ಬಿಜೆಪಿ ಸಿದ್ಧಾಂತ ಇಷ್ಟವಾಗದಿದ್ದರೆ ವಿಶ್ವನಾಥ್ ಪಕ್ಷ ಬಿಟ್ಟು ಹೋಗಲಿ-ಪ್ರತಾಪ್ ಸಿಂಹ
ಮೈಸೂರು, ಡಿಸೆಂಬರ್ 17: ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರಿಗೆ ಬಿಜೆಪಿ ತತ್ವ ,ಸಿದ್ಧಾಂತ ಇಷ್ಟವಾಗದಿದ್ದರೆ ಪಕ್ಷ ಬಿಟ್ಟು ಹೋಗಬಹುದು ಎಂದು ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.
ನಗರದ ಅಶೋಕಪುರಂ ರೈಲ್ವೆ ನಿಲ್ದಾಣದ ಸ್ಟೇಬಲ್ ಲೈನ್ ಕಾಮಗಾರಿ ಪರಿಶೀಲನೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾನ್ಯ ವಿಶ್ವನಾಥ್ ಅವರೇ, ನಿಮಗೆ ಬಿಜೆಪಿ ಪಕ್ಷದ ರೀತಿ ನೀತಿ ಹಾಗೂ ಸಿದ್ಧಾಂತ ಅಪಥ್ಯವಾಗುವುದಾದರೆ, ನೀವ್ಯಾಕೆ ಇನ್ನೂ ನಮ್ಮ ಪಕ್ಷದಲ್ಲಿ ಇದ್ದೀರಾ..? ಎಂದು ಎಂಎಲ್‌ಸಿ ವಿಶ್ವನಾಥ್ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದರು.
ವಿಶ್ವನಾಥ್ ಅವರೇ, ನಮ್ಮದೇ ಬಿಜೆಪಿ ಪಕ್ಷದಲ್ಲಿದ್ದುಕೊಂಡು ಅವರಿವರನ್ನು ಪ್ರತಿದಿನ ಯಾಕೆ ಚುಚ್ಚುತ್ತಿದ್ದೀರಾ..? ಈ ರೀತಿ ಚುಚ್ಚುವುದು, ತಿವಿಯೋದನ್ನು ಮಾಡುವ ಬದಲು ನೀವೇ ಬೇರೆ ಕಡೆ ಹೋಗಬಹುದಲ್ಲವೇ..? ಎಂದು ಕಿಡಿಕಾರಿದರು.
Recommended Video


ವಿಶ್ವನಾಥ್ ಅವರಿಗೆ ಈಗಾಗಲೇ ಜನ ಬೇಸತ್ತು ಎಚ್ಚರಿಕೆ ಸಂದೇಶ ಕೊಟ್ಟಿದ್ದಾರೆ. ಆದರೂ ನೀವು ಬುದ್ದಿ ಕಲಿಯುತ್ತಿಲ್ಲ. ಹಳೆ ಮೈಸೂರು ಭಾಗದಲ್ಲಿ ಶ್ರೀನಿವಾಸ್ ಪ್ರಸಾದ್ ಅವರು ಒಬ್ಬ ಪ್ರಶ್ನಾತೀತ ನಾಯಕ. ಅವರು ಹಿರಿಯ ರಾಜಕೀಯ ಧುರೀಣ. ಅವರ ಬಗ್ಗೆ ನಮಗೆ ಹಾಗೂ ಪಕ್ಷಕ್ಕೆ ತುಂಬಾ ಗೌರವ ಇದೆ. ಸಾರ್ವಜನಿಕ ವಲಯದಲ್ಲಿ ಅವರ ಏನೇ ಮಾತಾಡಿದರೂ ತೂಕವಿರುತ್ತದೆ. ಅವರ ಬಗ್ಗೆ ಯಾರೇ ಏನೇ ಮಾತನಾಡಿದರೂ ನನಗೆ ವೈಯಕ್ತಿಕವಾಗಿ ನೋವಾಗುತ್ತದೆ ಎಂದರು.
ಮಾಜಿ ಸಂಸದ, ಹಾಲಿ ವಿಧಾನಪರಿಷತ್ ಸದಸ್ಯ, ಹಳ್ಳಿಹಕ್ಕಿ ಎಂದೇ ಖ್ಯಾತಿ ಪಡೆದಿರುವ ಎಚ್.ವಿಶ್ವನಾಥ್ ಕಮಲ ಬಿಟ್ಟು 'ಕೈ'ಹಿಡಿಯುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಕಳೆದ ಕೆಲವು ತಿಂಗಳಿನಿಂದ ಸ್ವಪಕ್ಷ ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ಆರೋಪ ಮಾಡುತ್ತಾ ಕಾಂಗ್ರೆಸ್ ಪಕ್ಷದ ಪರ ಮಾತನಾಡುತ್ತಾ ಬರುತ್ತಿರುವುದನ್ನು ಗಮನಿಸಿದರೆ ಎಚ್.ವಿಶ್ವನಾಥ್ ನಡೆ ಬಹುತೇಕರಿಗೆ ಅರ್ಥವಾಗಿ ಹೋಗುತ್ತಿದೆ. ಈಗಾಗಲೇ ವಿಶ್ವನಾಥ್ ಕಾಂಗ್ರೆಸ್ ಮುಖಂಡರನ್ನು ಭೇಟಿಯಾಗಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಅಲ್ಲದೇ ಎಚ್.ವಿಶ್ವನಾಥ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ನನಗೆ ಬಿಜೆಪಿ ಸೇರಲು ಹಣ ಆಮಿಷವೊಡ್ಡಿದ್ದರು. ಈ ವೇಳೆ ಮಾಜಿ ಸಿಎಂ ಯಡಿಯೂರಪ್ಪ, ಸಂಸದ ಶ್ರೀನಿವಾಸಪ್ರಸಾದ್, ರಮೇಶ್ ಜಾರಕಿಹೊಳಿ ಕೂಡ ಇದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ.












Click it and Unblock the Notifications