ಸರ್ಕಾರದಿಂದ ಮಹಿಷಾ ದಸರಾ ಇಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
ಮೈಸೂರು, ಅಕ್ಟೋಬರ್, 07: ನಾವು ಹಿಂದೆಯೂ ಮಹಿಷ ದಸರಾ ಮಾಡಿಲ್ಲ ಈಗಲೂ ಸರ್ಕಾರದ ವತಿಯಿಂದ ಮಹಿಷ ದಸರಾ ನಡೆಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಸ್ಪಷ್ಟಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ಯಾರೋ ಹಿಂದಿನಿಂದ ಮಹಿಷ ದಸರಾವನ್ನು ಮೈಸೂರಿನಲ್ಲಿ ಮಾಡುತ್ತಿದ್ದಾರೆ. ಆದರೆ, ಚಾಮುಂಡಿ ಬೆಟ್ಟದಲ್ಲಿ ಏಂದೂ ಮಾಡಿಲ್ಲ. ಈಗ ಆ ವಿಚಾರದಲ್ಲಿ ಜಿಲ್ಲಾಡಳಿತ ತೀರ್ಮಾನ ಕೈಗೊಳ್ಳುತ್ತದೆ ಎಂದು ಹೇಳಿದರು.

ಹೊಸ ಬಾರ್ ಲೈಸನ್ಸ್ ಕೊಡುವ ವಿಚಾರ ಸರ್ಕಾರದ ಮುಂದೆ ಇಲ್ಲ. ಡಿ.ಕೆ.ಶಿವಕುಮಾರ್ ಅವರು ಎಲ್ಲೂ ಕೂಡ ಹೊಸ ಲೈಸನ್ಸ್ ಕೊಡುತ್ತೇವೆ ಅಂತಾ ಹೇಳಿಲ್ಲ. ಸದ್ಯಕ್ಕೆ ಆ ವಿಚಾರದಲ್ಲಿ ಯಾವ ಚರ್ಚೆಗಳು ಬೇಡ. ಜನರ ಭಾವನೆಗಳನ್ನು ಕೇಳಬೇಕು, ಗೌರವಿಸಬೇಕು. ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಹೊಸ ಲೈಸನ್ಸ್‌ಗಳು ಯಾವುದು ಇಲ್ಲ ಎಂದು ಸ್ಪಷ್ಟಪಡಿಸಿದರು.
ಶಾಮನೂರು ಶಿವಶಂಕರಪ್ಪ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಈ ವಿಚಾರದಲ್ಲಿ ಯಾವ ಪ್ರತಿಕ್ರಿಯೆಯನ್ನು ನೀಡಲ್ಲ ಎಂದು ಲಿಂಗಾಯತ ಹೇಳಿಕೆಯಿಂದ ದೂರ ಉಳಿದರು. ಇನ್ನು ಕೇಂದ್ರದಿಂದ ಬರ ಅಧ್ಯಯನ ವಿಚಾರದ ಬಗ್ಗೆ ಮಾತನಾಡಿದ ಅವರು, ಎಲ್ಲಾ ಹಳ್ಳಿಯ ಜನರನ್ನು ಖುದ್ದಾಗಿ ಭೇಟಿ ಮಾಡಿ ಸಮಸ್ಯೆ ಆಲಿಸಿ ಎಂದು ಕೇಂದ್ರದ ತಂಡಕ್ಕೆ ಕೇಳಿಕೊಂಡಿದ್ದೇನೆ ಎಂದರು.
ಬರ ಪ್ರವಾಸದ ಪ್ಲಾನ್ ಕೇಂದ್ರದ ತಂಡದವರೇ ಮಾಡಿಕೊಂಡಿದ್ದಾರೆ. ಆ ಕಡೆ ಹೋಗಿ ಈ ಕಡೆ ಬನ್ನಿ ಅಂತಾ ನಾವು ನಿರ್ಧರಿಸಲು ಸಾಧ್ಯವಿಲ್ಲ. ಹೊಲದಲ್ಲಿ ಹಸಿರು ಇದ್ದ ಕಾರಣಕ್ಕೆ ಅದು ಫಲ ಎಂಬ ಅರ್ಥವಲ್ಲ. ಬೆಳೆ ಬರಬೇಕು. ಹೀಗಾಗಿ ಹಸಿರನ್ನು ನೋಡಿ ತೀರ್ಮಾನ ಮಾಡಬಾರದು ಎಂದರು.
ನಾವು 4500 ಕೋಟಿ ಬರ ಪರಿಹಾರ ಕೇಳಿದ್ದೇವೆ. ಕೇಂದ್ರ ತಂಡ ಇಲ್ಲಿಂದ ಹೋಗಿ ವರದಿ ಕೊಡುತ್ತದೆ. ನಂತರ ಅಧ್ಯಯನದ ವರದಿ ಬರುತ್ತದೆ. ಬರಕ್ಕೂ ಗ್ಯಾರಂಟಿ ಯೋಜನೆಗಳಿಗೂ ಸಂಬಂಧವಿಲ್ಲ. ಬರದ ಪರಿಸ್ಥಿತಿ ಇದ್ದರೂ ಗ್ಯಾರಂಟಿಗಳು ಎಂದಿನಂತೆ ಮುಂದುವರೆಯುತ್ತವೆ ಎಂದರು.
ನವೆಂಬರ್‌ನಲ್ಲಿ ಕರ್ನಾಟಕದ ಜಾತಿಗಣತಿ ವರದಿ ನನ್ನ ಕೈ ಸೇರಬಹುದು. ಆನಂತರ ಪರಿಶೀಲಿಸಿ ತೀರ್ಮಾನ ಮಾಡುತ್ತೇವೆ. ಸಮಿತಿಯ ಅಧ್ಯಕ್ಷರು ಬದಲಾಗಿದ್ದಾರೆ. ಹೀಗಾಗಿ ನವೆಂಬರ್‌ನಲ್ಲಿ ವರದಿ ಕೊಡುತ್ತಾರೆ. ಜಾತಿಗಣತಿ ಸಮಾಜವನ್ನು ವಿಂಗಡಿಸುವುದಿಲ್ಲ. ಯಾವ ಸಮುದಾಯ ಎಷ್ಟಿದೆ ಎಂಬುದು ಅಂಕಿಅಂಶಗಳು ಸರ್ಕಾರಕ್ಕೆ ಬೇಕು. ಯೋಜನೆಗಳ ಸರಿಪಡಿಸಲು ಈ ಯೋಜನೆಗಳು ಅವಶ್ಯ ಎಂದರು.
ಜಾತಿಗಣತಿಗೆ ಪ್ರಧಾನಿ ವಿರೋಧಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ, ಪ್ರಧಾನಿ ಬಾಯಲ್ಲಿ ಮಾತ್ರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅನ್ನುತ್ತಾರೆ. ಆದರೆ ಅವರ ನಡೆನುಡಿಗೆ ಬಹಳ ವ್ಯತ್ಯಾಸಗಳಿವೆ. ಹೀಗಾಗಿ ಜಾತಿ ಗಣತಿ ವಿರೋಧಿಸುತ್ತಾರೆ ಎಂದು ತಿಳಿಸಿದರು.












Click it and Unblock the Notifications