Mysuru yuva dasara 2023: ಯುವ ದಸರಾಗೆ ಚಾಲನೆ, ವಸಿಷ್ಠ ಸಿಂಹ ಹಾಡಿಗೆ ಕುಣಿದು ಕುಪ್ಪಳಿದ ಮೈಸೂರು ಮಂದಿ
ಮೈಸೂರು, ಅಕ್ಟೋಬರ್, 07: ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಯುವ ಸಂಭ್ರಮ ಉಪ ಸಮಿತಿ ವತಿಯಿಂದ ನಡೆದ "ಯುವ ಸಂಭ್ರಮ-2023"ಕ್ಕೆ ತಾರಾ ದಂಪತಿಯಾದ ಹರಿಪ್ರಿಯಾ-ವಸಿಷ್ಠ ಸಿಂಹ ಶುಕ್ರವಾರ ವಿಧ್ಯುಕ್ತ ಚಾಲನೆ ನೀಡಿದರು.
ವಸಿಷ್ಠ ಸಿಂಹ ತಮ್ಮ ಕಂಚಿನ ಕಂಠದ ಮೂಲಕ ತಮ್ಮದೇ ಸಿನಿಮಾದ 'ಮರೆತೇ ಹೋದೆನು ಹೊರಟ ಕಾರಣ' ಗೀತೆಯನ್ನು ಹಾಡಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು. ನಮಸ್ಕಾರ ಮೈಸೂರು ಎನ್ನುತ್ತಲೇ ಮಾತು ಶುರು ಮಾಡಿದ ವಸಿಷ್ಠ ಸಿಂಹ 'ಏತಕೆ ಬೊಗಸೆ ತುಂಬಾ ಆಸೆ ಚೆಲ್ಲಿದೆ', ಕಿರಿಕ್ ಪಾರ್ಟಿ ಸಿನಿಮಾ 'ರಕ್ತ ಕುದಿಯುತ್ತಿದೆ' ಗೀತೆಗಳ ಸಾಲುಗಳನ್ನು ಹಾಡಿ ಮನರಂಜಿಸಿದರು. ಇದಕ್ಕೆ ಪ್ರೇಕ್ಷಕರು ಕೂಡ ಧ್ವನಿಗೂಡಿಸಿ ಗಮನ ಸೆಳೆದರು.

ಇದೇ ವೇಳೆ ನಟಿ ಹರಿಪ್ರಿಯ ಮಾತನಾಡಿ, ಮೈಸೂರೆಂದರೆ ನನಗೆ ಮೊದಲಿನಿಂದಲೂ ಇಷ್ಟ. ಇದೀಗ ನಾನು ಮೈಸೂರು ಸೊಸೆಯಾಗಿ ಇಲ್ಲಿಗೆ ಬಂದಿದ್ದೇನೆ. ಮದುವೆ ನಂತರ ನಾವಿಬ್ಬರು ಒಟ್ಟಿಗೆ ವೇದಿಕೆ ಹಂಚಿಕೊಂಡಿದ್ದೇವೆ, ಎಂದು ಸಂತಸ ವ್ಯಕ್ತಪಡಿಸಿದರು. ಇನ್ನು ಮೊದಲ ದಿನ ಮೈಸೂರು, ನಂಜನಗೂಡು, ಬನ್ನೂರು, ಎಚ್.ಡಿ.ಕೋಟೆ, ಪಿರಿಯಾಪಟ್ಟಣ, ಹುಣಸೂರು, ತಿ.ನರಸೀಪುರ, ಮಂಡ್ಯ, ಮದ್ದೂರು ತಾಲೂಕು ಸೇರಿದಂತೆ ಒಟ್ಟು 30 ಕಾಲೇಜಿನ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.
ಉಸ್ತುವಾರಿ ಸಚಿವ ಡಾ.ಎಚ್.ಸಿ,ಮಹದೇವಪ್ಪ ಮಾತನಾಡಿ, ವಿವಿಧ ಜಿಲ್ಲೆಗಳ 400 ಕಾಲೇಜಿನ ಸುಮಾರು 12 ಸಾವಿರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಅನೇಕ ಉತ್ತಮವಾದ ವಸ್ತುವಿಷಯ ಕುರಿತು ನೃತ್ಯ ರೂಪಕಗಳು ಪ್ರದರ್ಶನಗೊಳ್ಳುವ ಮೂಲಕ ದೇಶಕ್ಕೆ ಉತ್ತಮವಾದ ಸಂದೇಶ ನೀಡಲಿದೆ ಎಂದು ತಿಳಿಸಿದರು.
ನಮ್ಮ ದೇಶದ ಚಾರಿತ್ರಿಕ ಹಿನ್ನೆಲೆ, ಸ್ವಾತಂತ್ರ್ಯ ಹೋರಾಟ, ಸಾಂಸ್ಕೃತಿಕ ಬದುಕು, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯದ ಸೈದ್ಧಾಂತಿಕ ಅಡಿಪಾಯದಲ್ಲಿ ಯುವ ಜನರು ಬದುಕನ್ನು ರೂಪಿಸಿಕೊಳ್ಳುವ ಜೊತೆಗೆ ಬುದ್ಧ, ಬಸವ, ಡಾ.ಬಿ.ಆರ್.ಅಂಬೇಡ್ಕರ್ ಆಶಯದಂತೆ ದೇಶವನ್ನು ಬಲಿಷ್ಠವಾಗಿ ಕಟ್ಟಬೇಕಾದ ಅನಿವಾರ್ಯತೆ ಇದೆ ಎಂದು ಕರೆ ನೀಡಿದರು.
ಯುವ ಜನರು ದೇಶ ಕಟ್ಟುವ ಕಾಯದಲ್ಲಿ ತೊಡಗಬೇಕು. ಈ ಯುವ ಸಂಭ್ರಮ ವೇದಿಕೆಯಲ್ಲಿ ಅನೇಕ ಸಂಗೀತ, ವಿವಿಧ ನೃತ್ಯವನ್ನು ಸವಿಯುವುದರ ಜೊತೆಗೆ ಭವಿಷ್ಯದಲ್ಲಿ ಉತ್ತಮ, ಜವಾಬ್ದಾರಿಯುತ ಪ್ರಜೆಗಳಾಗಬೇಕು. ನಮ್ಮ ರಾಷ್ಟ್ರೀಯ ಭಾವೈಕ್ಯತೆ, ಬಹುತ್ವವನ್ನು ರಕ್ಷಣೆ ಮಾಡುವಂತಾಗಿ ಎಂದು ಕಿವಿಮಾತು ಹೇಳಿದರು.
ಈ ವೇಳೆ ಶಾಸಕರಾದ ಕೆ.ಹರೀಶ್‌ಗೌಡ, ಡಿ.ರವಿಶಂಕರ್, ಟಿ.ಎಸ್. ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮೇಯರ್ ಶಿವಕುಮಾರ್, ಉಪಮೇಯರ್ ಡಾ.ಜಿ.ರೂಪ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಲ್ಲಾ ಪಂಚಾಯತ್ ಸಿಇಒ ಕೆ.ಎಂ.ಗಾಯಿತ್ರಿ, ನಗರ ಪೊಲೀಸ್ ಆಯುಕ್ತ ರಮೇಶ್ ಬಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಮೈವಿವಿ ಕುಲಸಚಿವೆ ವಿ.ಆರ್.ಶೈಲಜಾ, ಯುವ ಸಂಭ್ರಮ ಉಪಸಮಿತಿ ಕಾರ್ಯದರ್ಶಿ ಆರ್.ಪ್ರತಾಪ್, ಪಾಲಿಕೆ ಸದಸ್ಯೆ ಭಾಗ್ಯಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.












Click it and Unblock the Notifications