ಮೈಸೂರು: ಭಾರಿ ಮಳೆಗೆ ಗೋಡೆ ಕುಸಿದು ಬಿದ್ದು 6 ವರ್ಷದ ಬಾಲಕ ಸಾವು
ಮೈಸೂರು, ಸೆಪ್ಟೆಂಬರ್ 6: ಎಚ್.ಡಿ.ಕೋಟೆ ತಾಲೂಕಿನ ಗದ್ದಿಗೆ ರಸ್ತೆ, ಕೊಡಸೀಗೆ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಬಾಲಕನೊಬ್ಬ ಮೃತ ಪಟ್ಟಿರುವ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.
ಗ್ರಾಮದ ಕುಮಾರೇಗೌಡರ ಪುತ್ರ ಸಂತೋಷ್ ಗೌಡ (7) ಮೃತಪಟ್ಟ ಬಾಲಕ. ಈತ ಇದೇ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2ನೇ ತರಗತಿಯಲ್ಲಿ ಓದುತ್ತಿದ್ದನು.

ಬುಧವಾರ ಬೆಳಿಗ್ಗೆ 7 ಗಂಟೆಯ ಸಮಯದಲ್ಲಿ ಮನೆಯಿಂದ ಅಂಗಡಿಗೆ ಹೋಗುತ್ತಿದ್ದ ಎನ್ನಲಾಗಿದ್ದು, ಈ ಸಂದರ್ಭದಲ್ಲಿ ಪಕ್ಕದ ಮನೆಯ ಸುಮಾರು 15 ಅಡಿ ಎತ್ತರದ ಇಟ್ಟಿಗೆ ಮತ್ತು ಮಣ್ಣಿನಿಂದ ಕಟ್ಟಿದ್ದ ಗೋಡೆ ಕುಸಿದು ಬಾಲಕನ ಮೇಲೆ ಬಿದ್ದಿದೆ. ಪರಿಣಾಮ ಬಾಲಕ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ.
ಗೋಡೆ ಕುಸಿದು ಬಿದ್ದ ಶಬ್ದ ಕೇಳಿ ಅಕ್ಕ ಪಕ್ಕದವರು ಹತ್ತಿರ ಹೋಗಿ ನೋಡಿದಾಗ ಬಾಲಕ ಗೋಡೆಯ ಅವಶೇಷದಡಿಗೆ ಸಿಲುಕಿರುವುದು ಕಂಡು ಬಂದಿದೆ. ತಕ್ಷಣ ರಕ್ಷಿಸುವ ಪ್ರಯತ್ನಕ್ಕೆ ಗ್ರಾಮಸ್ಥರು ಮುಂದಾದರಾದರೂ ಅದಾಗಲೇ ಬಾಲಕ ಮೃತ ಪಟ್ಟಿದ್ದರಿಂದ ಯಾವುದೇ ಪ್ರಯೋಜನವಾಗಲಿಲ್ಲ.

ವಿಷಯ ತಿಳಿದು ಸ್ಥಳಕ್ಕೆ ತಹಸೀಲ್ದಾರ್ ಎಂ. ನಂಜುಂಡಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಬಂಧ ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತ ದೇಹವನ್ನು ವಾರಸುದಾರರಿಗೆ ಒಪ್ಪಿಸಲಾಯಿತು. ಬಳಿಕ ಬಾಲಕನ ಅಂತ್ಯ ಸಂಸ್ಕಾರ ಕೊಡಸೀಗೆ ಗ್ರಾಮದಲ್ಲಿ ನಡೆಸಲಾಯಿತು.
ಚೆಲುವಾಂಬ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯ : ನವಜಾತ ಶಿಶು ಸಾವು
ಮೈಸೂರಿನ ಚಲುವಾಂಬ ಆಸ್ಪತ್ರೆಯಲ್ಲಿ ಮಕ್ಕಳ ಮಾರಣ ಹೋಮ ಮತ್ತೆ ಮುಂದುವರೆದಿದೆ. ನವಜಾತ ಶಿಶುವೊಂದು ಇಂದು ಮೃತಪಟ್ಟಿದ್ದು ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಪೋಷಕರು ಪ್ರತಿಭಟನೆ ನಡೆಸಿದ್ದಾರೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಹನುಂತನಗರದ ಸಂತೋಷ್ ಹಾಗೂ ಪ್ರತಿಭಾ ದಂಪತಿಗಳ ಮಗುವೇ ಸಾವನ್ನಪ್ಪಿರುವುದು. ಪ್ರತಿಭಾ ಹೆರಿಗೆಗಾಗಿ ನಿನ್ನೆ ಮಧ್ಯಾಹ್ನ ಚೆಲುವಾಂಬ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಹೆರಿಗೆ ನಂತರ ಮಗು ಸಾವನ್ನಪ್ಪಿದ್ದು, ಮಗು ಮಲ ಮೂತ್ರ ಕುಡಿದ ಕಾರಣ ಸಾವನ್ನಪ್ಪಿದೆ ಅಂತಾ ವೈದ್ಯರು ಹೇಳಿದ್ದಾರೆ.

ಆದರೆ, ಇದನ್ನ ತಳ್ಳಿ ಹಾಕಿದ ಮಗುವಿನ ದಂಪತಿ ಆಸ್ಪತ್ರೆಯ ಸಿಬ್ಬಂದಿ ಹಾಗೂ ವೈದ್ಯರ ನಿರ್ಲಕ್ಷದ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ.
"ನಿನ್ನೆಯೆ ಸಿಜೆರಿಯನ್ ಮಾಡಿದ್ರೆ ನನ್ನ ಮಗು ಬದುಕುತ್ತಿತ್ತು. ಪ್ರತಿ ಹಂತದಲ್ಲಿ ಸಿಬ್ಬಂದಿ ಲಂಚ ಕೇಳುತ್ತಾರೆ. ಗರ್ಭಿಣಿಯರಿಗೆ ಮನ ಬಂದಂತೆ ನರ್ಸ್ ಗಳು ನಿಂದಿಸುತ್ತಾರೆ," ಎಂದು ಆರೋಪಿಸಿ ಚೆಲುವಾಂಬ ಆಸ್ಪತ್ರೆಯ ಮುಂದೆ ನವಜಾತ ಶಿಶು ಹಿಡಿದು ದಂಪತಿಗಳು ಪ್ರತಿಭಟನೆ ನಡೆಸಿದ್ದಾರೆ.
ಇನ್ನು ಚೆಲುವಾಂಬ ಆಸ್ಪತ್ರೆಯಲ್ಲಿ ಒಂದೇ ತಿಂಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಶಿಶುಗಳು ಸಾವನ್ನಪ್ಪಿವೆ. ಸ್ಥಳಕ್ಕೆ ದೇವರಾಜ ಠಾಣಾ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications