ಮೈಸೂರಿನಲ್ಲಿ ಬಾಲ ಕಾರ್ಮಿಕ ಪದ್ಧತಿ ನಿಯಂತ್ರಣಕ್ಕೆ ಜಿಲ್ಲಾಡಳಿತ ಮಹತ್ವದ ಹೆಜ್ಜೆ
ಮೈಸೂರು, ಡಿಸೆಂಬರ್ 10: ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆಯನ್ವಯ ನೇಮಕಗೊಂಡಿರುವ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮೈಸೂರು ಜಿಲ್ಲೆಯನ್ನು 'ಬಾಲ ಕಾರ್ಮಿಕ ಮುಕ್ತ ಜಿಲ್ಲೆ'ಯನ್ನಾಗಿಸುವಲ್ಲಿ ಕೈ ಜೋಡಿಸಬೇಕು ಎಂದು ಜಿಲ್ಲಾಧಿಕರಿಗಳಾದ ಜಿ. ಲಕ್ಷ್ಮೀಕಾಂತ ರೆಡ್ಡಿ ಸೂಚಿಸಿದರು.
ಡಿಸೆಂಬರ್ 9 ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮೈಸೂರು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿ ಸಭೆ ಹಾಗೂ ಕಾರ್ಯ ಪಡೆ (ಟಾಸ್ಕ್ ಫೋರ್ಸ್) ಸಮಿತಿ ಸಭೆಯನ್ನು ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆಸಲಾಯಿತು.

ಸಭೆಯಲ್ಲಿ ಜಿಲ್ಲಾಧಿಕಾರಿಗಳು ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಮೈಸೂರು ಜಿಲ್ಲೆಯನ್ನು ಬಾಲ ಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸುವ ಸಲುವಾಗಿ ಗ್ಯಾರೇಜುಗಳು, ಗುಜರಿ, ಕಸ ವಿಲೇವಾರಿ ಘಟಕ ಮುಂತಾದ ಬಾಲ/ಕಿಶೋರ ಕಾರ್ಮಿಕರು ಹೆಚ್ಚಾಗಿ ಕಂಡುಬರುವಂತಹ ಸ್ಥಳಗಳಲ್ಲಿ ಹೆಚ್ಚು ತಪಾಸಣೆ ನಡೆಸಿ ದುಡಿಮೆಯಲ್ಲಿ ತೊಡಗಿರುವ ಬಾಲ ಮತ್ತು ಕಿಶೋರ ಕಾರ್ಮಿಕರನ್ನು ರಕ್ಷಿಸಿ ಪುನರ್ವಸತಿಗೊಳಿಸಲು ಸೂಚಿಸಿದರು.
ವಲಸೆ ಕರ್ಮಿಕರ ಜೊತೆ ಬಂದಿರುವ ಮಕ್ಕಳು ಶಿಕ್ಷಣದಿಂದ ವಂಚಿತರಾಗಿರುತ್ತಾರೆ. ಅಂತಹ ಮಕ್ಕಳು ಶಿಕ್ಷಣ ಪಡೆಯುವ ಸಲುವಾಗಿ ಕಾರ್ಮಿಕ ಇಲಾಖೆಯೊಂದಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಶಿಕ್ಷಣ ಇಲಾಖೆಗಳು ಸಹಭಾಗಿತ್ವ ವಹಿಸಿ ಮಕ್ಕಳನ್ನು ಟೆಂಟ್ ಶಾಲೆ ಅಥವಾ ಅಂಗನವಾಡಿ ಕೇಂದ್ರಗಳಿಗೆ ಮಕ್ಕಳನ್ನು ದಾಖಲಿಸಲು ಸೂಚಿಸಿದರು.

ಬಾಲ ಕಾರ್ಮಿಕ /ಕಿಶೋರ ಕಾರ್ಮಿಕ (ನಿಷೇಧ ಹಾಗೂ ನಿಯಂತ್ರಣ)ಕಾಯ್ದೆ 1986 ರಡಿ ಬಾಲಕಾರ್ಮಿಕತೆ ನಿರ್ಮೂಲನೆ ಕುರಿತಂತೆ ಜಿಲ್ಲಾವಾರು ಹಾಗೂ ತಾಲ್ಲೂಕುವಾರು ಅರಿವು ಕಾರ್ಯಕ್ರಮಗಳನ್ನು ಎಲ್ಲಾ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಲು ಸೂಚಿಸಿದರು.
2024-25 ನೇ ಸಾಲಿನಲ್ಲಿ ಒಟ್ಟು 832 ತಪಾಸಣೆಗಳು, 40 ಬಾಲ/ಕಿಶೋರ ಕಾರ್ಮಿಕರು ಪತ್ತೆಯಾಗಿದ್ದು, ಪೊಲೀಸ್ ಠಾಣೆಯಲ್ಲಿ ಬಾಲ/ಕಿಶೋ ರಕಾರ್ಮಿಕರನ್ನು ನೇಮಿಸಿಕೊಂಡ ಮಾಲೀಕರ ವಿರುದ್ಧ 06 ಪ್ರಕರಣಗಳಲ್ಲಿ ಎಫ್.ಐ.ಆರ್ ಆಗಿದ್ದು, 16 ಪ್ರಕರಣಗಳಲ್ಲಿ ಘನ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗಿರುತ್ತದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಸಭೆಯಲ್ಲಿ ಪೊಲೀಸ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ಸ್ಥಳೀಯ ಸರ್ಕಾರೇತರ ಸಂಸ್ಥೆಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.












Click it and Unblock the Notifications