ಮೈಸೂರು : ಮಹಿಷಾಸುರನ ಹೆಬ್ಬೆರಳು ಜಜ್ಜಿದ ಪುಂಡರು
ಮೈಸೂರು, ಮಾ. 14 : ಕಿಡಿಗೇಡಿಗಳು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾಸುರನ ಪ್ರತಿಮೆಯನ್ನು ವಿರೂಪಗೊಳಿಸಿದ್ದಾರೆ. ಮಹಿಷಾಸುರನ ಹೆಬ್ಬೆರಳನ್ನು ಕಲ್ಲಿನಿಂದ ಜಜ್ಜಿ ಹಾನಿ ಮಾಡಿದ್ದು, ಪ್ರತಿಮೆಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಶುಕ್ರವಾರ ರಾತ್ರಿ ಕಿಡಿಗೇಡಿಗಳು ಈ ಕೃತ್ಯ ನಡೆಸಿದ್ದು, ಶನಿವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ. ಮಹಿಷಾಸುರನ ಹೆಬ್ಬೆರಳನ್ನು ಕಲ್ಲಿನಿಂದ ಸುಮಾರು 5 ಇಂಚುಗಳಷ್ಟು ಅಗಲ ಜಜ್ಜಿ ಹಾಕಲಾಗಿದೆ. ಕೃತ್ಯಕ್ಕೆ ಬಳಸಿದ ಕಲ್ಲನ್ನು ಅಲ್ಲಿಯೇ ಬಿಸಾಡಿ ಹೋಗಿದ್ದಾರೆ.

ಮಹಿಷಾಸುರನ ಪ್ರತಿಮೆಯ ಸುತ್ತ ಕಬ್ಬಿಣದ ಗ್ರಿಲ್‌ಗಳನ್ನು ಆಳವಡಿಸಲಾಗಿದೆ. ಅದನ್ನು ಹತ್ತಿ ಬಂದು ಮೂರ್ತಿಯ ಎಡಗಾಲಿನ ಹೆಬ್ಬೆರಳನ್ನು ಜಜ್ಜಿ ಹಾಕಿದ್ದಾರೆ. ದೇವಾಲಯದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. [ಮೈಸೂರಿನಲ್ಲಿ ಒಡೆಯರ್ ಕತ್ತಿ ನಾಪತ್ತೆ]
ಚಾಮುಂಡಿ ಬೆಟ್ಟದಲ್ಲಿ ಮೂರ್ತಿಗಳನ್ನು ವಿರೂಪಗೊಳಿಸುತ್ತಿರುವುದು ಇದೇ ಮೊದಲಲ್ಲ. ಹಿಂದೆ ನಂದಿ ವಿಗ್ರಹವನ್ನು ಸಹ ವಿರೂಪಗೊಳಿಸಲಾಗಿತ್ತು. ಪದೇ-ಪದೇ ಬೆಟ್ಟದಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದು, ಮೂರ್ತಿಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.[ಬಜೆಟ್ ನಲ್ಲಿ ಮೈಸೂರಿಗೆ ಏನು ಸಿಕ್ತು]
ಒಡೆಯರ್ ಕತ್ತಿ ನಾಪತ್ತೆಯಾಗಿತ್ತು : 2014ರ ಅಕ್ಟೋಬರ್‌ನಲ್ಲಿ ಚಾಮರಾಜೇಂದ್ರ ಒಡೆಯರ್ ಪ್ರತಿಮೆಯನ್ನು ಕಿಡಿಗೇಡಿಗಳು ಭಗ್ನಗೊಳಿಸಿದ್ದರು. ಮೈಸೂರಿನ ಅಂಬಾವಿಲಾಸ ಅರಮನೆಯ ಬಲರಾಮ ದ್ವಾರದ ಬಳಿ ಇರುವ ಚಾಮರಾಜೇಂದ್ರ ಒಡೆಯರ್ ಪ್ರತಿಮೆಯ ಕತ್ತಿಯನ್ನು ಕಲ್ಲಿನಿಂದ ಹೊಡೆದು ಹಾನಿಗೊಳಿಸಲಾಗಿತ್ತು.












Click it and Unblock the Notifications