2014ರ ಮೈಸೂರು ದಸರಾಕ್ಕೆ ಬಿತ್ತು ತೆರೆ
ಮೈಸೂರು, ಅ.4 : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 2014ರ ದಸರಾ ಮಹೋತ್ಸವಕ್ಕೆ ತೆರೆ ಬಿದ್ದಿದೆ. ದೊರೆಯ ಅನುಪಸ್ಥಿತಿಯಲ್ಲಿ ನಡೆದ ಹತ್ತು ದಿನಗಳ ದಸರಾ ಮಹೋತ್ಸವ ಶನಿವಾರ ಜಂಬೂಸವಾರಿ ನಂತರ ಕೊನೆಗೊಂಡಿತು. ಸತತ ಮೂರನೇ ವರ್ಷ 750 ಕೆ.ಜಿ.ತೂಕದ ಚಿನ್ನದ ಅಂಬಾರಿ ಹೊತ್ತ ಅರ್ಜುನ ಬನ್ನಿ ಮಂಟಪವನ್ನು ತಲುಪಿದ. ತಾಯಿ ಚಾಮುಂಡೇಶ್ವರಿ ವಿಗ್ರಹವನ್ನು ಚಿನ್ನದ ಅಂಬಾರಿಯಲ್ಲಿ ಹೊತ್ತು ಸಾಗುವ ಜಂಬೂ ಸವಾರಿಗೆ ದೇಶ-ವಿದೇಶದ ಲಕ್ಷಾಂತರ ಜನರು ಸಾಕ್ಷಿಯಾದರು.
ಸ್ವಲ್ಪ ವಿಳಂಬವಾಗಿಯೇ ಈ ಬಾರಿಯ ಜಂಬೂ ಸವಾರಿ ಆರಂಭವಾಯಿತು. ತಾಯಿ ಚಾಮುಂಡೇಶ್ವರಿ ವಿಗ್ರಹವನ್ನು ಅಂಬಾರಿಯಲ್ಲಿ ಹೊತ್ತ ಅರ್ಜುನ ಆನೆ 3.15ರ ಸುಮಾರಿಗೆ ಅರಮನೆಯ ಮುಂಭಾಗದಲ್ಲಿ ಹಾಕಲಾಗಿದ್ದ ವಿಶೇಷ ವೇದಿಕೆ ಬಳಿ ಬಂದಿತು. ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಿದರು. [ಪಾದರಕ್ಷೆ ಧರಿಸಿ ತಾಯಿಗೆ ಪುಷ್ಪಾರ್ಚನೆ ಮಾಡಿಲ್ಲ: ಸಿದ್ದು]

750 ಕೆ.ಜಿ.ತೂಕದ ಅಂಬಾರಿ ಹೊತ್ತ ಅರ್ಜುನ ಗಜ ಗಾಂಭೀರ್ಯದಿಂದ ನಿಧಾನವಾಗಿ ಬನ್ನಿಮಂಟಪದತ್ತ ಹೆಜ್ಜೆ ಹಾಕಿದ. ಜಂಬೂ ಸವಾರಿಯ ನೇತೃತ್ವವನ್ನು ಬಲರಾಮ ಆನೆ ವಹಿಸಿದ್ದರೆ, ಮೇರಿ ಮತ್ತು ಕಾವೇರಿ ಆನೆಗಳು ಅರ್ಜುನನ ಜೊತೆ ಹೆಜ್ಜೆ ಹಾಕಿದವು. ಅರಮನೆಯಿಂದ ಹೊರಟ ಅರ್ಜುನ ಸುಮಾರು 90 ನಿಮಿಷಗಳಲ್ಲಿ ಬನ್ನಿ ಮಂಟಪವನ್ನು ತಲುಪಿದ.
ಸಂಜೆ ಏಳು ಗಂಟೆಗೆ ರಾಜ್ಯಪಾಲ ವಜೂಭಾಯಿ ವಾಲಾ ಅವರು ಬನ್ನಿ ಮಂಟಪದ ಮೈದಾನದಲ್ಲಿ ಪಂಜಿನ ಕವಾಯಿತಿಗೆ ಚಾಲನೆ ನೀಡಿ ಅದನ್ನು ವೀಕ್ಷಿಸಲಿದ್ದಾರೆ. ಆ ಮೂಲಕ ಹತ್ತು ದಿನಗಳ ಮೈಸೂರು ದಸರಾ ಮಹೋತ್ಸವಕ್ಕೆ ಅಧಿಕೃತವಾದ ತೆರೆ ಬೀಳಲಿದೆ.

ಹಿಂದಿನ ಸುದ್ದಿಗಳು
ಸಮಯ 5.10 : ತಾಯಿ ಚಾಮುಂಡೇಶ್ವರಿ ಹೊತ್ತ ಅರ್ಜುನ 90 ನಿಮಿಷದಲ್ಲಿ ಬನ್ನಿ ಮಂಟಪ ತಲುಪಿದ್ದು, ಜಂಬೂ ಸವಾರಿಗೆ ತೆರೆ ಬಿದ್ದಿದೆ. ಯಶಸ್ವಿಯಾಗಿ 3ನೇ ಬಾರಿ ಅರ್ಜುನ ಆನೆ ಜಂಬೂ ಸವಾರಿ ಪೂರ್ಣಗೊಳಿಸಿದೆ.
ಸಮಯ 5 ಗಂಟೆ : ಜಂಬೂ ಸವಾರಿಯಲ್ಲಿ ಪಾಲ್ಗೊಂಡಿದ್ದ ಅಭಿಮನ್ಯು ಆನೆ ತೀವ್ರವಾದ ಬಳಲಿಕೆಯಿಂದಾಗಿ ಅರ್ಧದಾರಿಯಿಂದ ವಾಪಸ್ ಆಗಿದೆ. ಹೈವೆ ಸರ್ಕಲ್ ಬಳಿಯಿಂದ ಅಭಿಮನ್ಯು ವಾಪಸ್ ಅರಮನೆಗೆ ಮರಳಿದೆ.
Mysuru Dasara! pic.twitter.com/n1lWXgXX4q
— Chief Minister (@CMofKarnataka) October 4, 2014 ಸಮಯ 3.15 : ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಜಂಬೂ ಸವಾರಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಚಿವ ಶ್ರೀನಿವಾಸ ಪ್ರಸಾದ್, ಜಿಲ್ಲಾಧಿಕಾರಿ ಶಿಖಾ, ಮೈಸೂರು ಪೊಲೀಸ್ ಆಯುಕ್ತ ಸಲೀಂ ಮುಂತಾದವರು ಉಪಸ್ಥಿತರಿದ್ದರು.
ಸಮಯ 3 ಗಂಟೆ : ಅಂಬಾವಿಲಾಸ ಅರಮನೆ ಆವರಣದಲ್ಲಿ ರಾಣಿ ಪ್ರಮೋದಾ ದೇವಿ ಅವರಿಂದ ಅಂಬಾರಿಗೆ ನಮನ ಸಲ್ಲಿಕೆ, ಚಾಮುಂಡೇಶ್ವರಿಗೆ ಪುಷ್ಪಾರ್ಚನೆ
ಸಮಯ 2.50 : ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಅರ್ಜುನನಿಗೆ ಚಿನ್ನದ ಅಂಬಾರಿಯನ್ನು ಕಟ್ಟುವ ಕಾರ್ಯ ಪೂರ್ಣಗೊಂಡಿದೆ. ಅಂಬಾರಿ ಹೊತ್ತು ಅರ್ಜುನ ಅರಮನೆಯತ್ತ ಆಗಮಿಸುತ್ತಿದ್ದಾನೆ.
ಸಮಯ 2 ಗಂಟೆ : ಸ್ತಬ್ಥ ಚಿತ್ರಗಳು ಮತ್ತು ಕಲಾ ತಂಡಗಳ ಮೆರಮಣಿಗೆ ಆರಂಭವಾಗಿದೆ.
ಸಮಯ 1.25 : ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ 12 ಆನೆಗಳು ಅರಮನೆ ಆವರಣಕ್ಕೆ ಆಗಮಿಸಿವೆ.
ಸಮಯ 1.08 : ತೆರೆದ ಜೀಪಿನಲ್ಲಿ ಸವಾರಿ ಹೊರಟ ಸಿಎಂ, ಅರಮನೆಯ ಸುತ್ತಲಿರುವ ಜನರಿಗೆ ಕೈಬೀಸಿ ಶುಭಾಶಯ ಸಲ್ಲಿಸಿದರು. ಸಚಿವರಾದ ಶ್ರೀನಿವಾಸ ಪ್ರಸಾದ್, ಎಚ್.ಸಿ.ಮಹದೇವಪ್ಪ, ಶಾಸಕ ತನ್ವೀರ್ ಸೇಠ್ ಮುಂತಾದವರು ಸಿಎಂ ಜೊತೆಗಿದ್ದಾರೆ. ಜಂಬೂ ಸವಾರಿಗೆ ಚಾಲನೆ ನೀಡಲು ವೇದಿಕೆಯತ್ತ ಸಿಎಂ ತೆರಳುತ್ತಿದ್ದಾರೆ.
ಸಮಯ 1.03 : ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಸಿಎಂ ಸಿದ್ದರಾಮಯ್ಯ ತಾಯಿ ಚಾಮುಂಡೇಶ್ವರಿ ನಾಡಿನ ಎಲ್ಲಾ ಜನರಿಗೆ ಸುಖ, ಶಾಂತಿ ನೀಡಲಿ ಎಂದು ಹೇಳಿ, ನಾಡಿನ ಜನರಿಗೆ ದಸರಾ ಶುಭಾಶಯ ಕೋರಿದರು.
ಸಮಯ 1 ಗಂಟೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಅರಮೆನ ಆವರಣಕ್ಕೆ ಆಗಮಿಸಿದ್ದಾರೆ
ಸಮಯ 10.42 : ಮುಖ್ಯಮಂತ್ರಿ ಸಿದ್ದರಾಮಯ್ಯ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಮಠದಲ್ಲೇ ಸಿಎಂ ಉಪಹಾರ ಸೇವಿಸಿದ್ದಾರೆ. ಸಚಿವರಾದ ಎಚ್.ಸಿ.ಮಹದೇವಪ್ಪ, ಎಚ್.ಎಸ್.ಮಹದೇವ ಪ್ರಸಾದ್ ಸಿಎಂ ಜೊತೆಗಿದ್ದಾರೆ.
ಹಿಂದಿನ ಸುದ್ದಿ : ಅರಮನೆ ಸಮೀಪದ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ಮಧ್ಯಾಹ್ನ 1 ಗಂಟೆ 5 ನಿಮಿಷಕ್ಕೆ ನಂದಿಧ್ವಜಕ್ಕೆ ಸಿಎಂ ಸಿದ್ದರಾಮಯ್ಯ ಪೂಜೆ ಸಲ್ಲಿಸಿ ಜಂಬೂ ಸವಾರಿಗೆ ಚಾಲನೆ ನೀಡಲಿದ್ದಾರೆ. 1 ಗಂಟೆ 30 ನಿಮಿಷದ ಒಳಗೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ಚಾಮುಂಡೇಶ್ವರಿ ವಿಗ್ರಹ ಹೊತ್ತ ಚಿನ್ನದ ಅಂಬಾರಿಗೆ ಅವರು ಪುಷ್ಪನಮನ ಸಲ್ಲಿಸಲಿದ್ದಾರೆ. [ಮೈಸೂರು ದಸರಾ ಚಿತ್ರಗಳನ್ನು ನೋಡಿ]
42 ಸ್ತಬ್ಧ ಚಿತ್ರಗಳು, 77 ಕಲಾ ತಂಡಗಳು ಅರಮನೆ ಅಂಗಳದಿಂದ ಬನ್ನಿಮಂಟಪವರೆಗೆ ಸಾಗುವ ಸುಮಾರು 4 ಕಿ.ಮೀ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿವೆ. ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ಸಾರ್ವಜನಿಕರು ದಸರಾ ವೀಕ್ಷಿಸಲು ದಾರಿಯುದ್ದಕ್ಕೂ ಆಸನದ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಅಲ್ಲಲ್ಲಿ ಕುಡಿಯುವ ನೀರಿವ ವ್ಯವಸ್ಥೆ ಸಹ ಮಾಡಲಾಗಿದೆ.












Click it and Unblock the Notifications