ಮೈಸೂರು ಪಾಲಿಕೆ ಸದಸ್ಯರ ಮೊಬೈಲ್ ಫೋನ್ ಬಿಲ್ ಲಕ್ಷಗಟ್ಟಲೆ, ಇದೀಗ ಸೇವೆ ಬಂದ್
ಮೈಸೂರು ಮಹಾನಗರ ಪಾಲಿಕೆ ಸದಸ್ಯರಿಗೆ ಪುಕ್ಕಟೆ ಸಿಮ್ ಬಳಸಿ ಎಂದು ಕೊಟ್ಟರೆ ನಗರಪಾಲಿಕೆ ಖಜಾನೆಗೆ ಲಕ್ಷಗಟ್ಟಲೆ ಬಿಲ್ ಅಂಟಿಸಿದ್ದಾರೆ. ಆದ್ದರಿಂದ ಎಲ್ಲ ಸದಸ್ಯರ ಫೋನ್ ಕನೆಕ್ಷನ್ ಡಿಸ್ ಕನೆಕ್ಟ್ ಮಾಡಿಸಲಾಗಿದೆ.
ಮೈಸೂರು, ಮೇ 2 : ಸಾಮಾನ್ಯವಾಗಿ ಮೊಬೈಲ್ ಫೋನ್ ಬಿಲ್ ಎಷ್ಟು ಬರಬಹುದು? ತೀರಾ ಹೆಚ್ಚೆಂದರೆ ಸಾವಿರಗಳ ಲೆಕ್ಕದಲ್ಲಿ! ಆದರೆ ಇಲ್ಲಿನ ಪಾಲಿಕೆ ಸದಸ್ಯರ ಮೊಬೈಲ್ ಫೋನ್ ಬಿಲ್ ಬಂದಿರೋದು ಲಕ್ಷಗಟ್ಟಲೆ.
ಹೌದು. ಮೈಸೂರು ಮಹಾನಗರಪಾಲಿಕೆ 65 ವಾರ್ಡ್ ಗಳ ಸಿಯುಜಿ ನಂಬರ್ ಸ್ಥಗಿತಗೊಳ್ಳಲಿದೆ. ನಗರಪಾಲಿಕೆ ಸದಸ್ಯರು ಬೇಕಾಬಿಟ್ಟಿ ಪೋನ್ ಬಳಕೆ ಮಾಡುತ್ತಿದ್ದಾರೆ. ನಗರ ಪಾಲಿಕೆ ಖಜಾನೆಗೆ ಲಕ್ಷಾಂತರ ರುಪಾಯಿ ಹೊರೆಯಾಗುತ್ತಿದೆ ಎಂಬ ಹಿನ್ನೆಲೆಯಲ್ಲಿ ಪಾಲಿಕೆ ಸದಸ್ಯರ ಫೋನ್ ಸೇವೆ ಬಂದ್ ಆಗಿದ್ದು, ನಗರ ಪಾಲಿಕೆಯ ಈ ನಿರ್ಧಾರದಿಂದ ಜನಸಾಮಾನ್ಯರಿಗೆ ಪಾಲಿಕೆ ಸದಸ್ಯರು ಸಿಗುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.[ಬೆಂಗಳೂರಿಗರೇ, ಭೀಕರ ನೀರಿನ ಸಮಸ್ಯೆಗೆ ಸಜ್ಜಾಗಿ !]
ಏನಿದು ಸಮಸ್ಯೆ ...?
ಮಹಾನಗರ ಪಾಲಿಕೆ ಸದಸ್ಯರು ಹಾಗೂ ಪಾಲಿಕೆ ಅಧಿಕಾರಿಗಳಿಗೆ ನೀಡಿದ ಸಿಯುಜಿ ನಂಬರ್ ದುರ್ಬಳಕೆಯಾದ ಹಿನ್ನೆಲೆಯಲ್ಲಿ ಎಲ್ಲ ಮೊಬೈಲ್ ನಂಬರ್ ಗಳ ಸೇವೆ ಸ್ಥಗಿತಗೊಳಿಸಲು ಆದೇಶ ನೀಡಲಾಗಿದೆ.

ಪಾಲಿಕೆಯ 65 ವಾರ್ಡ್ ಗಳ ಸದಸ್ಯರು, 5 ನಾಮನಿದೇಶಿತ ಸದಸ್ಯರು ಹಾಗೂ ಪಾಲಿಕೆ ಹಿರಿಯ ಅಧಿಕಾರಿಗಳಿಗೆ ನೀಡಿದ ಬಿಎಸ್ ಎನ್ ಎಲ್ ನ 200ಕ್ಕೂ ಹೆಚ್ಚು ಮೊಬೈಲ್ ಸಿಮ್ ಗಳ ಸೇವೆ ಸ್ಥಗಿತಗೊಳಿಸಲು ಪೌರಾಡಳಿತ ಇಲಾಖೆ ನಿರ್ದೇಶನ ನೀಡಿದೆ. ಅಂತೆಯೇ ಪಾಲಿಕೆಯ ಆಯುಕ್ತ ಜಿ.ಜಗದೀಶ್ ಬಿಎಸ್ ಎನ್ ಎಲ್ ಗೆ ಪತ್ರ ಬರೆದಿದ್ದು, ಎಲ್ಲ ಸಿಯುಜಿ ನಂಬರ್ ಸ್ಥಗಿತಗೊಳಿಸುವಂತೆ ತಿಳಿಸಿದ್ದಾರೆ.[ಜಮ್ಮು- ಕಾಶ್ಮೀರದಲ್ಲಿ ಮೈಸೂರು ಯೋಧ ಕೋಮಾ ಸ್ಥಿತಿಯಲ್ಲಿ]
ಲಕ್ಷಗಟ್ಟಲೆ ಬಿಲ್ ಕಂಡು ಗಾಬರಿ
ಕೆಲ ಸದಸ್ಯರು ವಿದೇಶಗಳಿಗೆ ಕರೆ, ಹೆಚ್ಚಿನ ಇಂಟರ್ ನೆಟ್ ಉಪಯೋಗಿಸಿದ್ದಾರೆ. ಒಬ್ಬ ಸದಸ್ಯರ ಒಂದು ತಿಂಗಳ ಮೊಬೈಲ್ ಬಿಲ್ 1.50 ಲಕ್ಷ, ಮತ್ತೊಬ್ಬ ಸದಸ್ಯರ ಮೊಬೈಲ್ ಫೋನ್ ಬಿಲ್ 75 ಸಾವಿರ ರುಪಾಯಿ ಬಂದಿದೆ. ಇದರಿಂದ ಎಚ್ಚೆತ್ತ ಅಧಿಕಾರಿಗಳು, ಸದಸ್ಯರ ಮೊಬೈಲ್ ದುರ್ಬಳಕೆ ಬಗ್ಗೆ ಪೌರಾಡಳಿತ ಇಲಾಖೆಗೆ ಪತ್ರ ಬರೆದು ತಿಳಿಸಿದ್ದರು.
ಸದಸ್ಯರ ವಿರೋಧ
ನಗರ ಪಾಲಿಕೆ ಸದಸ್ಯರ ಮೊಬೈಲ್ ಸಂಪರ್ಕ ಏಕಾಏಕಿ ಬಂದ್ ಗೊಳಿಸಿರುವ ಪಾಲಿಕೆ ಅಧಿಕಾರಿಗಳ ವಿರುದ್ಧ ಕಾರ್ಪೊರೇಟರ್ ಗಳು ಹರಿಹಾಯ್ದಿದ್ದಾರೆ. ಪಾಲಿಕೆ ಸದಸ್ಯರ ಗಮನಕ್ಕೆ ತರದೆ ಏಕಾಏಕಿ ಈ ನಿರ್ಧಾರ ಕೈಗೊಂಡಿರುವುದು ಆಯುಕ್ತರ ಹಿಟ್ಲರ್ ವರ್ತನೆಗೆ ಸಾಕ್ಷಿ ಎಂದು ಮಾಜಿ ಮೇಯರ್ ಸಂದೇಶ್ ಸ್ವಾಮಿ ಕಿಡಿಕಾರಿದ್ದಾರೆ.












Click it and Unblock the Notifications