ಕಾವೇರಿ ತೀರ್ಪು: ಮೈಸೂರಿನಾದ್ಯಂತ ಸಂಭ್ರಮಾಚರಣೆ
Recommended Video

ಮೈಸೂರು, ಫೆಬ್ರವರಿ 16 : ಹಲವು ಅಡೆತಡೆಗಡೆಗಳಿಂದ ಮುಕ್ತವಾಗಿ ಕಾವೇರಿ ವಿಚಾರವಾಗಿ ರಾಜ್ಯವು ನಿಟ್ಟುಸಿರು ಬಿಡುವಂತಹ ತೀರ್ಪು ಬಂದ ಹಿನ್ನೆಲೆ ಮೈಸೂರು ನಗರಾದ್ಯಂತ ಕನ್ನಡಪರ ಸಂಘಟನೆಗಳು ಸಿಹಿ ಹಂಚಿ ಸಂಭ್ರಮಿಸಿದರು.
ಮೈಸೂರು ಕನ್ನಡ ಚಳುವಳಿಗಾರರ ಸಂಘದ ಕಾರ್ಯಕರ್ತರು ನ್ಯಾಯಾಲಯದ ಮುಂಭಾಗವಿರುವ ಗಾಂಧೀ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕಾವೇರಿಗೆ ಮತ್ತು ಸುಪ್ರೀಂ ಕೋರ್ಟ್ ಗೆ ಜೈಕಾರ ಹಾಕಿ ಸಿಹಿ ಹಂಚಿ ಸಂಭ್ರಮಿಸಿದರು. ಅಷ್ಟೇ ಅಲ್ಲದೇ ರಸ್ತೆಯಲ್ಲಿ ಹೋಗುವವರಿಗೆಲ್ಲರಿಗೂ ನೀರು ಕುಡಿಸುವ ಮೂಲಕ ಹರ್ಷೋದ್ಗಾರವನ್ನು ಆಚರಿಸಿದರು.
ಇತ್ತ ಶ್ರೀರಂಗಪಟ್ಟಣದಲ್ಲೂ ಸಂಭ್ರಮಾಚರಣೆ :
ಸುಪ್ರೀಂಕೋರ್ಟ್ ತೀರ್ಪು ರಾಜ್ಯದ ಪರ ಬಂದ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದಲ್ಲಿ ಕರವೇ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು. ಇದೇ ವೇಳೆ ಮಾತನಾಡಿದ ಬಿಜೆಪಿಯ ಕೆ.ಎಸ್.ನಂಜುಂಡೇಗೌಡ, ತೀರ್ಪು ಸಮಾಧಾನ ಅಷ್ಟೇ, ಪೂರ್ಣ ಸ್ವಾಗತ ಇಲ್ಲ.

ಕರ್ನಾಟಕಕ್ಕೆ 14.25 ಟಿ.ಎಂ.ಸಿ ಹೆಚ್ಚುವರಿ ಸಿಕ್ಕಿರುವುದು ಸಮಾಧಾನಕರ. ಆದರೆ ತಿಂಗಳು ಪ್ರಕಾರ ನೀರು ಕೊಡಬೇಕು ಎಂಬುದನ್ನು ಯಾವುದೇ ಕಾರಣಕ್ಕೂ ಜಾರಿಯಾಗಲು ಬಿಡುವುದಿಲ್ಲ. ಕಾವೇರಿ ನದಿ ವಿಚಾರವನ್ನು ಕಾನೂನಿನಿಂದ ಹೊರಗಿಡಬೇಕು. ರಾಷ್ಟ್ರೀಯ ನದಿ ಜಲ ಪ್ರಾಧಿಕಾರ ಜಾರಿಗೆ ತರಬೇಕು. ಎರಡೂ ರಾಜ್ಯಗಳು ನೀರಿನ ಲಭ್ಯತೆ ಆಧರಿಸಿ ನೀರು ಹಂಚಿಕೊಳ್ಳುವಂತೆ ಮಾಡಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಶ್ರೀರಂಗಪಟ್ಟಣದಲ್ಲಿ ಕಾವೇರಿ ನದಿಗೆ ಪೂಜೆ ಸಲ್ಲಿಸಿದ ರೈತ ಮುಖಂಡರು, ಕರವೆ ಕಾರ್ಯಕರ್ತರು. ಕಳಶವಿಟ್ಟು ಗಂಧ ಬೆಳಗಿ ಪೂಜೆ ಸಲ್ಲಿಸಿ, ಕಾವೇರಿ ನಮ್ಮದು ಎಂದು ಘೋಷಣೆ ಕೂಗಿದ್ದು ವಿಶೇಷವಾಗಿತ್ತು.












Click it and Unblock the Notifications