MUDA Site: ಮುಡಾ ಸೈಟು ಹಂಚಿಕೆ ವಿವಾದ: ತನಿಖೆ ಆರಂಭಿಸಿದ ಸಮಿತಿ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ 50:50 ನಿವೇಶನ ಹಂಚಿಕೆ ವಿವಾದ ಇದೀಗ ರಾಜ್ಯದ ಗಮನ ಸೆಳೆದಿದೆ. ಅಕ್ರಮಗಳ ಕುರಿತಂತೆ ಸರಕಾರ ನೇಮಿಸಿರುವ ತನಿಖಾ ಸಮಿತಿ ಗುರುವಾರ ಮುಡಾ ಕಚೇರಿಗೆ ಆಗಮಿಸಿ ತನಿಖೆ ಆರಂಭಿಸಿದೆ.
ಮೊದಲ ದಿನವೇ ತನಿಖಾಧಿಕಾರಿಗಳು 50:50 ಅನುಪಾತದಲ್ಲಿ ನಿವೇಶನ ಹಂಚಿಕೆ ವಿಚಾರ, ಹಲವು ಪ್ರಕರಣಗಳಲ್ಲಿ ಭೂ ಮಾಲೀಕರಿಗೆ ಕಾನೂನು ಬಾಹಿರವಾಗಿ ನಿವೇಶನ ಹಂಚಿಕೆ ಮಾಡಿರುವುದು ಸೇರಿದಂತೆ ಸದ್ಯ ಕೇಳಿಬಂದಿರುವ ಆರೋಪಗಳ ಕುರಿತು ಕಡತಗಳನ್ನು ತರಿಸಿಕೊಂಡು ಪರಿಶೀಲಿಸಿದರು. ಕಡತಗಳಲ್ಲಿ ದಾಖಲಾಗಿರುವ ಮಾಹಿತಿಗಳ ವ್ಯತ್ಯಾಸಗಳ ಕುರಿತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಮುಡಾ ಅಕ್ರಮಗಳ ಕುರಿತು ಪ್ರಾಧಿಕಾರಕ್ಕೆ ಬರೆದಿರುವ 15 ಪತ್ರಗಳಿಗೆ ಉತ್ತರ ನೀಡದಿರಲು ಕಾರಣವೇನು? ಜಿಲ್ಲಾಧಿಕಾರಿಗಳು ಎತ್ತಿರುವ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಮಾಹಿತಿ ಒದಗಿಸಲು ಈವರೆಗೆ ಏಕೆ ಸಾಧ್ಯವಾಗಿಲ್ಲ ಎಂಬುದರ ಬಗ್ಗೆ ಸೂಕ್ತ ಸಮಜಾಯಿಷಿ ನೀಡುವಂತೆ ತನಿಖಾ ಸಮಿತಿಯು ಅಧಿಕಾರಿಗಳಿಗೆ ತಾಕೀತು ಮಾಡಿದೆ.
ವಿಚಾರಣೆಗೆ ಬೇಕಾದ ಎಲ್ಲ ರೀತಿ ಕಡತಗಳನ್ನು ಒದಗಿಸಿಕೊಡುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ. ಬೆಳಗ್ಗೆಯಿಂದ ಸಂಜೆವರೆಗೆ ಮುಡಾ ಕಚೇರಿಯಲ್ಲೇ ಉಳಿದುಕೊಂಡು ಕಡತಗಳನ್ನು ಪರಿಶೀಲಿಸಲಾಗಿದೆ. ಕ್ಷೇತ್ರ ಕಾರ್ಯಕ್ಕೆ ತೆರಳಿ ಪರಿಶೀಲಿಸಿಲ್ಲ. ಮುಡಾ ಅಕ್ರಮಗಳ ಕುರಿತು ಕಾಲಮಿತಿಯಲ್ಲಿ ವರದಿ ತಯಾರಿಸಬೇಕಿದೆ. ಗುರುವಾರವೂ ತನಿಖೆ ಮುಂದುವರಿಯುತ್ತದೆ. ತಂಡಕ್ಕೆ ಬೇಕಾದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ನೂತನ ಮುಡಾ ಆಯುಕ್ತ ರಘುನಂದನ್ ತಿಳಿಸಿದ್ದಾರೆ.
ಮುಡಾ ಕಚೇರಿ ಮುತ್ತಿಗೆಗೆ ಯತ್ನ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿರುವ ಬಹುಕೋಟಿ ಹಗರಣ ಖಂಡಿಸಿ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಮುಡಾ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ನಗರದ ಬಿಜೆಪಿ ಕಚೇರಿ ಬಳಿ ಸಮಾವೇಶಗೊಂಡ ಬಳಿಕ ಮುಡಾ ಕಚೇರಿಗೆ ಕಾಲ್ನಡಿಗೆಯಲ್ಲಿ ಸಾಗಿದ ನೂರಾರು ಬಿಜೆಪಿ ಕಾರ್ಯಕರ್ತರನ್ನು ರಾಮಸ್ವಾಮಿ ವೃತ್ತದ ಸಮೀಪವಿರುವ ಮಹಾರಾಜ ಹೋಟೆಲ್ ಬಳಿ ಪೊಲೀಸರು ತಡೆದರು.
ಈ ವೇಳೆ ಬಿಜೆಪಿ ಕಾರ್ಯಕರ್ತರು ಪೊಲೀಸರ ನಡುವೆ ಮಾತಿನ ಚಕಮಕಿ ಉಂಟಾಗಿ, ಕಾಂಗ್ರೆಸ್ ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಮುಡಾ ಕಚೇರಿವರೆಗೆ ಕಾಲ್ನಡಿಗೆಯಲ್ಲಿ ತೆರಳಲು ಅವಕಾಶ ಕೊಡಿ ಎಂದು ಕೇಳಿದರೂ ಪೊಲೀಸರು ಅವಕಾಶ ನೀಡಲಿಲ್ಲ. ಬಳಿಕ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು ವಾಹನದಲ್ಲಿ ಕರೆದೊಯ್ದರು. ಬಳಿಕ ಡಿಆರ್ ಮೈದಾನದಲ್ಲಿ ಬಿಡುಗಡೆ ಮಾಡಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ರಾಮಸ್ವಾಮಿ ವೃತ್ತದಿಂದ ಮುಡಾ ಕಚೇರಿಗೆ ಸಾಗುವ ರಸ್ತೆಯುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.












Click it and Unblock the Notifications