ಮೈಸೂರು ದಸರಾ 2020; ಉನ್ನತ ಮಟ್ಟದ ಸಮಿತಿ ರಚನೆ
ಮೈಸೂರು, ಸೆಪ್ಟೆಂಬರ್ 03: ಕೋವಿಡ್ ಭೀತಿಯ ನಡುವೆಯೇ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಬಂದಿದೆ. ದಸರಾ ಆಚರಣೆಗಾಗಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ.
ಅಕ್ಟೋಬರ್ 17ರಿಂದ 27ರ ತನಕ ಈ ಬಾರಿಯ ದಸರಾ ನಡೆಯಬೇಕಿದೆ. ಆದರೆ, ಕೋವಿಡ್ ಪರಿಸ್ಥಿತಿಯ ಕಾರಣ ದಸರಾ ಆಚರಣೆ ಹೇಗಿರಬೇಕು? ಎಂಬ ಪ್ರಶ್ನೆ ಎದುರಾಗಿದೆ. ಆದ್ದರಿಂದ, ಸರ್ಕಾರ ಸಮಿತಿ ರಚನೆ ಮಾಡಿದೆ.
ಮೈಸೂರು ಜಿಲ್ಲಾಧಿಕಾರಿಗಳು 2020ರ ಮೈಸೂರು ದಸರಾವನ್ನು ಯಶಸ್ವಿಯಾಗಿ ಆಚರಣೆ ಮಾಡಲು ಉನ್ನತ ಮಟ್ಟದ ಮತ್ತು ಕಾರ್ಯಕಾರಿ ಸಮಿತಿಗಳನ್ನು ರಚನೆ ಮಾಡಬೇಕು ಎಂದು ಸರ್ಕಾರಕ್ಕೆ ಪತ್ರವನ್ನು ಬರೆದಿದ್ದರು.

ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ, ಲೋಕೋಪಯೋಗಿ, ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ದಸರಾ ಕಾರ್ಯಕಾರಿ ಸಮಿತಿಯನ್ನು ರಚನೆ ಮಾಡಲಾಗಿದೆ.
ಸಮಿತಿಯಲ್ಲಿರುವ ಅಧಿಕಾರೇತರ ಸದಸ್ಯರು ನಿಯಮಾನುಸಾರ ಭತ್ಯೆಗಳನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.
ಮೈಸೂರು ಜಿಲ್ಲೆಯಲ್ಲಿ ಗುರುವಾರ 475 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 19,828ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 6024.












Click it and Unblock the Notifications