Mysuru Traffic: ಮೈಸೂರು ಎಂಜಿ ರಸ್ತೆ ಟ್ರಾಫಿಕ್ ಸಮಸ್ಯೆಗೆ ಕೊನೆಗೂ ಮುಕ್ತಿ!
ದಶಕಗಳಿಂದ ತಲೆನೋವಾಗಿದ್ದ ಮೈಸೂರಿನ ಎಂಜಿ ರಸ್ತೆಯ ಟ್ರಾಫಿಕ್ ಸಮಸ್ಯೆಗೆ ಕೊನೆಗೆ ಮುಕ್ತಿ ಸಿಕ್ಕಿದೆ!
ಎಂ.ಜಿ. ಮಾರುಕಟ್ಟೆಯಲ್ಲಿ ಸುವಾರು 400ಕ್ಕೂ ಹೆಚ್ಚು ವ್ಯಾಪಾರಿಗಳಿದ್ದಾರೆ. ನಿತ್ಯ ರಾತ್ರಿ 8 ಗಂಟೆಯಿಂದ ಬೆಳಗಿನವರೆಗೂ ಎರಡೂ ಬದಿಯಲ್ಲಿ ಅಕ್ಕಪಕ್ಕದ ತಾಲೂಕುಗಳಿಂದ ಮೈಸೂರು ನಗರಕ್ಕೆ ಬರುವ ತರಕಾರಿ, ಸೊಪ್ಪು ತುಂಬಿದ ಟ್ರಕ್‌ಗಳು, ವಾಹನಗಳು ಇದೇ ರಸ್ತೆಯಲ್ಲಿ ನಿಲ್ಲುತ್ತಿದ್ದವು. ಅಲ್ಲದೆ, ವ್ಯಾಪಾರಸ್ಥರು ರಸ್ತೆಯ ಫುಟ್‌ಪಾತ್‌ನಲ್ಲೇ ವ್ಯಾಪಾರ-ವಹಿವಾಟು ನಡೆಸುತ್ತಿದ್ದರು.
ಗ್ರಾಹಕರು ರಸ್ತೆಯಲ್ಲೇ ವಾಹನ ನಿಲ್ಲಿಸಿ ತರಕಾರಿಗಳನ್ನು ಖರೀದಿಸುತ್ತಿದ್ದರು. ಇದರಿಂದ ನಿತ್ಯವೂ ಟ್ರಾಫಿಕ್ ಕಿರಿಕಿರಿಯಾಗುತ್ತಿತ್ತು. ರೈತರು, ಈ ಜಾಗದಿಂದ ಸ್ಥಳಾಂತರ ಮಾಡಿದರೆ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತದೆ. ಯಾವುದೇ ಕಾರಣಕ್ಕೂ ಇಲ್ಲಿಂದ ನಾವು ಹೋಗುವುದಿಲ್ಲ, ಎಂದು ಪಟ್ಟು ಹಿಡಿದ್ದರು. ಇದರಿಂದ ಈ ಸಮಸ್ಯೆಗೆ ಪರಿಹಾರ ಸಿಕ್ಕಿರಲಿಲ್ಲ.

ಇತ್ತೀಚೆಗೆ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರು ಎಂ.ಜಿ.ರಸ್ತೆಯ ತರಕಾರಿ ಮಾರುಕಟ್ಟೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸ್ಥಳಾಂತರ ಕುರಿತು ವ್ಯಾಪಾರಸ್ಥರು ಹಾಗೂ ರೈತರೊಂದಿಗೆ ಚರ್ಚಿಸಿದ್ದರು. ಹೀಗಾಗಿ ಟ್ರಾಫಿಕ್ ಪೊಲೀಸರು ಎಂ.ಜಿ.ರಸ್ತೆಯ ಫುಟ್‌ಪಾತ್‌ನಲ್ಲಿ ತರಕಾರಿ ಮಾರಾಟ ಮಾಡದಂತೆ ಬ್ಯಾರಿಕೇಡ್ ಹಾಕಿದರು. ನಗರಪಾಲಿಕೆಯು ಇಲ್ಲಿ ವಾಹನಗಳನ್ನು ನಿಲ್ಲಿಸುವಂತಿಲ್ಲ ಎಂಬ ಬೋರ್ಡ್ ನೇತು ಹಾಕಿದೆ. ಪರಿಣಾಮ ಸೋಮವಾರ ಯಾವುದೇ ಟ್ರಾಫಿಕ್ ಸಮಸ್ಯೆ ಉಂಟಾಗದೆ ವಾಹನಗಳು ಸುಗಮವಾಗಿ ಸಂಚರಿಸಿವೆ.
ಮೈದಾನದ ಒಳಗಡೆ ಇರುವ ಖಾಲಿ ಜಾಗದಲ್ಲಿ ತರಕಾರಿ ವ್ಯಾಪಾರಿಗಳು ವ್ಯಾಪಾರ ಮಾಡುವಂತೆ ತಿಳಿಸಲಾಗಿದೆ. ಕತ್ತಲೆ ಇರುವ ಕಾರಣ ವಿದ್ಯುತ್ ಹಾಕಿಸಿಕೊಡಲು ಕೇಳಿದ್ದಾರೆ. ನಗರಪಾಲಿಕೆಯಿಂದ ವಿದ್ಯುತ್ ಸೌಲಭ್ಯ ಕಲ್ಪಿಸಲಾಗುವುದು. ಸ್ವಚ್ಛತೆ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬರುತ್ತಿರುವುದರಿಂದ 10 ಮಂದಿ ಪೌರ ಕಾರ್ಮಿಕರನ್ನು ನೇಮಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಿಸಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.












Click it and Unblock the Notifications