• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರು ದಸರಾ 2021: ಶುರುವಾಗಲಿದೆ ಕುಶಾಲತೋಪು ಸಿಡಿಸುವ ಫಿರಂಗಿಗಳ ತಾಲೀಮು!

|
Google Oneindia Kannada News

ಮೈಸೂರು, ಸೆಪ್ಟೆಂಬರ್ 25: ಕೊರೊನಾ ಸೋಂಕು ಕಾರಣದಿಂದ ಸರಳ ಮತ್ತು ಸಾಂಪ್ರದಾಯಿಕವಾಗಿ ಮೈಸೂರು ದಸರಾ ಆಚರಣೆಯಾಗುತ್ತಿರುವುದರಿಂದ ಮೇಲ್ನೋಟಕ್ಕೆ ಸಂಭ್ರಮ ಅರಮನೆಗಷ್ಟೆ ಸೀಮಿತವಾದಂತೆ ಗೋಚರಿಸುತ್ತಿದ್ದರೂ ಈ ಸಂಬಂಧದ ಸಿದ್ಧತೆಗಳು ಮಾತ್ರ ಸಮಾರೋಪಾದಿಯಲ್ಲಿ ಸಾಗುತ್ತಿದೆ.

ಈಗಾಗಲೇ ಗಜಪಡೆಗಳು ತಾಲೀಮು ನಡೆಸುತ್ತಿದ್ದರೆ, ಮತ್ತೊಂದೆಡೆ ಅರಮನೆಗೆ ಸುಣ್ಣಬಣ್ಣ ಬಳಿಯುವ ಕೆಲಸವೂ ಶೀಘ್ರಗತಿಯಲ್ಲಿ ಸಾಗುತ್ತಿದೆ. ದಸರಾ ಸಂಬಂಧ ಹಲವು ವಿಧಿವಿಧಾನಗಳು ನಡೆಯಲಿರುವುದರಿಂದ ಅರಮನೆಯಲ್ಲಿ ಕೆಲಸ ಕಾರ್ಯಗಳು ಸಮಾರೋಪಾದಿಯಲ್ಲಿ ಸಾಗುತ್ತಿವೆ. ಇನ್ನು ಜಂಬೂಸವಾರಿಯಲ್ಲಿ ಕುಶಾಲತೋಪಿಗೂ ಪ್ರಮುಖ ಸ್ಥಾನವಿದ್ದು, ರಾಜಪರಂಪರೆಯ ಗೌರವ ಸಂಕೇತವಾಗಿದೆ. ಈ ಕುಶಾಲತೋಪು ಸಿಡಿಸುವ ಮೂಲಕ ಗಜಪಡೆ, ಅಶ್ವರೋಹಿದಳವನ್ನು ಸಜ್ಜುಗೊಳಿಸುವುದು ಹಿಂದಿನಿಂದಲೂ ನಡೆದು ಬಂದಿದೆ.

ದಸರಾ ಜಂಬೂಸವಾರಿಗೆ ಗಜಪಡೆಯ ತಾಲೀಮು ಹೇಗಿದೆ?ದಸರಾ ಜಂಬೂಸವಾರಿಗೆ ಗಜಪಡೆಯ ತಾಲೀಮು ಹೇಗಿದೆ?

 ಫಿರಂಗಿಗಳಿಗೆ ವಿಜಯ ಗಣಪತಿ ಪೂಜೆ

ಫಿರಂಗಿಗಳಿಗೆ ವಿಜಯ ಗಣಪತಿ ಪೂಜೆ

ಅತ್ತ ಗಜಪಡೆಗೆ ತಾಲೀಮು ಶುರುವಾಗುತ್ತಿದ್ದಂತೆಯೇ ಇತ್ತ ಅರಮನೆಯ ಮ್ಯೂಸಿಯಂನಲ್ಲಿರುವ ಸುಮಾರು ಹತ್ತು ಫಿರಂಗಿ ಗಾಡಿಗಳನ್ನು ಹೊರತೆಗೆದು ಅವುಗಳನ್ನು ಶುಚಿಗೊಳಿಸಿ ಸಿಡಿಮದ್ದು ಸಿಡಿಸಲು ಸರ್ವ ರೀತಿಯಲ್ಲಿ ತಯಾರಿ ಮಾಡಿಕೊಳ್ಳಲಾಗುತ್ತದೆ. ದಸರಾ ವೇಳೆಯಷ್ಟೆ ಇವುಗಳನ್ನು ಹೊರ ತೆಗೆದು ಪೂಜೆ ಸಲ್ಲಿಸಿ ಕುಶಾಲತೋಪು ಸಿಡಿಸಲು ಬಳಸಲಾಗುತ್ತದೆ. ಬಳಿಕ ಪೂಜೆ ಸಲ್ಲಿಸಿ ಅವುಗಳನ್ನು ನಿರ್ದಿಷ್ಟ ಸ್ಥಳವಾದ ಅರಮನೆ ಮ್ಯೂಸಿಯಂನಲ್ಲಿ ಭದ್ರತೆಯಲ್ಲಿರಿಸುವುದು ಹಿಂದಿನಿಂದಲೂ ನಡೆದು ಬಂದ ರೂಢಿಯಾಗಿದೆ. ಈ ಬಾರಿಯ ದಸರಾ ಮಹೋತ್ಸವಕ್ಕೆ ಕುಶಾಲತೋಪು ಸಿಡಿಸಲು ಫಿರಂಗಿಗಳನ್ನು ಹೊರತೆಗೆದು ವಿಶೇಷ ಪೂಜೆಯಾದ ವಿಜಯ ಗಣಪತಿ ಪೂಜೆಯನ್ನು ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ನೇತೃತ್ವದಲ್ಲಿ ನಡೆಸಲಾಗಿದೆ.

 ಫಿರಂಗಿ ಸಿಡಿಸೋದು ಸಿಎಆರ್ ಪೊಲೀಸರ ಜವಾಬ್ದಾರಿ

ಫಿರಂಗಿ ಸಿಡಿಸೋದು ಸಿಎಆರ್ ಪೊಲೀಸರ ಜವಾಬ್ದಾರಿ

ಜಂಬೂಸವಾರಿ ಹೊರಡುವ ಮೊದಲು ಇಪ್ಪತ್ತೊಂದು ಕುಶಾಲತೋಪು ಸಿಡಿಸಿ ಗೌರವ ಸಲ್ಲಿಸಲಾಗುತ್ತದೆ. ಆದರೆ ಈ ಶಬ್ದಕ್ಕೆ ಗಜಪಡೆ, ಅಶ್ವಾರೋಹಿ ಬೆದರದಂತೆ ನೋಡಿಕೊಳ್ಳುವ ಸಲುವಾಗಿ ಜಂಬೂಸವಾರಿಗೆ ಕೆಲವು ದಿನಗಳು ಇರುವಾಗಲೇ ಅಂದರೆ ಸುಮಾರು ಹದಿನೈದು ದಿನಗಳ ಕಾಲ ಶಬ್ದದ ತಾಲೀಮು ನಡೆಸಿ ಗಜಪಡೆ ಮತ್ತು ಅಶ್ವರೋಹಿ ಪಡೆಯು ಬೆದರದಂತೆ ನೋಡಿಕೊಳ್ಳಲಾಗುತ್ತದೆ. ಕುಶಾಲತೋಪು ಸಿಡಿಸುವ ಕೆಲಸವನ್ನು ಸಿಎಆರ್ ಪೊಲೀಸರು ಮಾಡುತ್ತಾ ಬಂದಿದ್ದಾರೆ.

 ರಾಜರ ಕಾಲದ ಗೌರವದ ಸಂಕೇತ

ರಾಜರ ಕಾಲದ ಗೌರವದ ಸಂಕೇತ

ಇನ್ನು ಮೈಸೂರು ಅರಮನೆಯಲ್ಲಿರುವ ಫಿರಂಗಿಗಳು ರಾಜರ ಕಾಲದ ಗೌರವದ ಸಂಕೇತವಾಗಿವೆ. ಇವುಗಳನ್ನು ಇವತ್ತು ದಸರಾ ಆಚರಣೆಯಲ್ಲಿ ಕುಶಾಲತೋಪು ಸಿಡಿಸಲು ಬಳಸುತ್ತಿದ್ದರೆ, ಹಿಂದಿನ ಕಾಲದಲ್ಲಿ ಯುದ್ಧದಲ್ಲಿ ಶತ್ರುಗಳನ್ನು ಹಿಮ್ಮೆಟ್ಟಿಸಲು ಬಳಸಲಾಗುತ್ತಿತ್ತು. ಅಂದು ಹೋರಾಟದಲ್ಲಿ ಶಕ್ತಿ ಮೆರೆದಿದ್ದ ಫಿರಂಗಿಗಳು ಈಗ ಮ್ಯೂಸಿಯಂ ಸೇರಿವೆ. ದಸರಾ ಸಂದರ್ಭದಲ್ಲಿ ಮಾತ್ರ ಹೊರ ಜಗತ್ತಿಗೆ ಕಾಣಿಸಿಕೊಳ್ಳುತ್ತವೆ. ಅದರಲ್ಲೂ ದಸರಾ ಜಂಬೂಸವಾರಿ ಹೊರಡುವ ಸಂದರ್ಭ ಅಂಬಾರಿಯಲ್ಲಿ ವೀರಾಜಮಾನಳಾದ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವಾಗ ರಾಷ್ಟ್ರಗೀತೆ ಆರಂಭಿಸಿ ಅದು ಮುಗಿಯುವುದರೊಳಗಾಗಿ 21 ಕುಶಾಲತೋಪುಗಳನ್ನು ಇದೇ ಫಿರಂಗಿಯಿಂದ ಸಿಡಿಸಲಾಗುತ್ತದೆ.

 ಚೀನಿಯರು ಆವಿಷ್ಕರಿಸಿದ ಫಿರಂಗಿಗಳು

ಚೀನಿಯರು ಆವಿಷ್ಕರಿಸಿದ ಫಿರಂಗಿಗಳು

ಈ ಫಿರಂಗಿಗಳ ಇತಿಹಾಸ ಕೆದಕಿ ನೋಡಿದರೆ, ಸುಮಾರು 12ನೇ ಶತಮಾನದಿಂದ ಆರಂಭವಾದ ಬಗ್ಗೆ ಮಾಹಿತಿ ಸಿಗುತ್ತದೆ. ಇದನ್ನು ಮೊಟ್ಟ ಮೊದಲಿಗೆ 1260ರಲ್ಲಿ ಚೀನಿಯರು ಆವಿಷ್ಕರಿಸಿ ಶತ್ರುಗಳನ್ನು ಹಿಮ್ಮೆಟ್ಟಿಸಲು ಆರಂಭಿಸಿದರು. 13ನೇ ಶತಮಾನದಲ್ಲಿ ಲಿಬಿಯಾ ದೇಶವು ಸ್ಪೇನ್ ದೇಶದ ವಿರುದ್ಧದ ಯುದ್ಧದಲ್ಲಿ ಪ್ರಪ್ರಥಮವಾಗಿ ಫಿರಂಗಿಯನ್ನು ಬಳಸಿತು ಎನ್ನಲಾಗುತ್ತಿದೆ. 16ನೇ ಶತಮಾನದಲ್ಲಿ ಸುಧಾರಿತ ಫಿರಂಗಿಗಳ ನಿರ್ಮಾಣ ನಡೆಯಿತು. ಟಿಪ್ಪು ಸುಲ್ತಾನ್ ಕಾಲದಲ್ಲಿ ಸುಮಾರು 10 ಅಡಿ ಉದ್ದ, 9,100 ಕೆ.ಜಿ. ತೂಕದ ಉಕ್ಕಿನ ಫಿರಂಗಿಗಳಿತ್ತು ಎನ್ನುವುದಕ್ಕೆ ಈಗಲೂ ಶ್ರೀರಂಗಟ್ಟಣದ ದರಿಯಾ ದೌಲತ್ ಅರಮನೆಯ ಮುಂಭಾಗದಲ್ಲಿರುವ ಫಿರಂಗಿ ಸಾಕ್ಷಿಯಾಗಿದೆ.

 ಕುಶಾಲತೋಪು ಸಿಡಿಸುವುದು ಸುಲಭವಲ್ಲ

ಕುಶಾಲತೋಪು ಸಿಡಿಸುವುದು ಸುಲಭವಲ್ಲ

ದಸರಾ ವೇಳೆ ಫಿರಂಗಿ ಮೂಲಕ ಕುಶಾಲತೋಪು ಸಿಡಿಸುವುದು ಅಷ್ಟು ಸುಲಭದ ಕೆಲಸವಲ್ಲ. ಇದಕ್ಕೆ ನುರಿತ ಪರಿಣಿತ ಸಿಬ್ಬಂದಿಯ ಅಗತ್ಯವಿದ್ದು, ಅದನ್ನು ಸಿಎಆರ್ ಪೊಲೀಸರು ಮಾಡುತ್ತಾ ಬಂದಿದ್ದಾರೆ. ಸುಮಾರು ಮೂರೂವರೆ ಅಡಿ ಉದ್ದದ ಫಿರಂಗಿ ಕೊಳವೆಗೆ ಹದಮಾಡಿದ ಮೂರು ಕಿಲೋ ಗ್ರಾಂನಷ್ಟು ರಂಜಕದ ಪುಡಿಯನ್ನು ಹತ್ತಿ ಬಟ್ಟೆಯಲ್ಲಿ ಸುತ್ತಿ ಆಯತಕಾರದ ಪೊಟ್ಟಣದಂತೆ ಮಾಡಲಾಗುತ್ತದೆ. ಅದನ್ನು ಕೊಳವೆಗೆ ಹಾಕಿ ನಂತರ ಕಬ್ಬಿಣದ ಸಾಧನವೊಂದರ ಮೂಲಕ ತಳ್ಳಿ ಗಟ್ಟಿಗೊಳಿಸಲಾಗುತ್ತದೆ. ನಂತರ ಅದಕ್ಕೆ ಬೆಂಕಿ ಹಚ್ಚಿದಾಗ ಅದು ಭಾರೀ ಶಬ್ದದೊಂದಿಗೆ ಸ್ಫೋಟಗೊಳ್ಳುತ್ತದೆ. ತಕ್ಷಣ ಬಿಸಿಯಿರುವ ಕೊಳವೆಯನ್ನು ಸಿಂಬ ಎಂಬ ಸಾಧನದಿಂದ ಸ್ವಚ್ಛಗೊಳಿಸುತ್ತಾರೆ. ಇದು ಸುಲಭದ ಕೆಲಸವಲ್ಲ ಏಕೆಂದರೆ ಇಲ್ಲಿ ಒಂದೇ ಚಿಕ್ಕ ಕಿಡಿಯಿದ್ದರೂ ಮತ್ತೆ ಮದ್ದು ತುಂಬಿಸುವಾಗ ಸ್ಫೋಟಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ ಆದ್ದರಿಂದ ಫಿರಂಗಿ ಸಿಡಿಸುವ ಸಿಬ್ಬಂದಿ ಮೈಯಲ್ಲಾ ಕಣ್ಣಾಗಿರುತ್ತಾರೆ.

English summary
Mysuru Dasara 2021: The Dasara elephants, which are camping on the Mysuru Palace premises, are undergoing rigorous training ahead of Jamboo Savari. they were familiarised with the sound of cannons. The practice session was held outside the palace.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X