಾನು ಬಂದು ಕೇವಲ 14 ದಿನಗಳಾಗಿವೆ. ಈ ಕುರಿತು ಯಾವುದೇ ಮಾಹಿತಿ ತಮ್ಮಲ್ಲಿ ಇಲ್ಲ. ಶೀಘ್ರದಲ್ಲೇ ಈ ಕುರಿತು ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ.

English summary
A government hospital built for the benefit of the people in Nanjangud taluk has not opened since 7 months,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X