ಮೈಸೂರು ಪೊಲೀಸರಿಗೆ ವಾಟ್ಸಪ್ ಮೂಲಕ ದೂರು ಕೊಡಿ
ಮೈಸೂರು, ಜೂ. 11 : ಸಾರ್ವಜನಿಕರ ಸಹಾಯಕ್ಕಾಗಿ ಫೇಸ್‌ಬುಕ್, ಟ್ವಿಟ್ಟರ್ ಖಾತೆ ಆರಂಭಿಸಿದ್ದ ಮೈಸೂರು ಪೊಲೀಸರು ಈಗ ವಾಟ್ಸಪ್ ಮೂಲಕ ದೂರು ನೀಡುವ ಸೇವೆಯನ್ನು ಜಾರಿಗೆ ತಂದಿದ್ದಾರೆ. ಸಂಚಾರಿ ನಿಯಮ ಉಲ್ಲಂಘನೆ ಮತ್ತು ಅಪರಾಧ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ವಾಟ್ಸಪ್ ಮೂಲಕ ದೂರು ನೀಡಬಹುದಾಗಿದೆ.
ಮೈಸೂರು ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಗುರುವಾರ ವಾಟ್ಸಪ್ ದೂರು ಸೇವೆಗೆ ಚಾಲನೆ ನೀಡಿದರು. 8861786385 ನಂಬರ್ ಮೂಲಕ ಸಾರ್ವಜನಿಕರು ಪೊಲೀಸರಿಗೆ ನೇರವಾಗಿ ದೂರನ್ನು ನೀಡಬಹುದಾಗಿದೆ ಎಂದು ದಯಾನಂದ ಅವರು ತಿಳಿಸಿದರು. [ಟ್ವಿಟ್ಟರಿಗೆ ಬಂದ ಮೈಸೂರು ಪೊಲೀಸರು]

ಸಂಚಾರ ನಿಯಮ ಉಲ್ಲಂಘನೆ, ಅಪರಾಧ ಮತ್ತು ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಜನರು ಸುಲಭವಾಗಿ ದೂರು ನೀಡಲು ಈ ವಾಟ್ಸಪ್ ಸೇವೆಗೆ ಚಾಲನೆ ನೀಡಲಾಗಿದೆ ಎಂದರು. ದೂರು ಕೊಟ್ಟವರ ವಿವರಗಳನ್ನು ಗೌಪ್ಯವಾಗಿ ಇಡಲಾಗುತ್ತದೆ, ದೂರುಗಳ ಬಗ್ಗೆ ತ್ವರಿತವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. [ಮೈಸೂರು : ಬಿ.ದಯಾನಂದ ಅಧಿಕಾರ ಸ್ವೀಕಾರದ ಚಿತ್ರಗಳು]
ದೂರು ಸಲ್ಲಿಸುವುದು ಹೇಗೆ? : ಸಾರ್ವಜನಿಕರು ವಾಟ್ಸಪ್ ಸಹಾಯವಾಣಿಗೆ ಆಡಿಯೋ ತುಣುಕು, ವಿಡಿಯೋ ತುಣುಕು, ಅಥವ ಪೋಟೋಗಳನ್ನು ಸಲ್ಲಿಸಿ ದೂರು ನೀಡಬಹುದಾಗಿದೆ. ದೂರು ಸಲ್ಲಿಸುವವರು ಹೆಸರು, ಸ್ಥಳ, ದಿನಾಂಕ ಮತ್ತು ಸಮಯವನ್ನು ದೂರಿನೊಂದಿಗೆ ನೀಡಬೇಕು.
ಅನಧಿಕೃತ ಪಾರ್ಕಿಂಗ್, ಸಂಚಾರ ನಿಯಮ ಉಲ್ಲಂಘನೆ, ಆಟೋ/ಟ್ಯಾಕ್ಸಿ ಚಾಲಕರಿಂದ ಹೆಚ್ಚಿನ ಹಣ ವಸೂಲಿ, ಆಟೋ ಚಾಲಕರ ದುರ್ವರ್ತನೆ ಮುಂತಾದ ದೂರುಗಳನ್ನು ಸಾರ್ವಜನಿಕರು ಸಲ್ಲಿಸಬಹುದಾಗಿದೆ.












Click it and Unblock the Notifications