ಮೈಸೂರು ಜಂಬೂ ಸವಾರಿ ಆನೆಗಳ ಬಯೋಡೇಟಾ
2014ನೇ ಸಾಲಿನ ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಸಿದ್ಧತೆಗಳು ಆರಂಭಗೊಂಡಿವೆ. ದಸರಾದ ಪ್ರಮುಖ ಆಕರ್ಷಣೆ ಎಂದರೆ ಜಂಬೂ ಸವಾರಿ. ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳು ಮೈಸೂರಿಗೆ ಆಗಮಿಸಿದ್ದು, ತಾಲೀಮು ಆರಂಭಿಸಿವೆ. ಮೊದಲ ಹಂತದಲ್ಲಿ ಚಿನ್ನದ ಅಂಬಾರಿ ಹೊರುವ ಅರ್ಜುನ ಸೇರಿದಂತೆ ಆರು ಆನೆಗಳು ಮೈಸೂರಿಗೆ ಆಗಮಿಸಿವೆ.
ಕಳೆದ ಬಾರಿ ದಸರಾ ಮುಗಿಸಿ ಕಾಡಿಗೆ ಮರಳಿದ್ದ ಗಜಪಡೆಗಳಲ್ಲಿ ಕೆಲವು ಆನೆಗಳು ಮತ್ತಿಗೋಡು ಶಿಬಿರದಲ್ಲಿದ್ದವು. ಆಗಾಗ ಕಾಡಿನ ಪುಂಡಾನೆಗಳನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಿದ್ದ ಇವು, ನಂತರ ಶಿಬಿರಕ್ಕೆ ಮರಳುತ್ತಿದ್ದರು. ಕಳೆದ ಮೂರು ತಿಂಗಳಿನಿಂದ ದಸರಾ ತಯಾರಿಯಲ್ಲಿ ಆನೆಗಳು ತೊಡಗಿದ್ದವು. [ಮೈಸೂರು ದಸರಾ : ಈ ಬಾರಿ ಖಾಸಗಿ ದರ್ಬಾರ್ ಇಲ್ಲ]
2014ನೇ ಸಾಲಿನ ಗಜಪಯಣಕ್ಕೆ ನಾಗಾಪುರ ಗಿರಿಜನ ಆಶ್ರಮ ಶಾಲೆ ಆವರಣದಲ್ಲಿ ಆ.14ರಂದು ಚಾಲನೆ ನೀಡಲಾಗಿತ್ತು. ಆ.16ರ ಶನಿವಾರ ದಸರಾದಲ್ಲಿ ಪಾಲ್ಗೊಳ್ಳಲು ಅರ್ಜುನ ನೇತೃತ್ವದ ಆರು ಆನೆಗಳ ತಂಡ ಮೈಸೂರಿಗೆ ಆಗಮಿಸಿದೆ. ಮೊದಲ ತಂಡದಲ್ಲಿ ಬಲರಾಮ, ಅರ್ಜುನ, ಮೇರಿ, ಗಜೇಂದ್ರ, ವರಲಕ್ಷ್ಮಿ ಮತ್ತು ಅಭಿಮನ್ಯು ಆನೆಗಳು ಮೈಸೂರಿಗೆ ಆಗಮಿಸಿವೆ. ಆರು ಆನೆಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ.

ಅಂಬಾರಿ ಹೊರಲಿರುವ ಅರ್ಜುನ
ಅರ್ಜುನ (54) ಬಳ್ಳೆ ಆನೆ ಶಿಬಿರ ಗಂಡು ಆನೆ. 5470 ಕೆ.ಜಿ.ತೂಕವನ್ನು ಇದು ಹೊಂದಿದೆ. 1968ರಲ್ಲಿ ಖೆಡ್ಡಾ ವಿಧಾನದಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದ್ದ ಆನೆಗೆ ಅರ್ಜುನ ಎಂದು ನಾಮಕಾರಣ ಮಾಡಲಾಗಿತ್ತು. ಹಲವು ವರ್ಷಗಳಿಂದ ಇದು ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ. 2012ರಿಂದ ಚಿನ್ನದ ಅಂಬಾರಿಯನ್ನು ಹೊರುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ. ಅರ್ಜುನ ಉಸ್ತುವಾರಿಯನ್ನು ಮಾವುತರಾದ ದೊಡ್ಡ ಮಾಸ್ತಿ ಮತ್ತು ಕಾವಾಡಿಯಾದ ಸಣ್ಣಪ್ಪ ನೋಡಿಕೊಳ್ಳುತ್ತಾರೆ.

13 ವರ್ಷ ಅಂಬಾರಿ ಹೊತ್ತ ಬಲರಾಮ
18 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಬಲರಾಮ ತಿತಿಮತಿ ಆನೆ ಶಿಬಿರದ ಗಂಡು ಆನೆ. 56 ವಯಸ್ಸಿನ ಇದು 4,970 ಕೆ.ಜಿ.ತೂಕವಿದೆ. ಸೌಮ್ಯ ಸ್ವಭಾವದ ಈ ಆನೆಯನ್ನು 1987ರಲ್ಲಿ ಕೊಡಗು ಜಿಲ್ಲೆಯ ಕಟ್ಟೇಪುರ ಅರಣ್ಯ ಪ್ರದೇಶದಲಲಿ ಸೆರೆಹಿಡಿಯಲಾಗಿದೆ. ತುಂಬಾ ಬಲಶಾಲಿಯಾದ ಬಲರಾಮ ಆನೆ 13 ಬಾರಿ ಚಿನ್ನದ ಅಂಬಾರಿಯನ್ನು ಹೊತ್ತಿದೆ. ಮಾವುತರಾದ ತಿಮ್ಮ ಮತ್ತು ಕಾವಾಡಿಯಾದ ಗಣೇಶ ಬಲರಾಮನ ಜೊತೆ ಮೈಸೂರಿಗೆ ಆಗಮಿಸಿದ್ದಾರೆ.

ದಸರಾ ಉತ್ಸವಕ್ಕೆ ಅಭಿಮನ್ಯು ಹಳಬ
17 ವರ್ಷಗಳಿಂದ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಅಭಿಮನ್ಯು ಕೆ. ಗುಡಿ ಆನೆ ಶಿಬಿರದ ಗಂಡು ಆನೆ. 59 ವರ್ಷ ವಯಸ್ಸಿ ಅಭಿಮನ್ಯು 4,880 ಕೆ.ಜಿ.ತೂಕವಿದೆ. ಈ ಆನೆಯನ್ನು 1987ರಲ್ಲಿ ಕೊಡಗು ಜಿಲ್ಲೆಯ ಕಟ್ಟೆಪುರ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು. ಅಭಿಮನ್ಯುವಿನ ವಿಶೇಷ ಗುಣವೆಂದರೆ ಕಾಡಾನೆಯನ್ನು ಹಿಡಿದು ಪಳಗಿಸುವ ಕೆಲಸದಲ್ಲಿ ಹೆಚ್ಚು ಬಲಿಷ್ಠವಾಗಿದೆ. ಇದು ದಸರಾ ಮಹೋತ್ಸವದ ಪಟ್ಟದ ಆನೆ ಜವಾಬ್ದಾರಿಯನ್ನು ಹೊತ್ತಿರುತ್ತದೆ. ಅಭಿಮನ್ಯುವನ್ನು ಮಾವುತ ವಸಂತ ಮತ್ತು ಕಾವಾಡಿ ರಾಜು ನೋಡಿಕೊಳ್ಳುತ್ತಾರೆ.

ಒಂಭತ್ತನೆ ಬಾರಿ ದಸರಾಕ್ಕೆ ಬಂದಳು ವರಲಕ್ಷ್ಮಿ
ತಿತಿಮತಿ ಆನೆ ಶಿಬಿರದ ಹೆಣ್ಣುಯಾದ ವರಲಕ್ಷ್ಮೀ 9ನೇ ಬಾರಿ ದಸರಾದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಆಗಮಿಸಿದ್ದಾಳೆ. 59 ವರ್ಷದ ವರಲಕ್ಷ್ಮೀ 3,265 ಕೆ.ಜಿ ತೂಕ ಹೊಂದಿದೆ. ತುಂಬಾ ಸಾಧು ಸ್ವಭಾವದ ಆನೆ ಇದಾಗಿದ್ದು, 1977ರಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಇದನ್ನು ಸೆರೆ ಹಿಡಿಯಲಾಗಿದೆ. ಮಾವುತ ರಾಜು ಮತ್ತು ಕಾವಾಡಿ ಗುಂಡ ವರಲಕ್ಷ್ಮೀ ಜೊತೆ ಮೈಸೂರಿಗೆ ಆಗಮಿಸಿದ್ದಾರೆ.

10 ಬಾರಿ ದಸರಾದಲ್ಲಿ ಪಾಲ್ಗೊಂಡಿದೆ ಮೇರಿ
ಮೇರಿ ತಿತಿಮತಿ ಆನೆ ಶಿಬಿರದ ಹೆಣ್ಣು ಆನೆ. 58 ವರ್ಷದ ಮೇರಿ 3,035 ಕೆ.ಜಿ.ತೂಕವಿದೆ. 1977ರಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಇದನ್ನು ಸೆರೆಹಿಡಿಯಲಾಗಿದೆ. ತುಂಬಾ ಸೌಮ್ಯ ಸ್ವಭಾವದ ಆನೆಯಾದ ಇದು, ಹಿಂದೆ ಕಾಡಿನಲ್ಲಿ ಟಿಂಬರ್ ಕೆಲಸ ಕಾರ್ಯಗಳಿಗೆ ಹಾಗೂ ಸಮಾರಂಭಗಳಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿತ್ತು. ಇದುವರೆಗೂ 10 ಬಾರಿ ದಸರಾದಲ್ಲಿ ಪಾಲ್ಗೊಂಡಿರುವ ಇದು 2014ನೇ ಸಾಲಿನ ದಸರಾಕ್ಕೂ ಆಗಮಿಸಿದೆ. ಮೇರಿಯ ಆರೈಕೆಯನ್ನು ಮಾವುತ ಮೋಟ ಮತ್ತು ಕವಾಡಿ ಚಿನ್ನಾಣು ನೋಡಿಕೊಳ್ಳುತ್ತಾರೆ.

ಮೈಸೂರು ದಸರಾ ಗಜೇಂದ್ರನಿಗೆ ಹಳೆಯದು
59 ವರ್ಷದ ಗಜೇಂದ್ರ 17 ವರ್ಷಗಳಿಂದ ಮೈಸೂರು ದಸರಾದಲ್ಲಿ ಪಾಲ್ಗೊಳ್ಳುತ್ತಿದ್ದಾನೆ. 5,020 ಕೆ.ಜಿ.ತೂಕವಿರುವ ಈ ಆನೆ ದಸರಾ ಮಹೋತ್ಸವದ ಪಟ್ಟದ ಆನೆಯ ಜವಾಬ್ದಾರಿಯನ್ನು ಹೊರುತ್ತದೆ. 1987ರಲ್ಲಿ ಕೊಡಗು ಜಿಲ್ಲೆಯ ಕಟ್ಟೆಪುರ ಅರಣ್ಯ ಪ್ರದೇಶದಲ್ಲಿ ಇದನ್ನು ಸೆರೆ ಹಿಡಿಯಲಾಗಿದೆ. ಕಾಡಾನೆಗಳನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ಗಜೇಂದ್ರ ಎತ್ತಿದ ಕೈ.












Click it and Unblock the Notifications