ಮೈಸೂರಿನ ಗರಡಿಮನೆಗಳಲ್ಲಿ ಗರಿಗೆದರಿದ ಚಟುವಟಿಕೆ: ಪೈಲ್ವಾನರ ದಿನಚರಿ ಹೇಗಿರುತ್ತದೆ ಗೊತ್ತಾ?
ಮೈಸೂರು, ಸೆಪ್ಟೆಂಬರ್ 18: ಮೈಸೂರು ದಸರಾ ಬರುತ್ತಿದ್ದಂತೆಯೇ ನಗರದಲ್ಲಿರುವ ಗರಡಿ ಮನೆಗಳಲ್ಲಿ ಚಟುವಟಿಕೆಗಳು ಬಿರುಸುಗೊಳ್ಳುತ್ತವೆ. ತಾವು ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಗೆಲುವು ಸಾಧಿಸುವುದಕ್ಕಾಗಿ ಕುಸ್ತಿಪಟುಗಳು ತಯಾರಿ ನಡೆಸಲು ಆರಂಭಿಸಿದ್ದಾರೆ. ವರ್ಷದಲ್ಲಿ ಅಲ್ಲಲ್ಲಿ ಕುಸ್ತಿಪಂದ್ಯಾವಳಿ ನಡೆದು ಬಹುಮಾನಗಳನ್ನು ಪಡೆದರೂ ದಸರಾ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಗೆಲುವು ಪಡೆಯುವುದೆಂದರೆ ಕುಸ್ತಿಪಟುಗಳಿಗೆ ಜೀವನದಲ್ಲಿ ಏನೋ ಸಾಧಿಸಿದ ಸಂಭ್ರಮ. ಹೀಗಾಗಿಯೇ ದಸರಾ ಕುಸ್ತಿ ಪಂದ್ಯಾವಳಿಯಲ್ಲಿ ಗೆದ್ದೇ ಗೆಲ್ಲಬೇಕೆಂದು ಪಣತೊಟ್ಟು ತಾಲೀಮು ನಡೆಸುತ್ತಾರೆ.
ಮೈಸೂರು ದಸರಾಗೂ ಕುಸ್ತಿಗೂ ಅವಿನಾಭಾವ ಸಂಬಂಧವಿದೆ. ಹಿಂದೆ ಮಹಾರಾಜರ ಕಾಲದಲ್ಲಿ ದಸರಾ ಸಂದರ್ಭದಲ್ಲಿ ಕುಸ್ತಿಪಟುಗಳನ್ನು ಕುಸ್ತಿಯಾಡಿಸಿ ಗೆದ್ದವರನ್ನು ಸನ್ಮಾನಿಸಿ ಗೌರವಿಸಲಾಗುತ್ತಿತ್ತು. ಆ ಮೂಲಕ ಕುಸ್ತಿ ಪಂದ್ಯಾವಳಿಯನ್ನು ಪ್ರೋತ್ಸಾಹಿಸಿ ಕ್ರೀಡಾಪಟುಗಳನ್ನು ಉತ್ತೇಜಿಸುತ್ತಿದ್ದ ಕಾರಣ ಮೈಸೂರಲ್ಲಿ ಗರಡಿಮನೆಗಳು ಎಲ್ಲೆಂದರಲ್ಲಿ ಹುಟ್ಟಿಕೊಂಡು ಹಾಗೆಯೇ ಕುಸ್ತಿಪಟುಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆದರೆ ಇವತ್ತು ಮೊದಲಿಗೆ ಹೋಲಿಸಿದರೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿರಬಹುದಾದರೂ ಕುಸ್ತಿಪಟುಗಳಿಗೆ ಮನ್ನಣೆ ಕಡಿಮೆಯಾಗಿಲ್ಲ.

ಮೈಸೂರು ನಗರಕ್ಕೊಂದು ಸುತ್ತುಹೊಡೆದರೆ ವರ್ಷದ ಎಲ್ಲಾ ದಿನಗಳಲ್ಲಿಯೂ ಗರಡಿಮನೆಗಳು ಚಟುವಟಿಕೆಯಿಂದ ಕೂಡಿರುತ್ತವೆ. ಅಲ್ಲದೆ ಅಲ್ಲಲ್ಲಿ ಕುಸ್ತಿಪಂದ್ಯಾವಳಿಗಳು ಸಹ ನಡೆಯುತ್ತಿರುತ್ತವೆ. ಆದರೆ ದಸರಾ ದಿನಗಳಲ್ಲಿ ಗರಡಿಮನೆಗಳಲ್ಲಿ ಸಂಭ್ರಮ ತುಸು ಜಾಸ್ತಿಯೇ ಇರುತ್ತದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ದಸರಾ ಸಂದರ್ಭ ನಡೆಯುವ ವಿವಿಧ ಕಾರ್ಯಕ್ರಮಗಳ ನಡುವೆ ಕುಸ್ತಿಗೂ ಮಹತ್ವದ ಸ್ಥಾನವಿದೆ.
ಈ ಕುಸ್ತಿ ಪಂದ್ಯಾವಳಿಗಳಿಗೆ ರಾಜಮಹಾರಾಜರ ಕಾಲದ ಇತಿಹಾಸವಿದೆ. ರಾಜರ ಕಾಲದಲ್ಲಿ ಪೈಲ್ವಾನ್‌ರನ್ನು ಕರೆಸಿ ಪ್ರತಿ ವಾರವೂ ಕುಸ್ತಿ ನಡೆಸಲಾಗುತ್ತಿತ್ತು. ಅಲ್ಲದೆ, ದಸರಾ ಸಂದರ್ಭ ಅರಮನೆಯ ಕರಿಕಲ್ಲು ತೊಟ್ಟಿಯಲ್ಲಿ ನಡೆಯುತ್ತಿದ್ದ ವಜ್ರಮುಷ್ಠಿ ಕಾಳಗ ಖ್ಯಾತಿ ಪಡೆದಿತ್ತು.

ಮಹಾರಾಜರ ಕಾಲದಲ್ಲಿ ಪೈಲ್ವಾನರಿಗೆ ರಾಜಾಶ್ರಯ
ಪೈಲ್ವಾನರಿಗೆ ರಾಜರೇ ಆಶ್ರಯ ನೀಡಿ ಪ್ರೋತ್ಸಾಹಿಸುತ್ತಿದ್ದರು. ಹೀಗಾಗಿ ನಗರದಾದ್ಯಂತ ಗರಡಿಮನೆಗಳು ಹುಟ್ಟಿಕೊಂಡಿದ್ದವು. ಮುಂಜಾನೆ ಚುಮುಚುಮು ಚಳಿಯಲ್ಲಿಯೇ ಗರಡಿ ಮನೆಗೆ ಹೋಗಿ ಅಭ್ಯಾಸ ನಡೆಸುತ್ತಿದ್ದರು. ದಸರಾ ಸಂದರ್ಭ ನಡೆಯುವ ಕುಸ್ತಿ ಪಂದ್ಯದಲ್ಲಿ ತನ್ನ ಬಲ ಪ್ರದರ್ಶಿಸಿ ಮಹಾರಾಜರಿಂದ ಪ್ರಶಂಸೆ ಪಡೆಯುತ್ತಿದ್ದರು. ಜಯಶಾಲಿಯಾದ ಪೈಲ್ವಾನರಿಗೆ ದಸರಾ ಕೇಸರಿ, ದಸರಾ ಕಂಠೀರವ, ದಸರಾ ಕುಮಾರ ಪ್ರಶಸ್ತಿ ನೀಡಲಾಗುತ್ತಿತ್ತು. ಇದು ಇಂದಿಗೂ ಮುಂದುವರೆದುಕೊಂಡು ಬರುತ್ತಿದ್ದು ದಸರಾ ಸಂದರ್ಭ ಕರಿತೊಟ್ಟಿಯಲ್ಲಿ ನಡೆಯುವ ವಜ್ರಮುಷ್ಠಿ ಕಾಳಗ ಇದಕ್ಕೆ ಸಾಕ್ಷಿಯಾಗಿದೆ.
ಇನ್ನು ಇವತ್ತಿಗೂ ನಗರದಲ್ಲಿ ಹಲವಾರು ಗರಡಿಮನೆಗಳು ಕಾರ್ಯಾಚರಿಸುತ್ತಿದ್ದು, ಸುಣ್ಣದಕೇರಿ ನಾಲಾ ಬೀದಿಯ ಗೋಪಾಲಸ್ವಾಮಿ ಗರಡಿ, ಬಸವೇಶ್ವರ ರಸ್ತೆಯ ಮಹಾಲಿಂಗೇಶ್ವರ ಮಠದ ಗರಡಿ, ಕೆ.ಜಿ.ಕೊಪ್ಪಲು, ಪಡುವಾರಹಳ್ಳಿಯ ಹತ್ತೂ ಜನರ ಗರಡಿ, ಹುಲ್ಲಿನ ಬೀದಿಯ ಈಶ್ವರರಾಯನ ಗರಡಿ, ಫಕೀರ್ ಅಹಮ್ಮದ್ ಸಾಹೇಬರ ಗರಡಿ ಹೀಗೆ ಗರಡಿ ಮನೆಗಳ ಹೆಸರು ಮುಂದುವರೆಯುತ್ತಾ ಹೋಗುತ್ತದೆ. ಇಂತಹ ಗರಡಿಮನೆಗಳಿಂದ ಬೆಟ್ಟದ ಚಿಕ್ಕಣ್ಣ, ಪೈ.ಪಾಪಣ್ಣ, ಪೈ.ಶಂಕರ್ ಚಕ್ರವರ್ತಿ, ಚಿನ್ನ, ಅನಂತ್ ಅವರಂತಹ ನೂರಾರು ಪೈಲ್ವಾನ್ ಗಳು ಪ್ರತಿಭೆ ಪ್ರದರ್ಶಿಸಿ ಮೈಸೂರಿನ ಖ್ಯಾತಿಯನ್ನು ಇಮ್ಮಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೈಲ್ವಾನರ ದಿನಚರಿ ಹೇಗಿರುತ್ತೆ ಗೊತ್ತಾ?
ಇವತ್ತು ಆಧುನಿಕ ಜಿಮ್ ಗಳು ಬಂದಿದ್ದು ಯುವಕರು ಅದರತ್ತ ಒಲವು ತೋರುತ್ತಿದ್ದರೂ ಗರಡಿ ಮನೆಗಳು ಇನ್ನೂ ಕೂಡ ಇಲ್ಲಿ ಸಕ್ರಿಯವಾಗಿರುವುದು ನಿಜಕ್ಕೂ ಖುಷಿಪಡುವ ಸಂಗತಿಯೇ.. ಆಧುನಿಕ ಜಿಮ್ ಗಳಿಗೂ ಗರಡಿಮನೆಗಳಿಗೂ ಹಲವಾರು ವ್ಯತ್ಯಾಸಗಳಿರುವುದನ್ನು ನಾವು ಕಾಣಬಹುದಾಗಿದೆ. ಗರಡಿ ಮನೆಗಳಿಗೆ ಭೇಟಿ ನೀಡಿದ್ದೇ ಆದರೆ ಹಲವು ವಿಶೇಷತೆಗಳನ್ನು ಕಾಣಬಹುದಾಗಿದೆ. ಇಲ್ಲಿ ನಿತ್ಯ ತಾಲೀಮು ನಡೆಸುವ ಪೈಲ್ವಾನರ ನಿತ್ಯದ ದಿನಚರಿ, ಅವರ ಊಟ, ಎಲ್ಲವೂ ವಿಭಿನ್ನ ಮತ್ತು ವಿಶಿಷ್ಟವಾಗಿರುತ್ತವೆ.
ಪೈಲ್ವಾನರು ದೇಹವನ್ನು ವ್ಯಾಯಾಮ, ಕಸರತ್ತಿನ ಮೂಲಕ ದಂಡಿಸುವುದನ್ನು ಕಾಣಬಹುದಾಗಿದೆ. ಇದಕ್ಕಾಗಿ ಅವರು ಮುಂಜಾನೆ ಎದ್ದು ಗರಡಿಮನೆಗೆ ಹೋಗುವ ಪೈಲ್ವಾನರು ಅಲ್ಲಿರುವ ಪರಿಕರಗಳಾದ ಕಲ್ಲುಗುಂಡು, ಬಳೆ, ಗದೆ, ಕೊಂತ, ಕಂಬಕಟ್ಟೋದು, ಮಣ್ಣಿನಲ್ಲಿ ಪರಸ್ಪರ ಕುಸ್ತಿ ಅಭ್ಯಾಸ ನಡೆಸುವುದಲ್ಲದೆ, ಈ ಸಂದರ್ಭ ಹುಲಿಹೆಜ್ಜೆ, ಡೇಕ್ನಿ, ಕಟಾಪ್, ಹನುಮಾನ್ ದಂಡೆ, ಸುತ್ತಂಡೆ, ಚಪ್ಪಡಿದಂಡೆ, ಬಸ್ಕಿ ಮುಂತಾದ ಕಸರತ್ತುಗಳನ್ನು ಸಹ ನಡೆಸುತ್ತಾರೆ.
ಪೈಲ್ವಾನರು ಊರಿನ ಹೆಮ್ಮೆಯಾಗಿದ್ದು ಹೇಗೆ?
ಗರಡಿಮನೆಯಿಂದ ತಾಲೀಮು ನಡೆಸಿ ಮನೆಗೆ ಬರುವ ಪೈಲ್ವಾನರು ಮನೆಯಲ್ಲಿ ಸಿದ್ಧಪಡಿಸಿದ ಲೀಟರ್ ಗಟ್ಟಲೆ ಬಾದಾಮಿ ಬೀಜಗಳ ಮಿಶ್ರಣ ಮಾಡಿದ ಹಾಲು, ಬೆಲ್ಲ ಮತ್ತು ರವೆಯಿಂದ ಮಾಡಿದ ಸಿಹಿ ತಿನಿಸು, ಬೆಣ್ಣೆ ಮುಂತಾದ ಪೌಷ್ಠಿಕ ಆಹಾರಗಳನ್ನು ಸೇವನೆ ಮಾಡುತ್ತಾರೆ. ಮಧ್ಯಾಹ್ನ ಚಪಾತಿ, ರಾಗಿ ಮುದ್ದೆ, ಅನ್ನ ಸಾರು, ಹಾಲು, ಬೆಣ್ಣೆ, ಹಣ್ಣು ಹೀಗೆ ಸಾಗುತ್ತದೆ. ಇವರೆಲ್ಲರೂ ನಿತ್ಯವೂ ಕಠಿಣ ತಾಲೀಮು ನಡೆಸಿ ದೇಹವನ್ನು ಕಟ್ಟುಮಸ್ತಾಗಿಟ್ಟುಕೊಳ್ಳುತ್ತಾರೆ.
ಮೊದಲೆಲ್ಲಾ ಪೈಲ್ವಾನ್ ಇದ್ದಾರೆಂದರೆ ಅದು ಊರಿಗೆ ಹೆಮ್ಮೆಯ ಸಂಗತಿಯಾಗಿರುತ್ತಿತ್ತು, ಅಲ್ಲದೆ, ಎಲ್ಲಾ ರೀತಿಯ ಪ್ರೋತ್ಸಾಹ ನೀಡಿ ಕಳುಹಿಸಲಾಗುತ್ತಿತ್ತು. ಪ್ರಸ್ತುತ ದಿನಗಳಲ್ಲಿ ಗರಡಿಮನೆಗಳಿಗೆ ತೆರಳುವವರ ಸಂಖ್ಯೆ ಕಡಿಮೆಯಾಗಿರಬಹುದು ಆದರೆ ಅದರ ಘನತೆ ಗೌರವ ಕಡಿಮೆಯಾಗಿಲ್ಲ. ಮೈಸೂರು ಇತಿಹಾಸದಲ್ಲಿ ಪೈಲ್ವಾನರಿಗೆ ಮಹತ್ವದ ಸ್ಥಾನ ನೀಡಲಾಗಿದ್ದು, ಅದು ಇವತ್ತಿಗೂ ಇದೆ. ಹೀಗಾಗಿಯೇ ದಸರಾ ವೇಳೆ ನಡೆಯುವ ಕುಸ್ತಿ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸುವುದೇ ಜೀವಮಾನದ ಸಾಧನೆ ಎಂಬ ನಂಬಿಕೆ ಪೈಲ್ವಾನರಲ್ಲಿದೆ.












Click it and Unblock the Notifications