ಒಂದೇ ಕಣ್ಣಿನಲ್ಲಿ ಬದುಕು ಸಾಗಿಸಿದ್ದ ಬಲರಾಮ: ದಸರಾ ಆನೆಯ ಸಾವಿಗೆ ಅಸಲಿ ಕಾರಣವೇನು?
ಮೈಸೂರು, ಮೇ 09: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಸುಮಾರು 14 ಬಾರಿ ಚಿನ್ನದ ಅಂಬಾರಿ ಹೊತ್ತು ಜನಮನ್ನಣೆ ಪಡೆದಿದ್ದ 67 ವರ್ಷ ಪ್ರಾಯದ ಬಲರಾಮ ಚಿನ್ನದ ಅಂಬಾರಿ ಹೊತ್ತು ರಾಜಗಾಂಭೀರ್ಯದಿಂದ ಸಾಗುತ್ತಾ ಎಲ್ಲರಿಗೂ ಪ್ರಿಯನಾಗಿದ್ದನು. ಸದಾ ಸಾಧು ಸ್ವಭಾವದ ಈತ ಇತ್ತೀಚೆಗಿನ ದಿನಗಳಲ್ಲಿ ವಯೋಸಹಜ ಸಮಸ್ಯೆಗಳನ್ನು ಎದುರಿಸುತ್ತಾ ದಿನ ಕಳೆದಿದ್ದನು. ಆದರೀಗ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾನೆ. ಇನ್ನು ಬಲರಾಮ ಬರೀ ನೆನಪು ಮಾತ್ರ.
ಇವತ್ತಿಗೂ ಮೈಸೂರು ದಸರಾದಲ್ಲಿ ಅಂಬಾರಿ ಹೊತ್ತ ಆನೆಗಳಿಗೆ ಒಂದೊಂದು ರೀತಿಯ ಇತಿಹಾಸವಿದೆ. ಹೀಗೆ ಇತಿಹಾಸ ಬರೆದ ಗಜಪಡೆಗಳ ಪಟ್ಟಿಯಲ್ಲಿ ಬಲರಾಮನೂ ಸೇರಿ ಹೋಗಿದ್ದಾನೆ. ಇಷ್ಟಕ್ಕೂ 67 ವರ್ಷದ ಬಲರಾಮ ಸಾವನ್ನಪ್ಪಿದ್ದು ಹೇಗೆ? 1978ರಲ್ಲಿ ಸೆರೆ ಸಿಕ್ಕಿ ಅರಣ್ಯ ಇಲಾಖೆಯ ಸುಪರ್ದಿಗೆ ಬಂದಲ್ಲಿಂದ ಇಲ್ಲಿವರೆಗೆ ಬಲರಾಮನ ಹೇಗೆ ಬದುಕಿದ್ದ ಎಂಬುದರ ಬಗ್ಗೆ ನೆನಪು ಮಾಡಿಕೊಳ್ಳಲೇ ಬೇಕು.

1978ಕ್ಕೂ ಮುನ್ನ ಬಲರಾಮನೂ ಕೂಡ ಎಲ್ಲ ಕಾಡಾನೆಗಳಂತೆ ಪುಂಡನಾಗಿದ್ದನು. ರೈತರ ಹೊಲಗದ್ದೆ, ಕಾಫಿ ತೋಟಗಳಿಗೆ ನುಗ್ಗಿ ಪುಂಡಾಟ ನಡೆಸುತ್ತಿದ್ದನು. ಹೀಗಾಗಿ ಈತನನ್ನು 1978ರಲ್ಲಿ ಕೊಡಗು ಜಿಲ್ಲೆಯ ಕಟ್ಟೆಪುರ ಅರಣ್ಯದಲ್ಲಿ ಸೆರೆಹಿಡಿದು ತಿತಿಮತಿ ಬಳಿಯ ಮತ್ತಿಗೋಡು ಆನೆ ಶಿಬಿರದಲ್ಲಿ ಪಳಗಿಸಲಾಗಿತ್ತು. ಮೊದಲಿಗೆ ಪುಂಡನಾಗಿದ್ದ ಬಲರಾಮ ಆ ನಂತರ ಸಾಧು ಸ್ವಭಾವದವನಾಗಿ ಹೊರ ಹೊಮ್ಮಿದ್ದನು.
ಬಲಶಾಲಿಯಾಗಿದ್ದ ಈತ 2.70ಮೀಟರ್ ಎತ್ತರ, 3.77ಮೀ. ಉದ್ದ ಹೊಂದಿದ್ದನು. ಈತನ ನಡವಳಿಕೆ ಕಾರ್ಯಕ್ಷಮತೆಯನ್ನು ಗಮನಿಸಿ ಮೈಸೂರು ದಸರಾ ಜಂಬೂಸವಾರಿಗೆ ಆಯ್ಕೆ ಮಾಡಲಾಗಿತ್ತು. ಇತರೆ ದಿನಗಳಲ್ಲಿ ಆನೆ ಶಿಬಿರದಲ್ಲಿ ಇತರೆ ಪುಂಡಾನೆಗಳನ್ನು ಸೆರೆಹಿಡಿಯಲು ಮತ್ತು ಪಳಗಿಸಲು ಬಳಸಿಕೊಳ್ಳಲಾಗುತ್ತಿತ್ತು.

ಒಂದೇ ಕಣ್ಣಿನಲ್ಲಿ ಬದುಕು ಸಾಗಿಸಿತ್ತು
1999ರಲ್ಲಿ ಮೈಸೂರು ದಸರಾದಲ್ಲಿ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ ಹೊತ್ತ ಬಲರಾಮ ಅಲ್ಲಿಂದ 2011ರವರೆಗೆ ನಿರಂತರವಾಗಿ ಅಂಬಾರಿ ಹೊರುತ್ತಾ ಬಂದಿದ್ದನು. 2012ರಲ್ಲಿ ಅಂಬಾರಿ ಹೊರುವ ಜವಾಬ್ದಾರಿಯಿಂದ ನಿವೃತ್ತಿಗೊಳಿಸಲಾಯಿತು. ಆದರೆ ಸುಮಾರು 13 ವರ್ಷಗಳ ಕಾಲ ಅಂಬಾರಿ ಹೊತ್ತ ಬಲರಾಮ ಬಳಿಕ ದಸರಾದಲ್ಲಿ ನಿಶಾನೆ ಆನೆಯಾಗಿ, ಪಟ್ಟದ ಆನೆಯಾಗಿ ಹೀಗೆ ಸುಮಾರು ಎರಡೂವರೆ ದಶಕಗಳ ಕಾಲ ದಸರಾದಲ್ಲಿ ಪಾಲ್ಗೊಂಡಿದ್ದನು. ಆದರೆ ವಯಸ್ಸಾದ ಹಿನ್ನಲೆಯಲ್ಲಿ 2020ರಿಂದ ದಸರಾದಲ್ಲಿ ಭಾಗವಹಿಸಿರಲಿಲ್ಲ.
ಬಲರಾಮನ ಬಗೆಗಿನ ಮತ್ತೊಂದು ಆಸಕ್ತಿದಾಯಕ ವಿಚಾರ ಏನೆಂದರೆ ಇದಕ್ಕೆ ಕಾಣಿಸುತ್ತಿದ್ದದ್ದು ಒಂದೇ ಕಣ್ಣು. ಒಂದೇ ಕಣ್ಣಿನಲ್ಲಿಯೇ ಇದು ಬದುಕನ್ನು ಸಾಗಿಸಿತ್ತು. 1978ರ ಮುನ್ನ ಅಂದರೆ ಇದನ್ನು ಸೆರೆ ಹಿಡಿಯುವ ಮುನ್ನವೇ ಇದು ಇತರೆ ಪುಂಡಾನೆಗಳೊಂದಿಗೆ ಕಾದಾಡಿದ್ದು, ಈ ವೇಳೆ ಆನೆಯೊಂದು ಕೋರೆಯಿಂದ ಚುಚ್ಚಿದ ಪರಿಣಾಮ ಕಣ್ಣನ್ನು ಕಳೆದುಕೊಂಡಿತ್ತು. ಅಲ್ಲಿಂದ ಸಾಯುವವರೆಗೂ ಒಂದೇ ಕಣ್ಣಿನಲ್ಲಿ ಬದುಕು ಸಾಗಿಸಿತ್ತು ಎನ್ನುವುದೇ ವಿಶೇಷ.
ಗುಂಡಿನ ದಾಳಿಗೆ ಸಿಲುಕಿದ್ದ ಬಲರಾಮ
ವಯೋಸಹಜ ಕಾಯಿಲೆಯ ಹಿನ್ನಲೆಯಲ್ಲಿ ಹುಣಸೂರು ತಾಲೂಕಿಗೆ ಒಳಪಡುವ ಭೀಮನಕಟ್ಟೆ ಆನೆ ಶಿಬಿರದಲ್ಲಿ ಪಾಲನೆ ಮಾಡಲಾಗುತ್ತಿತ್ತು. ಈ ಹಿಂದೆ ಕಳೆದ 2022ರ ಡಿಸೆಂಬರ್ 14ರಂದು ಮೇಯಲು ಬಿಟ್ಟಿದ್ದ ವೇಳೆ ಆನೆ ಶಿಬಿರ ಬಳಿಯ ಹೊಲದ ಕಡೆಗೆ ಹೋಗಿತ್ತು. ಈ ವೇಳೆ ಅಟ್ಟಳಿಗೆ ಮೇಲೆ ಕಾವಲು ಕಾಯುತ್ತಿದ್ದ ಹೊಲದ ಮಾಲೀಕ ಕಾಡಾನೆಯೆಂದು ಭಾವಿಸಿ ಅದರ ಮೇಲೆ ಗುಂಡು ಹಾರಿಸಿದ್ದನು. ಪರಿಣಾಮ ಸುಮಾರು 45 ಚೆರ್ರಿ(ಚಿಲ್ಲು)ಗಳು ಮೈಗೆ ತಾಗಿದ್ದವು. ಹೀಗಾಗಿ ಅದು ಅಸ್ವಸ್ಥಗೊಂಡಿತ್ತು. ಆ ನಂತರ ಅದನ್ನು ಆನೆ ಶಿಬಿರಕ್ಕೆ ಕರೆತಂದು ಅದಕ್ಕೆ ಚಿಕಿತ್ಸೆ ನೀಡಲಾಗಿತ್ತು. ವೈದ್ಯರಾದ ಡಾ.ರಮೇಶ್ ಅವರು ಮೆಟಲ್ ಡಿಟೆಕ್ಟರ್ ಬಳಸಿ ದೇಹದಿಂದ ಚೆರ್ರಿಯನ್ನು ತೆಗೆದು, ಗಾಯ ನಂಜಾಗದಂತೆ ಚಿಕಿತ್ಸೆ ನೀಡಿದ್ದರು.
ಇದಾದ ಬಳಿಕ ಬಲರಾಮ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಿದ್ದನು. ಆದರೆ ಮತ್ತೆ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿತ್ತು. ಕರಳು ಬೇನೆಯಿಂದ ತೊಂದರೆ ಅನುಭವಿಸುತ್ತಿದ್ದ ಬಲರಾಮ ಕುಡಿದ ನೀರನ್ನೆಲ್ಲ ವಾಂತಿ ಮಾಡುತ್ತಿತ್ತು. ಈ ವೇಳೆ ಪರೀಕ್ಷೆ ಮಾಡಿದಾಗ ಗಂಟಲಿನಲ್ಲಿ ಏನೋ ಸಿಕ್ಕಿಹಾಕಿಕೊಂಡಿರುವುದು ಕಾಣಿಸಿತ್ತು. ಬಳಿಕ ತಪಾಸಣೆ ಮಾಡಿದಾಗ ಅದು ಹೊಟ್ಟೆ ಸೇರಿತ್ತು. ಬಳಿಕ ಗುದದ್ವಾರದಲ್ಲಿದ್ದ ಮರದ ತುಂಡನ್ನು ಹೊರ ತೆಗೆಯಲಾಗಿತ್ತು. ಆದರೆ ಮರದ ತುಂಡು ಗಂಟಲ್ಲಿ ಸಿಲುಕಿ ಹೊಟ್ಟೆಗೆ ಜಾರುವಾಗ ಕರುಳಿಗೆ ಗಾಯವಾಗಿತ್ತು. ಹೀಗಾಗಿ ರಕ್ತಸ್ರಾವವಾಗಿ ಅದು ನಿತ್ರಾಣಗೊಂಡಿತ್ತು. ಆದರೂ ಚಿಕಿತ್ಸೆ ನೀಡಿ ಚೇತರಿಸಿಕೊಳ್ಳುವಂತೆ ಮಾಡುವಲ್ಲಿ ಶ್ರಮವಹಿಸಲಾಗಿತ್ತು.
ಬಲರಾಮ ಇನ್ನಿಲ್ಲ ಎನ್ನುವ ಬೇಸರ
ಏ.27 ರಂದು ಬಲರಾಮ ತಾನು ಸೇವಿಸಿದ ಆಹಾರವನ್ನು ವಾಂತಿ ಮಾಡುತ್ತಿರುವುದು ಕಂಡು ಬಂದಾಗ ತಜ್ಞ ಪಶುವೈದ್ಯಾಧಿಕಾರಿಗಳಾದ ಡಾ.ಚಿಟ್ಟಿಯಪ್ಪ, ಡಾ.ರಮೇಶ್, ಡಾ.ಮಧನ್, ಡಾ.ಯಶಸ್ ಮತ್ತು ಡಾ.ಅಬ್ದುಲ್ ರವರ ತಂಡ ಎಂಡೋಸ್ಕೋಪಿ ಮಾಡಿ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆ ಮಾಡಿದಾಗ ಕ್ಷಯ ರೋಗವಿರುವುದು ಪತ್ತೆಯಾಗಿತ್ತು. ಆದರೆ ಮೇ.1 ರಿಂದ ಯಾವುದೇ ಆಹಾರ ನೀರು ಸೇವಿಸದ ಕಾರಣ ಚಿಕಿತ್ಸೆ ಫಲಕಾರಿಯಾಗದೇ ಮೇ.7 ರ ಸಂಜೆ 5.15 ರ ಸಮಯದಲ್ಲಿ ಮೃತಪಟ್ಟಿತು.
ಬಲರಾಮನ ಸಾವು ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಅದನ್ನು ಸಾಕಿ ಸಲಹಿದ ಮಾವುತರು, ಕಾವಾಡಿಗಳಲ್ಲಿ ಬೇಸರ ತರಿಸಿದೆ. ಅಷ್ಟೇ ಅಲ್ಲದೆ ಅದನ್ನು ಹತ್ತಿರದಿಂದ ನೋಡಿದ ಎಲ್ಲರಿಗೂ ನೋವು ತರಿಸಿದೆ. ಆದರೂ ಸುಮಾರು 45 ವರ್ಷಗಳ ಕಾಲ ಅರಣ್ಯ ಇಲಾಖೆಯ ಒಡನಾಟದಲ್ಲಿದ್ದ ಬಲರಾಮ ಇನ್ನಿಲ್ಲ ಎನ್ನುವುದು ಬೇಸರದ ಸಂಗತಿಯಾಗಿದೆ.
ಹೀಗಾಗಿ ಆತನಿಗೆ ಸಾಂಪ್ರದಾಯಿಕವಾಗಿ ವಿಧಿ ವಿಧಾನದೊಂದಿಗೆ ಸಕಲ ಸರ್ಕಾರಿ ಗೌರವದೊಂದಿಗೆ ಹುಣಸೂರು ವನ್ಯಜೀವಿ ವಲಯದ ಕಾರೆಕಟ್ಟೆ ಅರಣ್ಯ ಪ್ರದೇಶದಲ್ಲಿ ಮೇ.8 ರಂದು ಬೆಳಿಗ್ಗೆ ಪಶುವೈದ್ಯಾಧಿಕಾರಿಗಳಿಂದ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಮೈಸೂರಿನ ಅರಮನೆ ಪುರೋಹಿತರಿಂದ ಅಂತಿಮ ವಿಧಿ ವಿಧಾನ ಪೂಜೆ ನಡೆಸಿ, ಕುಶಲತೋಪು ಸಿಡಿಸಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡಲಾಯಿತು. ಇನ್ನು ಬಲರಾಮ ಬರೀ ನೆನಪಷ್ಟೆ.
-
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Property: ಕಟ್ಟಡ ಮಾಲೀಕರಿಗೆ ಬಂಪರ್ ಆಫರ್: ಶೇ.15ರವರೆಗಿನ ನಿಯಮ ಉಲ್ಲಂಘನೆ ಸಕ್ರಮಕ್ಕೆ ಜಿಬಿಎ ಅವಕಾಶ! -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral












Click it and Unblock the Notifications