ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಜಂಬೂಸವಾರಿಯ ಆಕರ್ಷಣೆ, ಅಶ್ವರೋಹಿ ದಳ

By ಬಿ.ಎಂ.ಲವಕುಮಾರ್
|
Google Oneindia Kannada News

ಮೈಸೂರು, ಅಕ್ಟೋಬರ್, 20: ಮೈಸೂರು ದಸರಾದ ಜಂಬೂಸವಾರಿ ಅಂದ್ರೆ ಅಂಬಾರಿ ಹೊತ್ತು ಸಾಗುವ ಗಜಪಡೆಗಳ ಮೆರವಣಿಗೆ ಬರೀ ಅಲ್ಲ. ಅದು ಜನಪದ, ಸಂಗೀತ, ಸಂಸ್ಕೃತಿ, ಪರಂಪರೆಯನ್ನು ಮೇಳೈಸುವ, ಇತಿಹಾಸ ಸಾರುವ, ನೃತ್ಯ ಪ್ರದರ್ಶನಗಳ, ಮನೋರಂಜನೆಯ, ಸರ್ಕಾರದ ಕಾರ್ಯಕ್ರಮಗಳನ್ನು ಪರಿಚಯಿಸುವ ಭವ್ಯ ಸವಾರಿ ಎಂದರೆ ತಪ್ಪಾಗಲಾರದು.

ದಸರಾ ದಿನದಂದು ನಡೆಯುವ ಜಂಬೂಸವಾರಿಯನ್ನೊಮ್ಮೆ ಗಮನಿಸಿದರೆ ನಮಗೆ ಇದೆಲ್ಲದರ ಅರಿವಾಗುತ್ತದೆ. ಗಜಪಡೆ, ಕಲಾತಂಡ, ಸ್ತಬ್ದ ಚಿತ್ರ, ಪೊಲೀಸ್ ಬ್ಯಾಂಡ್, ಅಶ್ವಾರೋಹಿ ಪಡೆ ಇತ್ಯಾದಿಗಳೆಲ್ಲವೂ ಜಂಬೂಸವಾರಿಯ ಪ್ರಮುಖ ಅಂಗಗಳಾಗಿ ಜನರ ಮನ ಸೆಳೆಯುತ್ತದೆ.ಈ ಪೈಕಿ ಕರ್ನಾಟಕ ಅಶ್ವರೋಹಿ ಪೊಲೀಸ್ ತುಕಡಿ ಕೆಎಆರ್ ಪಿ(ಮೌಂಟೆಡ್ ಕಂಪನಿ) ಮುಖ್ಯವಾದುದು. ಕುದುರೆ ಮೇಲೆ ಶಿಷ್ಠಾಚಾರದ ಉಡುಗೆ ಧರಿಸಿ ಶಿಸ್ತಿನಿಂದ ಸಾಗುವ ಸಿಬ್ಬಂದಿಗಳು ಜಂಬೂಸವಾರಿಗೆ ಕಳೆಕಟ್ಟುತ್ತಾರೆ.

ಮೈಸೂರಿನ ಅಶ್ವರೋಹಿ ಪೊಲೀಸ್ ದಳಕ್ಕೆ ತನ್ನದೇ ಇತಿಹಾಸವಿದೆ. ಹಿಂದೆ ಮೈಸೂರು ಒಡೆಯರ್ ಕಾಲದಲ್ಲಿ ಹೆಚ್.ಹೆಚ್.ಎಂ.ಎಂ.ಬಿ.ಜಿ ಅಥವಾ ಮೈಸೂರು ಮಹಾರಾಜರ ಅಶ್ವರೋಹಿ ಅಂಗರಕ್ಷಕ ಪಡೆ ಒಡೆಯರ್ ಕುಟುಂಬದ ರಕ್ಷಣೆಯ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿತ್ತು. ಅಶ್ವರೋಹಿ ದಳದ ಪ್ರತಿಯೊಬ್ಬ ಯೋಧನೂ ಕಠಿಣ ತರಬೇತಿ ಪಡೆದು ನುರಿತ ಸವಾರನಾಗಿರುತ್ತಿದ್ದರು.[ಮೈಸೂರಿನ ಅರಮನೆಗಳ ಇತಿಹಾಸ ಗೊತ್ತಾ?]

Mysore Dasara another attraction is Ashvarohi dala

ಪ್ರತಿ ನಿತ್ಯ ರಾಜಪರಿವಾರದವರಿಗೆ ಬೆಂಗಾವಲಾಗಿ ಕಾರ್ಯನಿರ್ವಹಿಸುವುದರೊಂದಿಗೆ ಪ್ರತಿವರ್ಷವೂ ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಮೂಲಕ ಮೆರವಣಿಗೆಗೆ ಕಳೆಕಟ್ಟುತ್ತಿದ್ದರು. ಅಂದಿನಿಂದ ಇಂದಿನವರೆಗೂ ಜಂಬೂಸವಾರಿಯಲ್ಲಿ ಅಶ್ವರೋಹಿ ದಳ ಪಾಲ್ಗೊಳ್ಳುತ್ತಾ ಬರುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಒಡೆಯರ್ ಅಧೀನದಲ್ಲಿದ್ದ ಅಶ್ವಾರೋಹಿ ಅಂಗ ರಕ್ಷಕ ತಂಡವು ಸ್ವಾತಂತ್ರ್ಯ ಬಳಿಕ ಮೈಸೂರು ರಾಜ್ಯ ಪೊಲೀಸ್ ಸಂಸ್ಥೆಗೆ ಸೇರ್ಪಡೆಗೊಂಡು ಆಧುನಿಕ ಪ್ರಜಾಪ್ರಭುತ್ವದ ಅಶ್ವರೋಹಿ ಪೊಲೀಸ್ ತಂಡವಾಗಿ ಹೊಸ ರೂಪ ತಾಳಿತು.

ನಂತರದ ಕಾಲಘಟ್ಟದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಹೊಣೆ ಹೊತ್ತು ಗುಂಪು ನಿಯಂತ್ರಣ, ಸಾರಿಗೆ ನಿಯಂತ್ರಣ, ಸಮೂಹ ನಿಯಂತ್ರಣ, ಕೂಚು, ಶಿಷ್ಟಾಚಾರದ ಬೆಂಗಾವಲು, ಕಾವಲು ಕರ್ತವ್ಯ ಮತ್ತು ರಾತ್ರಿ ಗಸ್ತು ಮುಂತಾದ ಕರ್ತವ್ಯ ನಿರ್ವಹಣೆ ಜವಬ್ದಾರಿಯನ್ನು ಹೊತ್ತುಕೊಂಡಿದೆ. ಮೈಸೂರಿನ ಅಶ್ವರೋಹಿ ದಳವು ದಿನನಿತ್ಯದ ಕರ್ತವ್ಯಗಳನ್ನು ಪಾಲಿಸುವುದರೊಂದಿಗೆ ದಸರಾ ಮೆರವಣಿಗೆಯಲ್ಲಿಯೂ ಪ್ರಮುಖ ಪಾತ್ರವಹಿಸುತ್ತಿದೆ. ಇನ್ನು ಕ್ರೀಡೆಗಳಲ್ಲಿ ಹಿಂದೆ ಬೀಳದೆ ರಾಷ್ಟ್ರೀಯ, ಅಂತರರಾಷ್ಟ್ರೀಯ ಕ್ರೀಡೆಗಳಲ್ಲೂ ಹೆಸರು ಮಾಡಿರುವುದು ಹೆಮ್ಮೆಯ ವಿಷಯವಾಗಿದೆ.

ಒಡೆಯರ್ ಕಾಲದಲ್ಲಿ ಅಶ್ವರೋಹಿ ಪಡೆಗಾಗಿ ಅರಮನೆಯ ಹೊರವಲಯದಲ್ಲಿ ನಗರದ ಲಲಿತ್ ಮಹಲ್ ರಸ್ತೆಯಲ್ಲಿ ವಿಶಿಷ್ಟವಾಗಿ ಅಂದ್ರೆ ಕುದುರೆ ಲಾಳಾಕೃತಿಯ ಪ್ರವೇಶದ್ವಾರದ ಕಟ್ಟಡವನ್ನು ನಿರ್ಮಿಸಲಾಗಿತ್ತಲ್ಲದೆ, ಇಲ್ಲಿ ಅಶ್ವರೋಹಿ ಪಡೆಯ ಆಡಳಿತ ಕಛೇರಿ ಹಾಗೂ ಉಗ್ರಾಣ, ಸಾಮಾನು, ಸರಂಜಾಮು, ಕತ್ತಿ, ಭರ್ಜಿಗಳ ಪ್ರತ್ಯೇಕ ಕೊಠಡಿ ಮತ್ತು ಇತರ ಸೌಲಭ್ಯಗಳುಳ್ಳ ಕೊಠಡಿಗಳು ಹಾಗೂ ಕುದುರೆ ಲಾಯದ ವ್ಯವಸ್ಥೆ ಮಾಡಲಾಗಿತ್ತು.[ಇಷ್ಟಕ್ಕೂ ದಸರಾ ಆನೆಗಳನ್ನು ಸಾಕೋದು ಅಂದ್ರೆ ಸುಮ್ಮನೇನಾ?]

Mysore Dasara another attraction is Ashvarohi dala

ಇಂದಿಗೂ ದೂರದಿಂದಲೇ ನೋಡುಗರನ್ನು ಕುದುರೆ ಲಾಳಾಕೃತಿಯ ಪ್ರವೇಶ ದ್ವಾರ ಹಾಗೂ ಗೋಪುರದಿಂದ ಕೂಡಿದ ಈ ಕಟ್ಟಡ ಆಕರ್ಷಿಸುತ್ತದೆ. ಒಳಗೆ ಪ್ರವೇಶಿಸಿದರೆ, ಕಲ್ಲುಹಾಸಿನ ಅಂಗಣ ಇದೆ. ಅಲ್ಲಿ ಗೋಡೆಯ ಮೇಲೆ ಪರಸ್ಪರ ಎದುರು ಬದುರಾಗಿ ವ್ಯವಸ್ಥಿತವಾಗಿ ಬೃಹತ್ ದರ್ಪಣ (ಗಾಜಿನ ಕನ್ನಡಿ)ಗಳನ್ನಿಡಲಾಗಿದೆ. ಬಹುಶಃ ಅದು ತಮ್ಮ ಕುದುರೆಗಳ ಮತ್ತು ಪೋಷಾಕು ಧರಿಸಿದ ಬಳಿಕ ವೈಯುಕ್ತಿಕ ಒಪ್ಪ ಓರಣವನ್ನು ನೋಡಿಕೊಂಡು ಸರಿಪಡಿಸಿಕೊಳ್ಳಲು ವ್ಯವಸ್ಥೆ ಮಾಡಿದ್ದಾಗಿರಬಹುದು.

ಮೈಸೂರು ಅರಮನೆಯ ಅಶ್ವರೋಹಿ ಅಂಗರಕ್ಷಕ ಪಡೆಯ ಆವಾಸ ಸ್ಥಾನವಾಗಿದ್ದ ಈ ಕಟ್ಟಡವನ್ನು ಕ್ರಿ.ಶ. 1918 - 1920ರ ವೇಳೆಯಲ್ಲಿ ಸುಮಾರು 80ಸಾವಿರ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಪ್ರವೇಶ ದ್ವಾರದ ಇಕ್ಕೆಲಗಳಲ್ಲಿ ಈ ಸಂಕೀರ್ಣದ ಅಡಿಪಾಯದ ಮತ್ತು ಉದ್ಘಾಟನೆಯ ಫಲಕಗಳನ್ನು ಅಳವಡಿಸಲಾಗಿದೆ. ಕೆಂಪು ಬಣ್ಣದ ಬೋಗನ್ ವಿಲ್ಲಾ ಹೂಬಳ್ಳಿಗಳ ಚಿತ್ರವನ್ನು ಎಲ್ಲ ಕಿಟಕಿಗಳ ಮುಂದೆ ಕಲಾತ್ಮಕವಾಗಿ ಚಿತ್ರಿಸಲಾಗಿದೆ. ಈ ಕಟ್ಟಡಗಳಲ್ಲಿ ಸೂಕ್ತ ಮತ್ತು ಸಮರ್ಪಕ ವ್ಯವಸ್ಥೆಯೊಂದಿಗೆ ಸುಮಾರು 100 ಕುದುರೆಗಳ ವಾಸಕ್ಕೆ ಅನುಕೂಲವಾಗುವಂತೆ ನೀರು, ಗಾಳಿ ಮತ್ತು ಬೆಳಕುಗಳ ವ್ಯವಸ್ಥೆಯಿದೆ.

ಇಲ್ಲೊಂದು ಸಂಗ್ರಹಾಲಯವಿದ್ದು, ಹಿಂದೆ ಇದ್ದ ಮೈಸೂರು ಮಹಾರಾಜರ ಅಶ್ವರೋಹಿ ಅಂಗ ರಕ್ಷಕ ಪಡೆ, ಅರಮನೆಯ ಬ್ಯಾಂಡ್ ಮತ್ತು ಅರಮನೆಯ ವಾದ್ಯಗೋಷ್ಠಿಗಳಿಗೆ ಸೇರಿದ ಬಹು ಸಂಖ್ಯೆಯ ದಾಖಲೆಗಳು, ಚಿತ್ರಗಳು, ಉಪಕರಣಗಳು, ಹಳೆಯ ಮತ್ತು ಅಪರೂಪದ ದೇಶ ವಿದೇಶದ ಸಂಗೀತ ವಾದ್ಯಗಳು, ಪುಸ್ತಕಗಳನ್ನು ಇಲ್ಲಿ ಕಾಣಬಹುದಾಗಿದೆ. ಸುಂದರ ಹಾಗೂ ಆಕರ್ಷಕವಾದ ಈ ಕಟ್ಟಡ ನಿರ್ಮಾಣವಾಗಿ ಸುಮಾರು 95 ವರ್ಷಗಳು ಕಳೆದಿವೆ. ಹೀಗಾಗಿ ಇತ್ತೀಚೆಗೆ ಈ ಕಟ್ಟಡದ ದುರಸ್ತಿ ಕಾರ್ಯವನ್ನು ಮಾಡಲಾಗಿದೆ.[ದಸರಾ ಗಜಪಡೆಗಳ ತೊಡುಗೆ ತಯಾರಿ ಹೇಗಿರುತ್ತದೆ?]

Mysore Dasara another attraction is Ashvarohi dala

ಅಶ್ವರೋಹಿ ತಂಡದ ಸಿಪಾಯಿಗಳ ಪೋಷಾಕು ಆತ್ಯಾಕರ್ಷಕವಾಗಿದೆ. ಅವರ ಶಿಷ್ಟಾಚಾರದ ಸಮವಸ್ತ್ರದ ತೊಡುಗೆಯ ಬಣ್ಣ, ಮಾದರಿ, ವಿನ್ಯಾಸ ಮತ್ತು ಅದರೊಡನೆ ಇರುವ ಅಸಂಖ್ಯ ಸಣ್ಣ ಸಣ್ಣ ಅಂಶಗಳನ್ನು ಗಮನಿಸಿದರೆ, ಮೈಸೂರಿನ ಅಂದಿನ ಒಡೆಯರ್‍ಗಳು ಸಿಬ್ಬಂದಿಯ ಪೋಷಾಕುಗಳ ಕುರಿತು ವಹಿಸುತ್ತಿದ್ದ ವೈಯಕ್ತಿಕ ಕಾಳಜಿ ಮತ್ತು ಅದಕ್ಕೆ ಪೂರಕವಾಗಿದ್ದ ಕಲಾವಂತಿಕೆ ಎದ್ದು ಕಾಣುತ್ತದೆ.

ಅಶ್ವರೋಹಿ ಪಡೆಯ ವಿವಿಧ ಉಡುಗೆಗಳು:

ಈ ಉಡುಗೆ ತೊಡುವುದರಲ್ಲೂ ವಿಶೇಷತೆಯಿದ್ದು, ಕಾಲ ಮತ್ತು ಕರ್ತವ್ಯಕ್ಕೆ ತಕ್ಕಂತೆ ಬದಲಾವಣೆಯ ಸುಮಾರು ಏಳು ಮಾದರಿಯ ಉಡುಗೆಗಳನ್ನು ಕಾಣಬಹುದಾಗಿದೆ. ಅವುಗಳೆಂದರೆ,
1) ಚಳಿಗಾಲದ ಶಿಷ್ಟಾಚಾರದ ಉಡುಗೆ, 2) ಬೇಸಿಗೆಯ ಶಿಷ್ಟಾಚಾರದ ಉಡುಗೆ, 3) ಅರಮನೆಯ ಕಾವಲು ಶಿಷ್ಟಾಚಾರದ ಉಡುಗೆ, 4) ಕ್ವಾರ್ಟರ್ ಗಾರ್ಡ್ ಕಾವಲು ಉಡುಗೆ, 5) ಕಾಲಾ-ಪೀಲಾ ಶಿಷ್ಟಾಚಾರದ ಉಡುಗೆ, 6) ಕೆ.ಎ.ಆರ್.ಪಿ. ಕಾವಲು ಉಡುಗೆ, 7) ಕುದುರೆ ಸವಾರಿ ಮತ್ತು ಕ್ರೀಡಾ ಉಡುಗೆಗಳಾಗಿವೆ.

ವಿಶೇಷತೆ : ಸಿಬ್ಬಂದಿಗಳು ಸಮವಸ್ತ್ರದಲ್ಲಿ ಸದಾ ಕಾಲ ಆಕರ್ಷಕವಾಗಿ ಕಾಣುವ ಕಲೆಯನ್ನು ರೂಢಿಸಿಕೊಂಡಿರುವುದು ಅಶ್ವ್ವರೋಹಿ ದಳದ ವಿಶೇಷತೆಯಾಗಿದೆ. ಪಡೆಯ ಸಿಬ್ಬಂದಿಗಳು ತಮ್ಮ ಯಾವುದೇ ಕರ್ತವ್ಯಗಳಿಗೆ ಸಿದ್ದರಾಗಲು ತಮ್ಮ ವೈಯುಕ್ತಿಕ ಸಮವಸ್ತ್ರದ ಎಲ್ಲ ವಿಷಯ ಕುರಿತಂತೆ ಜೊತೆಗೆ ತಮ್ಮ ಕುದುರೆಗಳ ದೈಹಿಕ ಸಿದ್ದತೆ, ಜೀನು ಮತ್ತು ಬಹು ಬಗೆಯ ಇತರ ಸಲಕರಣೆಗಳ ಬಗ್ಗೆ ಕಾಳಜಿ ಮುತುವರ್ಜಿ ಮತ್ತು ವೈಯಕ್ತಿಕ ಶ್ರಮ ವಹಿಸುವುದು ಅನಿವಾರ್ಯವಾಗಿದೆ. ಅಶ್ವಾರೋಹಿ ತಂಡದ ಶಿಷ್ಟಾಚಾರದ ಸಮವಸ್ತ್ರ ಕಡು ನೀಲಿಯ ಬಣ್ಣದ್ದಾಗಿದ್ದು ಅವರ ಪೇಟಾಕ್ಕೆ ನೀಲಿ ಮತ್ತು ಬಂಗಾರದ ಬಣ್ಣದ ಮೆರುಗು ಸೇರಿಕೊಂಡಿದೆ. ಇದನ್ನು ಧರಿಸಿ ಕುದುರೆ ಮೇಲೆ ಸಾಗುತ್ತಿದ್ದರೆ ನೋಡುವುದೇ ಅದೊಂದು ರೀತಿಯ ಮಜಾ...

English summary
Mysore dasara's Ashvarohi dala is very decipline group. It is another attraction of the Dasara. They are always caring for mysore palace horses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X