ನರೇಂದ್ರ ಮೋದಿ ಇಸ್ರೋಗೆ ಕಾಲಿಟ್ಟ ಘಳಿಗೆ ಚೆನ್ನಾಗಿಲ್ಲ ಎಂದ ಕುಮಾರಣ್ಣ
ಮೈಸೂರು, ಸೆಪ್ಟೆಂಬರ್ 12: ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೋ ಕೇಂದ್ರದಲ್ಲಿ ಇದ್ದದ್ದು ವಿಜ್ಞಾನಿಗಳ ಪಾಲಿಗೆ ಕೆಟ್ಟ ಶಕುನ ಆಯಿತು ಎಂದು ಮಾಜಿ ಮುಖ್ಯಮಂತ್ರಿ- ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಎಚ್. ಡಿ. ಕುಮಾರಸ್ವಾಮಿ ಗುರುವಾರ ಮೈಸೂರಿನಲ್ಲಿ ಹೇಳಿದ್ದಾರೆ.
ಕಳೆದ ಜುಲೈನಲ್ಲಿ ಚಂದ್ರಯಾನ ಎರಡರ ಯಾನಕ್ಕೆ ಉಡ್ಡಯನ ಯಶಸ್ವಿ ಆಗಿತ್ತು. ಲ್ಯಾಂಡರ್ ವಿಕ್ರಮ್ ಚಂದ್ರನ ಮೇಲೆ ಇನ್ನೇನು ಇಳಿಯಬೇಕು ಎನ್ನುವಷ್ಟರಲ್ಲಿ ಸಂಪರ್ಕ ಕಳೆದುಕೊಂಡಿತ್ತು.
"ನರೇಂದ್ರ ಮೋದಿ ತಾವೇ ಚಂದ್ರಯಾನ ಎರಡನ್ನು ಅಲ್ಲಿಗೆ ತಲುಪಿಸುತ್ತಿರುವವರ ಥರ ಹಾಗೂ ಆ ಮೂಲಕ ಅಂಥ ಸಂದೇಶ ಕಳುಹಿಸಲು ಬಂದಿದ್ದರು" ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಹತ್ತು ವರ್ಷಗಳಿಂದ ವಿಜ್ಞಾನಿಗಳು ಚಂದ್ರಯಾನಕ್ಕಾಗಿ ಬಹಳ ಶ್ರಮಪಟ್ಟಿದ್ದಾರೆ. ಆದರೆ ತಾವೇ ಇದನ್ನು ಮಾಡುತ್ತಿರುವವರ ಥರ ಬೆಂಗಳೂರಿಗೆ ಪ್ರಧಾನಮಂತ್ರಿ ಬಂದಿದ್ದರು. ನರೇಂದ್ರ ಮೋದಿ ಅವರು ಇಸ್ರೋದಲ್ಲಿ ಕಾಲಿಟ್ಟ ಘಳಿಗೆ ವಿಜ್ಞಾನಿಗಳ ಪಾಲಿಗೆ ಚೆನ್ನಾಗಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.