ಬಿಎಸ್‌ವೈ ವಿರುದ್ಧ ಹೇಳಿಕೆ ನೀಡುತ್ತಿರುವವರ ವಿರುದ್ಧ ಸೋಮಶೇಖರ್ ಗರಂ
ಮೈಸೂರು, ಜುಲೈ 5: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಹೇಳಿಕೆ ನೀಡುತ್ತಿರುವ ಶಾಸಕರ ಬಗ್ಗೆ ಸಚಿವ ಎಸ್.ಟಿ. ಸೋಮಶೇಖರ್ ಫುಲ್ ಗರಂ ಆಗಿದ್ದಾರೆ.
ಮೈಸೂರಿನ ಸುತ್ತೂರು ಮಠದಲ್ಲಿ ಸೋಮವಾರ ಮಾಧ್ಯಮಗಳ ಜತೆ ಮಾತಾಡಿದ ಸಚಿವ ಸೋಮಶೇಖರ್, "ಸಿಎಂ ಯಡಿಯೂರಪ್ಪ ಧೂಳಿಗೂ ಸಮನಾಗಿಲ್ಲದವರು, ಯಡಿಯೂರಪ್ಪರನ್ನು ದಿನ ಬೆಳಗಾದರೆ ಟೀಕಿಸುತ್ತಿದ್ದಾರೆ. ಸೋಕಾಲ್ಡ್ ಲೀಡರ್‌ಗಳು ನಮ್ಮಿಂದ ಸರ್ಕಾರ ಬಂತು, ನಮ್ಮಿಂದ ಸರ್ಕಾರ ಬಂತು ಎಂದು ಪದೇ ಪದೇ ಹೇಳುತ್ತಿದ್ದಾರೆ.''
"ಸ್ವಲ್ಪನಾದರೂ ಕಾಮನ್ ಸೆನ್ಸ್ ಇರಬೇಕು, ಯಾರನ್ನು ನಂಬಿಕೊಂಡು ನಾವು ಸರ್ಕಾರ ಮಾಡಿಲ್ಲ. ಇವರಿಗೆ ಯಡಿಯೂರಪ್ಪ ಬಗ್ಗೆ ಅಸಮಾಧಾನ ಇದ್ದರೆ ಶಾಸಕಾಂಗ ಸಭೆಯಲ್ಲಿ ಮಾತನಾಡಲಿ. ಅದನ್ನು ಹಾದಿ ಬೀದಿಯಲ್ಲಿ ಮಾತನಾಡುವುದು ಸರಿಯಲ್ಲ,'' ಎಂದು ಕಿಡಿಕಾರಿದರು.

"ಅವರು ಯಾರಿಂದಲೂ ಸರ್ಕಾರ ಬಂದಿಲ್ಲ, ಯಡಿಯೂರಪ್ಪ ನಾಯಕತ್ವದಲ್ಲಿ 104 ಜನ ಗೆದ್ದಿದ್ದರು. ಜೆಡಿಎಸ್- ಕಾಂಗ್ರೆಸ್ ಜತೆಗಿದ್ದ ನಾವು 17 ಜನ ಬಿಎಸ್‌ವೈ ಜೊತೆ ಬಂದೆವು, ಈಗ ಸರ್ಕಾರ ಆಗಿದೆ.''
"ಯಡಿಯೂರಪ್ಪರ ನೇತೃತ್ವದಲ್ಲಿ 104 ಜನ ಗೆಲ್ಲದೇ ಇದ್ದಿದ್ದರೆ ಸರ್ಕಾರ ಮಾಡಲು ಸಾಧ್ಯವಿತ್ತಾ? ಅಂತ ಪ್ರಶ್ನಿಸಿದ ಸಚಿವ ಸೋಮಶೇಖರ್, ಇವತ್ತು ಯಡಿಯೂರಪ್ಪನ ಬಗ್ಗೆ ಮಾತನಾಡುವ ಇವರು ಯಾಕೆ ಚುನಾವಣೆಯಲ್ಲಿ ಸೋತರು. ಒಂದು ಬಾರಿ ಸರಿ ಎರಡು ಬಾರಿ ಸರಿ. ಪ್ರತಿ ದಿನವೂ ಇವರದ್ದು ಯಡಿಯೂರಪ್ಪರನ್ನು ಟೀಕೆ ಮಾಡುವುದೇ ಆಗಿದೆ.''
"ಸಿಎಂ ಯಡಿಯೂರಪ್ಪರ ಪರಿಶ್ರಮ, ನಾಯಕತ್ವ ಎಂಥದ್ದು ಅನ್ನುವುದನ್ನು ಅರಿತುಕೊಂಡು ಮಾತನಾಡಲಿ. ಬಿಎಸ್‌ವೈ ಸಮಕ್ಕೆ ಇರುವವರು ಮಾತನಾಡಿದರೆ ಅದಕ್ಕೊಂದು ಬೆಲೆ ಇರುತ್ತದೆ,'' ಎಂದು ಸಚಿವ ಎಸ್.ಟಿ. ಸೋಮಶೇಖರ್ ವ್ಯಂಗ್ಯವಾಡಿದರು.












Click it and Unblock the Notifications