Mysuru Dasara 2024: ಮೈಸೂರು ದಸರಾ ಆನೆಗಳ ತೂಕ ಮಾಪನ: ಅಭಿಮನ್ಯು ತೂಕವೆಷ್ಟು..?
ಮೈಸೂರು, ಆಗಸ್ಟ್ 24: ಈ ಬಾರಿಯ ಮೈಸೂರು ದಸರಾದ ಸಂಭ್ರಮಕ್ಕೆ ಮುನ್ನುಡಿ ಬರೆಯಲಾಗಿದ್ದು, ಮೊದಲ ಹಂತದ ಗಜಪಡೆ ಮೈಸೂರು ಅರಮನೆಗೆ ಪ್ರವೇಶವಾಗಿದೆ. ಐತಿಹಾಸಿಕ ದಸರಾದಂದು ನಡೆಯುವ ಜಂಬೂಸವಾರಿಯ ಪ್ರಮುಖ ಅಂಗವಾಗಿರುವ ಗಜಪಡೆ ಎರಡು ತಿಂಗಳಿರುವಾಗಲೇ ಮೈಸೂರು ನಗರಕ್ಕೆ ಬರುವುದು ಸಂಪ್ರದಾಯ. ಗಜಪಡೆ ನಗರ ಪ್ರವೇಶ ಮಾಡುತ್ತಿದ್ದಂತೆಯೇ ದಸರಾ ಕಳೆ ನಗರವನ್ನು ವ್ಯಾಪಿಸಲಾರಂಭಿಸುತ್ತದೆ.
ಆಗಸ್ಟ್ 21ರಂದು ಕಾಡಿನಿಂದ ನಾಡಿಗೆ ಆಗಮಿಸಿರುವ ದಸರಾ ಆನೆಗಳಿಗೆ ಈಗಾಗಲೇ ಅರಮನೆ ಆವರಣದಲ್ಲಿ ತಾಲೀಮು ನೀಡಲಾಗುತ್ತಿದೆ. ನಗರದ ಸದ್ದುಗದ್ದಲಕ್ಕೆ ವಿಚಲಿತವಾಗದಂತೆ ಆನೆಗಳಿಗೆ ತರಬೇತಿ ನೀಡಲಾಗುತ್ತಿದ್ದು, ಬೆಳಗ್ಗೆ ಮತ್ತು ಸಂಜೆ ಎರಡು ಸಮಯ ಅರಮನೆಯಿಂದ ಬನ್ನಿಮಂಟಪದವರೆಗೆ ತಾಲೀಮು ನಡೆಸಲಾಗುತ್ತಿದೆ.

ಮೈಸೂರು ದಸರಾ ಸಿದ್ಧತೆಯ ಮೊದಲ ಭಾಗವಾಗಿ ದಸರಾ ಗಜಪಡೆಯ ತೂಕ ಪರಿಶೀಲನೆ ನಡೆಸಲಾಗಿದೆ. ದೇವರಾಜ ಮೊಹಲ್ಲಾದಲ್ಲಿರುವ ಸಾಯಿ ತೂಕ ಮಾಪನ ಕೇಂದ್ರದಲ್ಲಿ ಇಂದು ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಕಾಡಿನಿಂದ ನಾಡಿಗೆ ಬಂದಿರುವ ಆನೆಗಳ ತೂಕ ಮಾಪನ ಮಾಡಲಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಆನೆಗಳು ಮೈಸೂರಿಗೆ ಕಾಲಿಡುತ್ತಿದ್ದಂತೆ ಮೊದಲು ತೂಕ ಮಾಪನ ಮಾಡಲಾಗಿದೆ. ತೂಕ ಪರಿಶೀಲನೆ ನಂತರ ಮುಂದೆ ಹಂತ ಹಂತವಾಗಿ ಆನೆಗಳಿಗೆ ಪ್ರತಿನಿತ್ಯ ಪೌಷ್ಟಿಕ ಆಹಾರ ಪದಾರ್ಥಗಳನ್ನು ನೀಡಲಾಗುತ್ತದೆ.
ಆನೆಗಳ ತೂಕದ ವಿವರ ಈ ಕೆಳಗಿನಂತಿದೆ
ಅಭಿಮನ್ಯು- 5,560 ಕೆ.ಜಿ
ವರಲಕ್ಷ್ಮಿ - 3,495 ಕೆ.ಜಿ
ಭೀಮ - 4,925 ಕೆ.ಜಿ
ಏಕಲವ್ಯ - 4,730 ಕೆ.ಜಿ
ಲಕ್ಷ್ಮಿ - 2,480 ಕೆ.ಜಿ
ರೋಹಿತ್ -3,625 ಕೆ.ಜಿ
ಗೋಪಿ - 4,970 ಕೆ.ಜಿ
ಕಂಜನ್ - 4,515 ಕೆ.ಜಿ
ಧನಂಜಯ -5,155 ಕೆ.ಜಿ
ಇನ್ನು ಆನೆಗಳಿಗೆ ನಾಳೆ ಮತ್ತು ನಾಡಿದ್ದು ಎರಡು ದಿನಗಳ ಕಾಲ ಅರಮನೆ ಒಳಗಡೆ ತಾಲೀಮು ನಡೆಯುಲಿದೆ. ಆ. 26ರಿಂದ ಅರಮನೆಯಿಂದ ಬನ್ನಿಮಂಟಪದವರೆಗೆ ತಾಲೀಮು ಆರಂಭವಾಗುತ್ತದೆ. ಆನೆಗಳ ತೂಕ ಹೆಚ್ಚಿಸುವುದು ನಮ್ಮ ಉದ್ದೇಶವಲ್ಲ. ಆನೆಗಳನ್ನು ಆರೋಗ್ಯವಾಗಿ ನೋಡಿಕೊಳ್ಳುವುದು ನಮ್ಮ ಉದ್ದೇಶ. ಆನೆಗಳಿಗೆ ಈಗ ಪ್ರೋಟಿನ್ ಆಹಾರ ಹೆಚ್ಚಿಸುತ್ತೇವೆ. ದಸರಾ ಮುಗಿಯುದರೊಳಗಡೆ ಈ ಎಲ್ಲಾ ಆನೆಗಳ ತೂಕ ಹೆಚ್ಚು ಕಮ್ಮಿ 500 ಕೆ.ಜಿ ಹೆಚ್ಚಾಗುತ್ತದೆ ಎಂದು ಡಿಸಿಎಫ್ ಪ್ರಭುಗೌಡ ತಿಳಿಸಿದರು.












Click it and Unblock the Notifications