ದಸರೆಯ ರಂಗೇರಿಸಲು ಸೆ.15 ರಿಂದ ಆರಂಭವಾಗಲಿದೆ ಯುವ ಸಂಭ್ರಮ
ಮೈಸೂರು, ಆಗಸ್ಟ್ 28: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಯುವಸಂಭ್ರಮ ಕಾರ್ಯಕ್ರಮವನ್ನು ಸೆ.15 ರಿಂದ 8 ದಿನಗಳ ಕಾಲ ನಡೆಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ತಿಳಿಸಿದರು.
ಅರ್ಜುನ ಸಾರಥ್ಯದಲ್ಲಿ ಆರಂಭವಾಗಿದೆ ಜಂಬೂಸವಾರಿ ತಾಲೀಮು
ಯುವಸಂಭ್ರಮದ ಪೂರ್ವಭಾವಿ ಸಿದ್ಧತೆ ಸಭೆಯಲ್ಲಿ ಮಾತನಾಡಿದ ಅವರು, "ಈ ಬಾರಿ ಯುವ ಸಂಭ್ರಮದಲ್ಲಿ ನೃತ್ಯದ ಜೊತೆಗೆ ಏಕಪಾತ್ರಾಭಿನಯ, ಬ್ಯಾಂಡ್-ಮ್ಯೂಸಿಕ್ ಕಾರ್ಯಕ್ರಮಗಳಿಗೆ ಅವಕಾಶ ಮಾಡಿಕೊಡಲಾಗುವುದು" ಎಂದರು.
ವಿವಿಧ ವಿಷಯಗಳಾದ ಪರಿಸರ ಸಂರಕ್ಷಣೆ, ರಾಷ್ಟ್ರೀಯ ಭಾವೈಕ್ಯ, ಪಾರಂಪರಿಕ ಆಸ್ತಿಗಳ ಸಂರಕ್ಷಣೆ, ಮಹಿಳಾ ಸಬಲೀಕರಣ ಮತ್ತು ಸಮಾನತೆ, ಭಾರತದ ಸ್ವಾತಂತ್ರ್ಯ ಚಳವಳಿ, ಕನ್ನಡ ಮತ್ತು ಸಂಸ್ಕೃತಿ, ಜಾನಪದ ಕಲೆ, ಸ್ವಚ್ಛ ಭಾರತ-ಸ್ವಚ್ಛ ಕರ್ನಾಟಕ, ಆರೋಗ್ಯ ಮತ್ತು ನೈರ್ಮಲ್ಯ, ಅರಣ್ಯ, ಕಾಡು ಪ್ರಾಣಿಗಳ ಸಂರಕ್ಷಣೆ, ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಿಂದ ಅಗುವ ದುಷ್ಪರಿಣಾಮ ವಿಷಯ ಇಟ್ಟುಕೊಂಡು ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಬಹುದಾಗಿದೆ ಎಂದು ತಿಳಿಸಿದರು.
25 ರಿಂದ 50 ವಿದ್ಯಾರ್ಥಿಗಳು ಮಾತ್ರ ಕಾರ್ಯಕ್ರಮ ನಡೆಸಿಕೊಡಲು ಅವಕಾಶ ಕಲ್ಪಿಸಿಕೊಡಲಾಗುವುದು. ಕಾರ್ಯಕ್ರಮದ ದಿನದಂದೇ ಗೌರವಧನವನ್ನು ಚೆಕ್ ಮೂಲಕ ನೀಡಲಾಗುವುದು ಎಂದರು.
ಈ ಬಾರಿ ಎರಡು ಕಡೆ ಆಹಾರ ಮೇಳ: ದಸರಾ ಮಹೋತ್ಸವದ ಅಂಗವಾಗಿ ಜನಪ್ರಿಯ ಆಹಾರ ಮೇಳವನ್ನು ಸೆ.29ರಿಂದ ಅ. 16ರವರೆಗೆ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ, ಲಲಿತ ಮಹಲ್ ಹೋಟೆಲ್ ಪಕ್ಕದ ಮುಡಾ ಮೈದಾನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.