MUDA Scam: ಸಿಎಂ ಸಿದ್ದರಾಮಯ್ಯ ಪತ್ನಿ ಹೆಸರಲ್ಲಿದ್ದ 14 ನಿವೇಶನ ಹಿಂಪಡೆದ ಮುಡಾ
ಮುಡಾ ಸೈಟು ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಎಫ್‌ಐಆರ್ ದಾಖಲಾದ ಬಳಿಕ, 14 ನಿವೇಶಗಳನ್ನು ವಾಪಸ್ ಮಾಡುವುದಾಗಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಪತ್ರ ಬರೆದಿದ್ದರು. ಪತ್ರಕ್ಕೆ ಸ್ಪಂದಿಸಿರುವ ಮುಡಾ ಇದೀಗ ಅಧಿಕೃತವಾಗಿ 14 ನಿವೇಶಗಳನ್ನು ವಾಪಸ್ ಪಡೆದುಕೊಂಡಿದೆ. ಭಾನುವಾರ ಮುಡಾಗೆ ನಿವೇಶನ ವಾಪಸ್ ಪಡೆಯಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪತ್ರ ಬರೆದು ಮನವಿ ಮಾಡಿದ್ದರು, ಇದರ ಜೊತೆಗೆ ಸುಧೀರ್ಘ ಭಾವನಾತ್ಮಕ ಪತ್ರವನ್ನು ಕೂಡ ಬರೆದಿದ್ದರು.
ಸಿದ್ದರಾಮಯ್ಯನವರಿಗೆ ರಾಜಕೀಯವಾಗಿ ಸಂಕಷ್ಟವಾಗುತ್ತಿರುವುದನ್ನು ನೋಡಲಾಗದೆ 14 ನಿವೇಶನಗಳನ್ನು ಮುಡಾಗೆ ವಾಪಸ್ ನೀಡುವ ನಿರ್ಧಾರ ಮಾಡಿದ್ದರು. ಭಾನುವಾರ ಮುಡಾ ಅಧಿಕಾರಿಗಳಿಗೆ ಪತ್ರ ಬರೆದು, ತಮ್ಮ ನಿರ್ಧಾರವನ್ನು ತಿಳಿಸಿದ್ದರು. ಪಾರ್ವತಿ ಅವರ ಪತ್ರಕ್ಕೆ ಪ್ರತಿಕ್ರಿಯೆ ನೀಡಿದ ಮುಡಾ ಆಯುಕ್ತ ರಘುನಂದನ್, 14 ಸೈಟ್ಗಳು ಮುಡಾಗೆ ವಾಪಸ್ ಆಗಿದ್ದು, ಈಗ 14 ಸೈಟ್ಗಳ ಕ್ರಯಪತ್ರ ರದ್ದಾಗಿದೆ. ಅವರು ಸ್ವಇಚ್ಛೆಯಿಂದ ಬಂದು ಕೊಟ್ಟಿದ್ದಕ್ಕೆ ನಾವು ಸ್ವೀಕರಿಸಿದ್ದೇವೆ. ಇದನ್ನ ಸರ್ಕಾರದ ಗಮನಕ್ಕೆ ತಂದಿದ್ದೇವೆ ಎಂದು ಹೇಳಿದರು.

14 ಸೈಟ್ ಗಳನ್ನು ವಾಪಸ್ ಪಡೆಯುವಂತೆ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ಮುಡಾಗೆ ಪತ್ರ ಬರೆದ ಮರುದಿನವೇ ಮುಡಾ 14 ನಿವೇಶನಗಳ ಖಾತೆಯನ್ನು ರದ್ದುಗೊಳಿಸಲಾಗಿದೆ. ತಮ್ಮಿಂದ ಸಿದ್ದರಾಮಯ್ಯನವರಿಗೆ ಕಳಂಕ ಬರಬಾರದು ಎಂದು ಈ ನಿರ್ಧಾರ ಮಾಡಿದ್ದು, ಪತಿ ಬಳಿಯಾಗಲಿ, ಮಕ್ಕಳ ಜೊತೆಯಾಗಲಿ ಸೈಟು ವಾಪಸ್ ಮಾಡುವ ಬಗ್ಗೆ ಚರ್ಚೆ ಮಾಡಿಲ್ಲ ಎಂದು ಪಾರ್ವತಿಯವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಪತ್ರದಲ್ಲಿ ಏನಿತ್ತು?
ನನ್ನ ಪತಿ ಸಿದ್ದರಾಮಯ್ಯನವರ 40 ವರ್ಷಗಳ ರಾಜಕಾರಣಲ್ಲಿ ಯಾವುದೇ ಕಳಂಕವನ್ನು ಹೊತ್ತುಕೊಂಡವರಲ್ಲ. ನಾನೂ ಕೂಡ ರಾಜಕೀಯವೂ ಸೇರಿದಂತೆ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಂಡು ಅವರಿಗೆ ಮುಜುಗರ ಉಂಟು ಮಾಡದಂತೆ ಬದುಕಿದ್ದೇನೆ. ಆಸ್ತಿ, ಹಣ, ಚಿನ್ನಕ್ಕೆ ಆಸೆ ಪಟ್ಟಿಲ್ಲ, ನನ್ನಿಂದ ಅವರ ರಾಜಕೀಯ ಜೀವನಕ್ಕೆ ಕಳಂಕ ಬರಬಾರದು ಎಂದು ಎಚ್ಚರಿಕೆ ವಹಿಸಿದ್ದೆ. ಆದರೆ ಮುಡಾ ನಿವೇಶನಕ್ಕೆ ಸಂಬಂಧಪಟ್ಟ ಆರೋಪಗಳು ನನ್ನನ್ನು ಘಾಸಿಗೊಳಿಸಿವೆ. ಸಹೋದರ ಅರಿಶಿನಿ ಕುಂಕುಮದ ಸಂದರ್ಭದಲ್ಲಿ ಕೊಟ್ಟ ಜಮೀನಿಗೆ ಬದಲಾಗಿ ಪಡೆದ ನಿವೇಶನಗಳು ಇಷ್ಟು ಸಮಸ್ಯೆಗೆ ಕಾರಣವಾಗುತ್ತದೆ ಎಂದು ಊಹಿಸಿರಲಿಲ್ಲ.
ಪತಿಯ ಗೌರವ, ಘನತೆ, ಮರ್ಯಾದೆ ಮತ್ತು ನೆಮ್ಮದಿಗಿಂದ ಯಾವುದೂ ದೊಡ್ಡದಲ್ಲ. ಈ ನಿವೇಶನಗಳು ನನಗೆ ತೃಣಕ್ಕೆ ಸಮ ವಿವಾದಕ್ಕೆ ಕಾರಣವಾದ ನಿವೇಶನಗಳನ್ನು ವಾಪಸ್ ಮಾಡಲು ನಿರ್ಧರಿಸಿದ್ದೇನೆ. ರಾಜಕೀಯದಿಂದ ದೂರವಿದ್ದು ತಮ್ಮ ಪಾಡಿಗೆ ತಾವಿರುವ ರಾಜಕೀಯ ಕುಟುಂಬದ ಹೆಣ್ಣುಮಕ್ಕಳನ್ನು ರಾಜಕೀಯ ದ್ವೇಷ ಸಾಧನೆಗಾಗಿ ವಿವಾದದ ಕಣಕ್ಕೆ ಎಳೆದು ತರಬೇಡಿ ಎಂದು ಮನವಿ ಮಾಡಿದ್ದರು.












Click it and Unblock the Notifications