Mysuru Dasara: ದಸರಾ ಜಂಬೂಸವಾರಿಗೆ ಗಜಪಡೆ ತಾಲೀಮು ಹೇಗಿರಲಿದೆ ಗೊತ್ತಾ..?
ಮೈಸೂರು, ಆಗಸ್ಟ್ 26: ಸಾಂಸ್ಕೃತಿಕ ನಗರಿ ಮೈಸೂರಿಗೆ ನಿಧಾನವಾಗಿ ದಸರಾ ಕಳೆ ಆರಂಭಿಸಲಾರಂಭಿಸಿದೆ. ಪ್ರತಿವರ್ಷವೂ ಗಜಪಡೆ ನಗರಕ್ಕೆ ಪ್ರವೇಶಿಸುತ್ತಿದ್ದಂತೆಯೇ ನಗರ ದಸರಾದ ಸಿದ್ಧತೆಗಳು ಆರಂಭವಾಗುತ್ತವೆ. ಜನ ಕೂಡ ಮಳೆಗಾಳಿಯನ್ನೆಲ್ಲ ಕೊಡವಿಕೊಂಡು ಬಿಸಿಲಿಗೆ ಮೈಕೊಟ್ಟು ದಸರಾ ಸಂಭ್ರಮವನ್ನು ಸ್ವಾಗತಿಸಲು ತಯಾರಿ ನಡೆಸುತ್ತಾರೆ. ಗಜಪಡೆ ಅರಮನೆ ಪ್ರವೇಶಿಸಿ ತಾಲೀಮು ನಡೆಸಲು ಆರಂಭಿಸುತ್ತಿದ್ದಂತೆಯೇ ಬರಲಿರುವ ದಸರಾಕ್ಕೆ ಸಡಗರಗಳು ಶುರುವಾದಂತೆಯೇ.
ಕಳೆದ ವರ್ಷ ಮುಂಗಾರು ಕ್ಷೀಣವಾಗಿ ಬರ ಕಾಡಿತ್ತು. ಕೆರೆಕಟ್ಟೆಗಳು, ಜಲಾಶಯಗಳು ಭರ್ತಿಯಾಗದೆ ರೈತಾಪಿ ವರ್ಗ ಸೇರಿದಂತೆ ಜನರು ಆತಂಕದಲ್ಲಿದ್ದರು. ಆದರೆ ಈ ಬಾರಿ ಉತ್ತಮ ಮಳೆಯಾಗಿದೆ. ಜನ ಕೂಡ ನೆಮ್ಮದಿಯುಸಿರು ಬಿಟ್ಟಿದ್ದಾರೆ. ಹೀಗಾಗಿ ಮಳೆಗಾಲದ ಗುಂಗಿನಿಂದ ಹೊರಬಂದು ಎಳೆ ಬಿಸಿಲಿಗೆ ಮೈಯೊಡ್ಡಿ ದಸರಾವನ್ನು ಸಂಭ್ರಮಿಸಲು ತಯಾರಿ ಆರಂಭಿಸಿದ್ದಾರೆ. ಗಜಪಡೆಯ ತಾಲೀಮು ಬರಲಿರುವ ದಸರಾ ಬಗೆಗೆ ಕಾತರವನ್ನು ಹುಟ್ಟು ಹಾಕಿದೆ.

ಈಗ ನಗರದಲ್ಲಿ ದಿನಕ್ಕೆರಡು ಬಾರಿ ಗಜಪಡೆ ತಾಲೀಮು ನಡೆಸುತ್ತಿರುವುದರಿಂದ ದಸರಾದ ಸಡಗರ ಶುರುವಾಗಿದೆ. ಜನ ತಾಲೀಮು ನೋಡಲು ಮುಗಿ ಬೀಳುತ್ತಿದ್ದಾರೆ. ಗಜಪಡೆಗಳು ಶಿಸ್ತಿನಿಂದ ಹೆಜ್ಜೆ ಹಾಕುವುದನ್ನು ನೋಡುವುದೇ ಒಂಥರಾ ಮಜಾ.. ಅದರಲ್ಲೂ ಅವುಗಳ ಫೋಟೋ ಹಿಡಿದು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಬಿಡುವುದು ಖುಷಿ ಕೊಡುವುದರಿಂದ ಜನರೆಲ್ಲ ಮೊಬೈಲ್ ಹಿಡಿದು ಗಜಪಡೆಗಳ ಚಿತ್ರ ಸೆರೆಹಿಡಿಯುವ ದೃಶ್ಯಗಳು ಸಾಮಾನ್ಯವಾಗಿದೆ.
ತಾಲೀಮು ಕಠಿಣವಾಗುತ್ತಲೇ ಹೋಗಲಿದೆ
ಗಜಪಯಣದ ಮೂಲಕ ಆ.21ರಂದು ಮೈಸೂರಿಗೆ ಆಗಮಿಸಿದ್ದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ದಸರಾ ಗಜಪಡೆಯ ಮೊದಲ ತಂಡ ಆ ನಂತರ ಆ.23ರಂದು ಅರಮನೆ ಆವರಣಕ್ಕೆ ಪ್ರವೇಶ ಪಡೆದಿದ್ದವು. ಇದಾದ ನಂತರ ಅವುಗಳ ತೂಕ ಪರೀಕ್ಷೆ ನಡೆಸಿ ತಾಲೀಮು ಆರಂಭಿಸಲಾಗಿದೆ. ಎರಡು ದಿನಗಳ ಕಾಲ ಅರಮನೆ ಆವರಣದಲ್ಲಿದ್ದ ಗಜಪಡೆ ಅಲ್ಲಿಯೇ ತಾಲೀಮು ನಡೆಸಿದ್ದರು. ಇದಾದ ನಂತರ ಆ.25(ಭಾನುವಾರ) ರಿಂದ ಗಜಪಡೆಗೆ ತಾಲೀಮು ಆರಂಭಿಸಲಾಗಿದ್ದು, ಇನ್ನು ಮುಂದೆ ಪ್ರತಿದಿನವೂ ತಾಲೀಮು ನಡೆಸಲಿದ್ದು, ದಿನಕಳೆದಂತೆ ಈ ತಾಲೀಮು ಕಠಿಣವಾಗುತ್ತಲೇ ಹೋಗಲಿದೆ.
ಮೊದಲ ದಿನವೇ ಜಂಬೂಸವಾರಿ ಮಾರ್ಗದ ಬನ್ನಿಮಂಟಪದವರೆಗೂ ಪೂರ್ಣ ಪ್ರಮಾಣದಲ್ಲಿ ಆನೆಗಳು ಹೆಜ್ಜೆಹಾಕಿವೆ. ಈ ಪೈಕಿ ತಂಡದಲ್ಲಿದ್ದ ಕಂಜನ್ ಆನೆಗೆ ಕಾಲು ನೋವು ಇರುವ ಕಾರಣ ವಿಶ್ರಾಂತಿ ನೀಡಲಾಗಿತ್ತು. ಇನ್ನು ಪ್ರತಿದಿನವೂ ತಾಲೀಮು ಹೇಗೆ ಆರಂಭವಾಗಲಿದೆ ಎಂಬುದನ್ನುನ ನೋಡಿದ್ದೇ ಆದರೆ ಆನೆಗಳಿಗೆ ಮೈಸೂರು ಅರಮನೆ ಆವರಣದಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ತಾಲೀಮಿಗೆ ಚಾಲನೆ ನೀಡಲಾಗುತ್ತದೆ.
ಅರಮನೆಯ ಬಲರಾಮ ದ್ವಾರದಿಂದ ಬೆಳಗ್ಗೆ 7 ಗಂಟೆಗೆ ಹೊರಟು ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ಕೆ.ಆರ್.ಆಸ್ಪತ್ರೆ, ಬಂಬೂಬಜಾರ್, ಹೈವೇ ವೃತ್ತದ ಮೂಲಕ ಸಾಗಿ ಬನ್ನಿಮಂಟಪದ ಪಂಜಿನ ಕವಾಯತು ಮೈದಾನ ತಲುಪಿ ಬಳಿಕ ವಾಪಾಸ್ಸು ಆಗುತ್ತವೆ. ಇದು ಪ್ರತಿದಿನವೂ ಮುಂದುವರೆಯಲಿದೆ.

ಸರಾಸರಿ 3.9 ಕಿ.ಮೀ ವೇಗದಲ್ಲಿ ಗಜಪಡೆ ನಡಿಗೆ
ಮೊದಲ ದಿನ ಅಭಿಮನ್ಯು ಹಿಂದೆ ವರಲಕ್ಷ್ಮಿ, ಏಕಲವ್ಯ, ಭೀಮ, ಲಕ್ಷ್ಮಿ, ಧನಂಜಯ, ಗೋಪಿ ಹೆಜ್ಜೆ ಹಾಕಿದದ್ದು, ಮಾರ್ಗದ ನಡುವೆ ಆನೆಗಳು ನಿಂತಾಗ ಮುನ್ನಡೆಯುತ್ತಿದ್ದ ಅಭಿಮನ್ಯು ನಿಂತು ಕಾಯುತ್ತಿದ್ದ. ನಾಲ್ಕು ಕಡೆ ಲದ್ದಿ ಹಾಕಲು ಒಂದೆರಡು ನಿಮಿಷ ವಿರಮಿಸಿದ ಆನೆಗಳು, ನಂತರ ಯಾವುದೇ ಅಳುಕಿಲ್ಲದೆ ಸರಾಗವಾಗಿ ತಾಲೀಮು ಪೂರ್ಣಗೊಳಿಸಿವೆ. ಗಜಪಡೆಗಳ ಸಾಲಿನ ನಡುವೆ ಅಂತರ ಹೆಚ್ಚಾದಾಗ ಅಭಿಮನ್ಯು, ಗೋಪಿ, ಭೀಮ ವೇಗ ಕಡಿಮೆಗೊಳಿಸುವುದು, ನಿಲ್ಲುವುದು ಮಾಡುತ್ತಿದ್ದವು. ಬೇರೆ ಕಾಡಿನ ಶಿಬಿರಗಳಿಂದ ಬಂದರೂ ನಾವೆಲ್ಲ ಒಂದೇ ಎನ್ನುವ ಭಾವ ಮೂಡಿಸಿದ್ದವು.
10.4 ಕಿ.ಮೀ ಮೊದಲ ದಿನದ ನಡಿಗೆ ತಾಲೀಮನ್ನು ಪೂರ್ಣಗೊಳಿಸಿದ್ದು, ಗಂಟೆಗೆ ಸರಾಸರಿ 3.9 ಕಿ.ಮೀ ವೇಗದಲ್ಲಿ ನಡೆದಿವೆ. ಆದರೆ ಅರಮನೆಯಂಗಳದಿಂದ ಹೊರಟ ಗಜಪಡೆ ರಾಜಗಾಂಭಿರ್ಯದಲ್ಲಿ ರಾಜ ಬೀದಿಯಲ್ಲಿ ಹೆಜ್ಜೆಯಿಡುತ್ತ ಸಾಗಿತು. ಅರಮನೆಯ ಬಲರಾಮ ದ್ವಾರದ ಮೂಲಕ ಹೊರಟ ಆನೆಗಳು, ಚಾಮರಾಜೇಂದ್ರ ವೃತ್ತ, ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆಯ ಆಯುರ್ವೇದಿಕ್ ಆಸ್ಪತ್ರೆ ವೃತ್ತ, ಆರ್‌ಎಂಸಿ ವೃತ್ತ, ಹೈವೇ ವೃತ್ತದ ಮಾರ್ಗವಾಗಿ ಸಾಗಿ ಬನ್ನಿಮಂಟಪದ ಪಂಜಿನ ಕವಾಯತು ಮೈದಾನ ತಲುಪಿ ಮತ್ತೆ ಮೈಸೂರು ಅರಮನೆಗೆ ಮರಳಿದವು.
ಗಜಪಡೆಗಳಿಗೆ ಪೌಷ್ಠಿಕ ಆಹಾರ ತಯಾರಿ
ಈ ವೇಳೆ ಆನೆಗಳಿಗೆ ಯಾವುದೇ ತೊಂದರೆ ಆಗದಂತೆ ಎಸ್ಕಾರ್ಟ್ ನೀಡಲಾಗಿತ್ತು. ಸಾಲಾಗಿ ಸಾಗಿದ ದಸರಾ ಗಜಪಡೆಯನ್ನು ರಸ್ತೆಗಳ ಬದಿಗಳಲ್ಲಿ ನಿಂತ ಜನ ಕಣ್ತುಂಬಿಕೊಂಡರು. ರಸ್ತೆಯುದ್ದಕ್ಕೂ ಜನರು ಆನೆಗಳನ್ನು ನೋಡಿ ಕೈಮುಗಿದರು. ಹೂ ವ್ಯಾಪಾರಿಗಳು ಮಾಲೆ ಎಸೆದು ಧನ್ಯತೆ ಮೆರೆದರು. ಮಕ್ಕಳು ಪೋಷಕರ ಹೆಗಲ ಮೇಲೆ ಕುಳಿತು ಚಪ್ಪಾಳೆ ತಟ್ಟುತ್ತಿದ್ದ ದೃಶ್ಯ ಸಂತಸ ಉಕ್ಕಿಸಿದವು. ಫೋಟೊ ತೆಗೆಯಲು ಜನರು ಮುಗಿಬಿದ್ದರು. ಪೊಲೀಸ್ ಭದ್ರತೆ: ಗಜ ಪಡೆ ಸಾಗುತ್ತಿದ್ದರೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು.
ಗಜಪಡೆ ಮುಂದೆ ರಸ್ತೆಯಲ್ಲಿ ಬಿದ್ದಿರುವ ವಾಹನಗಳ ಮೊಳೆ, ಕಬ್ಬಿಣದ ಚೂರುಗಳು ಆನೆಗಳ ಪಾದಗಳಿಗೆ ಚುಚ್ಚದಿರಲು ಆಯಸ್ಕಾಂತದ ಸರಳಿನ ಬಂಡಿಯನ್ನು ಜೀಪ್ ಹಿಂದೆ ಹಾಕಲಾಗಿತ್ತು. ಆನೆಗಳ ಸುಗಮ ಸಂಚಾರಕ್ಕೆ ಪೊಲೀಸರು ಅನುವು ಮಾಡಿಕೊಟ್ಟರು. ಡಿಸಿಎಫ್ ಐ.ಬಿ.ಪ್ರಭುಗೌಡ, ಆರ್‌ಎಫ್‌ಒ ಸಂತೋಷ್ ಹೂಗಾರ್, ಪಶುವೈದ್ಯ ಡಾ.ಮುಜೀಬ್ ರೆಹಮಾನ್, ಸಹಾಯಕರಾದ ಅಕ್ರಮ್ ಇದ್ದರು. ದಸರಾ ಆನೆಗಳಿಗೆ ವಿಶೇಷ ಪೌಷ್ಟಿಕ ಆಹಾರ ನೀಡಲಾಗುತ್ತಿದ್ದು, ಶನಿವಾರ ರಾತ್ರಿಯಿಂದ ಗೋಣಿ ಆಲದ ಸೊಪ್ಪು ಭತ್ತದ ಹುಲ್ಲು, ಕಬ್ಬಿನೊಂದಿಗೆ ಅಕ್ಕಿ, ಭತ್ತ, ಬೆಲ್ಲ, ಉದ್ದಿನ ಕಾಳು, ಹಸಿರು ಕಾಳು, ಗೋಧಿ, ತುಪ್ಪ, ತರಕಾರಿಯಿಂದ ಮಾಡಿದ ಆಹಾರ ನೀಡಲಾಗುತ್ತಿದೆ.
ವಿವಿಧ ಹಂತಗಳಲ್ಲಿ ಗಜಪಡೆ ತಾಲೀಮು
ಮಾವುತರು ಹಾಗೂ ಕಾವಾಡಿಗರ ಮಕ್ಕಳು ಮುದ್ದಿನ ಆನೆಗಳಿಗೆ ಆಹಾರ ನೀಡುತ್ತಿದ್ದು, ಮಧ್ಯಾಹ್ನ ಬಿಸಿಲೇರುತ್ತಿದ್ದಂತೆ ದಣಿದ ಆನೆಗಳಿಗೆ ಸ್ನಾನದ ತೊಟ್ಟಿಗೆ ಒಂದೊಂದಾಗಿ ಕರೆದೊಯ್ದು ಮಜ್ಜನ ಮಾಡಿಸಲಾಗುತ್ತದೆ. ಇದು ಪ್ರತಿದಿನವೂ ನಡೆಯಲಿದ್ದು, ದಿನಕಳೆದಂತೆ ತಾಲೀಮಿನಲ್ಲಿ ಎಲ್ಲ ಆನೆಗಳು ಪಾಲ್ಗೊಳ್ಳಲಿದ್ದು, ಇವುಗಳ ಜತೆಗೆ ಎರಡನೇ ತಂಡವೂ ಸೇರಿಕೊಳ್ಳಲಿವೆ. ಮುಂದಿನ ದಿನಗಳಲ್ಲಿ ಅಂಬಾರಿ ಹೊರುವ ಅಭಿಮನ್ಯುಗೆ ವಿವಿಧ ಹಂತಗಳಲ್ಲಿ ಭಾರ ಹೊರುವ, ಮರದ ಅಂಬಾರಿ ಹೊರುವ ತಾಲೀಮಿನ ಜತೆಗೆ ಶಬ್ದಕ್ಕೆ ಹೆದರದಂತೆ ಸಿಡಿಮದ್ದಿನ ತಾಲೀಮು ನಡೆಯಲಿದೆ. ಒಟ್ಟಾರೆ ಮುಂದಿನ ದಿನಗಳಲ್ಲಿ ಎಲ್ಲ ರೀತಿಯ ತಾಲೀಮು ನಡೆಸಿ ಗಜಪಡೆಯನ್ನು ಜಂಬೂಸವಾರಿಗೆ ಅಣಿಗೊಳಿಸುವ ಕಾರ್ಯ ಸಮಾರೋಪಾಧಿಯಲ್ಲಿ ಸಾಗಲಿದೆ.












Click it and Unblock the Notifications