Mysuru Robbery: ರಾಜ್ಯದಲ್ಲಿ ಮತ್ತೊಂದು ಬೆಚ್ಚಿಬೀಳಿಸುವ ದರೋಡೆ: ಹಾಡಹಗಲೇ ಕಾರು ಅಡ್ಡಗಟ್ಟಿದ ಮುಸುಕುಧಾರಿಗಳು!
ಮೈಸೂರು, ಜನವರಿ 20: ರಾಜ್ಯದಲ್ಲಿ ವಿವಿಧ ಕಡೆಗಳಲ್ಲಿ ದರೋಡೆಕೋರರ ಅಟ್ಟಹಾಸ ಮುಂದುವರಿದಿದೆ. ಬೀದರ್ ಮತ್ತು ಮಂಗಳೂರು ಬಳಿಕ ಮೈಸೂರಿನಲ್ಲಿ ಸೋಮವಾರ ಮುಸುಕುಧಾರಿ ದರೋಡೆಕೋರರು ಗ್ಯಾಂಗ್ ಹಾಡಹಗಲೇ ಕಾರಿನ ಮೇಲೆ ಅಟ್ಯಾಕ್ ಮಾಡಿ ದರೋಡೆ ಮಾಡಿದೆ. ದರೋಡೆಕೋರರ ಈ ಕೃತ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಎಲ್ಲೆಡೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಸರಣಿ ದರೋಡೆ ಕೃತ್ಯಗಳು ರಾಜ್ಯದ ಜನರಿಗೆ ಪೊಲೀಸ್ ಮತ್ತು ಕಾನೂನು ಸುವ್ಯವಸ್ಥೆ ಬಗ್ಗೆ ಅನುಮಾನ ಹುಟ್ಟುವಂತೆ ಮಾಡಿವೆ.
ಹೌದು, ಸೋಮವಾರ ಬೆಳಗ್ಗೆ ಮೈಸೂರಿನ ಮಾನಂದವಾಡಿ ರಸ್ತೆಯಲ್ಲಿ ತೆರಳುತ್ತಿದ್ದ ಕೇರಳ ಮೂಲದ ಉದ್ಯಮಿಯ ಕಾರಿನ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ಮಾಲೀಕರ ಮೇಲೆ ಹಲ್ಲೆ ಮಾಡಿದ ಮುಸಕುಧಾರಿ ದರೋಡೆಕೋರರು ಹಣ ಕಿತ್ತುಕೊಂಡಿದ್ದಲ್ಲದೇ ಉದ್ಯಮಿ ಕಾರಿನ ಸಮೇತ ಪರಾರಿಯಾಗಿದ್ದಾರೆ.

ಬೇರೆ ಕಾರುಗಳಲ್ಲಿ ಬೆನ್ನಟ್ಟಿ ನಡು ರಸ್ತೆಯಲ್ಲಿ ಹಾಡಹಗಲೇ ಅಡ್ಡಿಗಟ್ಟಿದ ಪಾಪಿಗಳು ಏಕಾಎಕಿ ಉದ್ಯಮಿಯನ್ನು ಹೊರಕ್ಕೆಳೆದು ಹಲ್ಲೆ ಮಾಡಿದೆ. ದರೋಡೆಗೆ ಒಳಗಾದ ಕಾರಿನ ಒಳಕ್ಕೆ ಇಬ್ಬರೆ ಇದ್ದರು ಎಂಬ ಮಾಹಿತಿ ಇದೆ. ನಾಲ್ಕೈದು ಜನರ ದರೋಡೆ ಗುಂಪು ದಿಢೀರ್ ದಾಳಿಗೆ ಉದ್ಯಮಿ ಕಂಗಾಲಾಗಿದ್ದಾರೆ. ನೋಡ ನೋಡುತ್ತಲೇ ಹಲ್ಲೆಗೈದು, ಕಾರು ದೋಚಿ ಕ್ಷಣಮಾತ್ರದಲ್ಲಿ ಪರಾರಿಯಾಗಿದ್ದಾರೆ.
ಬೀದರ್‌ನಲ್ಲಿ ಎಸ್‌ಬಿಐ ಸಿಬ್ಬಂದಿಗೆ ಗುಂಡಿಕ್ಕಿದ್ದ ಶಸ್ತ್ರಸಹಿತ ದರೋಡೆಕೋರರು ಸುಮಾರು 94ಲಕ್ಷ ರೂಪಾಯಿ ಹಣ ದೋಚಿ ಬೈಕ್ ಮೇಲೆ ಪರಾರಿಯಾಗಿದ್ದರು. ಇದರ ಬೆನ್ನಲ್ಲೆ ಮಂಗಳೂರಿನಲ್ಲಿ ದರೋಡೆ ನಡೆದಿತ್ತು. ಇವರೆಡು ಸಿನಿಮೀಯ ರೀತಿಯಲ್ಲಿ ನಡೆದು ರಾಜ್ಯ ಜನರಿಗೆ ಅಚ್ಚರಿ ಮೂಡಿಸಿತ್ತು. ಇದು ನಿಜವಾ ಎನ್ನುವಷ್ಟರಲ್ಲಿ ದರೋಡೆಕೋರರ ದಾಳಿಗೆ ಹೆಣಗಳು ಬಿದ್ದಿದ್ದವು.
ಇದೀಗ ಈ ಎರಡು ಘಟನೆಗಳು ಮಾಸುವ ಮೊದಲೇ ಮೈಸೂರಿನಿಂದ ಕೇರಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕಾರಿನ ಮೇಲೆ ದಾಳಿ ನಡೆದಿದೆ. ಇದು ಸಹ ಜಿಲ್ಲೆಯ ಜನರನ್ನು ಬೆಚ್ಚಿಬೀಳಿಸಿದೆ. ಪೊಲೀಸರು, ಕಾನೂನಿನ ಭಯ ಇಲ್ಲದಂತಾಗಿದೆ. ನಾಗರಿಕರು, ಮಕ್ಕಳು, ಮಹಿಳೆಯರು ಹಗಲು ಹೊತ್ತೆ ಓಡಾಡಲು ಭಯಪಡುವ ವಾತಾವರಣ ನಿರ್ಮಾಣವಾಗುತ್ತಿದೆ.
ಸದ್ಯ ಈ ಉದ್ಯಮಿಗಳ ಮೇಲೆ ನಡೆದ ಕೃತ್ಯ ಯಾವ ಕಾರಣದಿಂದ ನಡೆದಿದೆ?. ಇವು ವೃತ್ತಿಪರ ದರೋಡೆಕೋರರಾ?, ಇಲ್ಲ ಉದ್ಯಮಿ ಜೊತೆಗೆ ಹಳೇ ವೈಷಮ್ಯ ಏನಾದರೂ ಇತ್ತಾ? ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.
ಸ್ಥಳಕ್ಕೆ ಭೇಟಿ ಕೊಟ್ಟ ಎಸ್‌ಪಿ ಹೇಳಿದ್ದೇನು?
ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಎಸ್‌ಪಿ ವಿಷ್ಣುವರ್ಧನ ಅವರು, ಮಾಹಿತಿ ಕಲೆ ಹಾಕುತ್ತಿದ್ದೇವೆ. ಕೇರಳದ ಮೂಲಕ ಇಬ್ಬರು ಕಾರಿನಲ್ಲಿ ಹೋಗುವಾಗ ಘಟನೆ ಸಂಭವಿಸಿದೆ. ಖದೀಮರನ್ನು ಪೊಲೀಸರ ಪತ್ತೆ ಮಾಡಲಿದ್ದಾರೆ. ಗಡಿ ಭಾಗದಲ್ಲಿ ನಾಕಾ ಬಂಧಿ ಹಾಕಲು ಸಿಬ್ಬಂದಿ ಜೊತೆಗೆ ಮಾತನಾಡಿದ್ದೇನೆ. ದರೋಡೆಕೋರರು ಪರಾರಿಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಎಲ್ಲಿಯಾದರೂ ಅನುಮಾನಾಸ್ಪದ ಕಾರು, ವ್ಯಕ್ತಿಗಳು, ಒಂಟಿ ಕಾರು ಕಂಡಲ್ಲಿ ಕೂಡಲೇ 112ಗೆ ಕರೆ ಮಾಡುವಂತೆ ಎಸ್‌ಪಿ ಕೋರಿದ್ದಾರೆ.












Click it and Unblock the Notifications