Mysuru Dasara 2023: ಈ ಬಾರಿ ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಪ್ರಮುಖ ಆಕರ್ಷಣೆ ಏನು?, ಇಲ್ಲಿದೆ ವಿವರ
ಮೈಸೂರು, ಅಕ್ಟೋಬರ್, 05: ದಸರಾ ಮಹೋತ್ಸವಕ್ಕೆ ದಿನಗಣನೆ ಶುರುವಾಗಿದೆ. ಈ ಬಾರಿ ಅಕ್ಟೋಬರ್ 15ರಿಂದ 24ರವರೆಗೆ ದಸರಾ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಈಗಾಗಲೇ ಸಕಲ ತಯಾರಿ ಆರಂಭಗೊಂಡಿದೆ. ಪ್ರದರ್ಶನ ಹೆಬ್ಬಾಗಿಲಿನ ಬಳಿ ಈ ಬಾರಿ 20 ಅಡಿ ಎತ್ತರದ ಚಾಮುಂಡೇಶ್ವರಿ ಮೂರ್ತಿಯನ್ನು ಹೂವಿನಿಂದಲೇ ಪ್ರತಿಷ್ಠಾಪಿಸಲಾಗುತ್ತಿದೆ.
ದಸರಾ ಮಹೋತ್ಸವದ ವಿಶೇಷ ಆಕರ್ಷಣೆಗಳಲ್ಲಿ ಒಂದಾದ ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಪ್ರವಾಸಿಗರ ಆಕರ್ಷಣೆಯ ಬಿಂದುವಾಗಿ ಚಂದ್ರಯಾನ-3 ರೂಪುಗೊಳ್ಳಲಿದೆ. ಕುಪ್ಪಣ್ಣ ಪಾರ್ಕ್‌ನಲ್ಲಿರುವ ಗಾಜಿನ ಅರಮನೆಯಲ್ಲಿ 3 ಲಕ್ಷ ಕೋಲ್ಕತ್ತಾದ ಸೇವಂತಿ ಹೂವಿನಿಂದ ರಾಕೆಟ್ ಹಾಗೂ ಪ್ರಜ್ಞಾನ್ ರೋವರ್‌ನೊಂದಿಗೆ 'ಚಂದ್ರಯಾನ-3 ನಿರ್ಮಾಣವಾಗಲಿದೆ. ಈಗಾಗಲೇ ಫಲಪುಷ್ಪ ಪ್ರದರ್ಶನ ಟೆಂಡರ್ ಕರೆಯಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ತೋಟಗಾರಿಕಾ ಇಲಾಖೆ 1.35 ಕೋಟಿ ರೂಪಾಯಿ ಮೊತ್ತಕ್ಕೆ ಟೆಂಡರ್ ಕರೆದಿದೆ. ಯಾರು ಹೆಚ್ಚು ಮೊತ್ತಕ್ಕೆ ಟೆಂಡರ್ ಬಿಡ್ ಕೂಗಿರುತ್ತಾರೆಯೋ ಅವರಿಗೆ ಫಲಪುಷ್ಪ ಪ್ರದರ್ಶನ ಉಸ್ತುವಾರಿ ಲಭಿಸಲಿದೆ. ಅಲ್ಲದೆ, ಅಕ್ಟೋಬರ್ 12 ಅಥವಾ 13ರೊಳಗೆ ಫಲಪುಷ್ಪ ಪ್ರದರ್ಶನದ ಸಿದ್ಧತೆ ಪೂರ್ಣಗೊಳ್ಳಲಿದೆ.
ಈ ಬಾರಿ ರಾಜ್ಯದಲ್ಲಿ ಆಚರಿಸಿ ಪ್ರಜಾಪ್ರಭುತ್ವದ ದಿನದ ಕಾರ್ಯಕ್ರಮದಲ್ಲಿ ಎಲ್ಲೆಡೆ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮ ದಾಖಲೆ ಬರೆದ ಹಿನ್ನೆಲೆಯಲ್ಲಿ ಈ ಬಾರಿ ದಸರಾ ಲಪುಷ್ಪ ಪ್ರದರ್ಶನದಲ್ಲಿ ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಸಂವಿಧಾನ ಪೀಠಿಕೆಯುಳ್ಳ ಸೆಲ್ಫಿ ಪಾಯಿಂಟ್ ನಿರ್ಮಾಣ ಮಾಡಲಾಗುತ್ತಿದೆ.
ಭಾರತ ಆತಿಥ್ಯ ವಹಿಸಿರುವ 13ನೇ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಭಾರತ ತಂಡವನ್ನು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ದಸರಾ ಫಲಪುಷ್ಪ ಪ್ರದರ್ಶನದಲ್ಲಿ 'ಗೆದ್ದು ಬಾ ಇಂಡಿಯಾ' ಶೀರ್ಷಿಕೆಯಡಿ ಹೂವಿನಿಂದಲೇ ಕ್ರಿಕೆಟ್ ಬ್ಯಾಟ್, ಬಾಲ್, ವಿಕೆಟ್‌ಗಳು ಸೇರಿದಂತೆ ಕೆಲ ಕಲಾಕೃತಿಗಳನ್ನು ನಿರ್ಮಿಸಲಾಗುತ್ತಿದೆ.
"ದಸರಾ ಫಲಪುಷ್ಪ ಪ್ರದರ್ಶನಕ್ಕೆ ಸಿದ್ಧತೆ ಭರದಿಂದ ಸಾಗಿದ್ದು, ಈ ಬಾರಿ 1.35 ಕೋಟಿ ರೂಪಾಯಿಗೆ ಫಲಪುಷ್ಪ ಪ್ರದರ್ಶನದ ಟೆಂಡರ್ ಕರೆಯಲಾಗಿದೆ. ತೋಟಗಾರಿಕಾ ಇಲಾಖೆ ಹಾಗೂ ತೋಟಗಾರಿಕಾ ಸಂಘದ ಸಹಯೋಗದಲ್ಲಿ ಪ್ರತಿ ವರ್ಷದಂತೆ ಈ ಬಾರಿಗೆ ಫಲಪುಷ್ಪ ಪ್ರದರ್ಶನ ನಡೆಯುತ್ತಿದ್ದು, ಆಕರ್ಷಣೆಯೊಂದಿಗೆ ಶೈಕ್ಷಣಿಕ ಮಹತ್ವವನ್ನು ಈ ಬಾರಿಯ ಫಲಪುಷ್ಪ ಪ್ರದರ್ಶನ ಸಾರುವ ನಿಟ್ಟಿನಲ್ಲಿ ರೂಪಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ," ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ನಾಗರಾಜು ತಿಳಿಸಿದ್ದಾರೆ.












Click it and Unblock the Notifications