ಮೈಸೂರು; ಮಕ್ಕಳ ಲಸಿಕಾ ಅಭಿಯಾನಕ್ಕೆ ಸಚಿವ ಸೋಮಶೇಖರ್ ಚಾಲನೆ
ಮೈಸೂರು, ಜನವರಿ 03; 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಮೈಸೂರಿನ ಮಹಾರಾಣಿ ಮಹಿಳಾ ಕಾಲೇಜಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಸೋಮವಾರ ಚಾಲನೆ ನೀಡಿದರು.
ಲಸಿಕಾ ಅಭಿಯಾನ ಆರಂಭಿಸಿ ಮಾತನಾಡಿದ ಸಚಿವರು, " ಮೈಸೂರು ಜಿಲ್ಲೆಯಲ್ಲಿ 1.50 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿ ಇಟ್ಟುಕೊಳ್ಳಲಾಗಿದೆ. ಜನವರಿ 5ರಂದು 200 ತಂಡ ಮೈಸೂರಿನ ಗ್ರಾಮಾಂತರ ಭಾಗಗಳಿಗೆ ತೆರಳಿ ಶಾಲೆಗಳಲ್ಲೇ ಮಕ್ಕಳಿಗೆ ಲಸಿಕೆ ನೀಡಲಿದೆ" ಎಂದರು.
"15 ದಿನದಲ್ಲಿ ಜಿಲ್ಲೆಯ ಎಲ್ಲಾ ಮಕ್ಕಳಿಗೆ ಲಸಿಕೆ ನೀಡಲು ಜಿಲ್ಲಾಡಳಿತ, ನಗರ ಪಾಲಿಕೆ ಹಾಗೂ ಆರೋಗ್ಯ ಇಲಾಖೆ ನಿರ್ಧರಿಸಿದೆ. ಮಕ್ಕಳು ಭಯಭೀತರಾಗದೆ ಲಸಿಕೆಯನ್ನು ಪಡೆದುಕೊಳ್ಳಬೇಕು. ಲಸಿಕೆ ನೀಡುವ ಮುನ್ನ ಎಲ್ಲಾ ರೀತಿಯ ಪರೀಕ್ಷೆ ನಡೆಸಲಾಗಿದೆ" ಎಂದರು.

ಶಾಸಕ ಎಲ್. ನಾಗೇಂದ್ರ ಮಾತನಾಡಿ, "ಮೂರನೇ ಅಲೆಯ ಸೂಚನೆ ಇರುವುದರಿಂದ ಕೇಂದ್ರ ಸರಕಾರ ಮಕ್ಕಳಿಗೆ ಲಸಿಕೆ ನೀಡಲು ಮುಂದಾಗಿದೆ. ಇದೊಂದು ಉತ್ತಮ ಕಾರ್ಯವಾಗಿದೆ. ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳಬೇಕು" ಎಂದು ಕರೆ ನೀಡಿದರು.
ಮೈಸೂರು ಜಿಲ್ಲೆಯಲ್ಲಿ ಶೇ 98ರಷ್ಟು ಮಂದಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. ಶೇ 84ರಷ್ಟು ಮಂದಿಗೆ ಎರಡನೇ ಡೋಸ್ ಲಸಿಕೆ ಹಾಕಲಾಗಿದೆ. ನಗರದಲ್ಲಿ 30 ತಂಡ ಲಸಿಕೆ ಹಾಕುವ ಕಾರ್ಯದಲ್ಲಿ ಭಾಗವಹಿಸಲಿದೆ. ಗ್ರಾಮಾಂತರದಲ್ಲಿ 52,940 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಇದ್ದು, ಜನವರಿ 5ರಿಂದ ಪ್ರಾರಂಭಿಸಲಾಗುತ್ತದೆ.
ಮಹಾರಾಣಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ರಕ್ಷಿತ ಮೊದಲು ಲಸಿಕೆ ಹಾಕಿಸಿಕೊಂಡರು. ನಂತರ ಮಾತನಾಡಿ, "ಮೊದಲು ಭಯ ಇತ್ತು. ಎಲ್ಲಿ ಲಸಿಕೆ ತೆಗೆದುಕೊಂಡರೆ ಜ್ವರ ಬರುತ್ತದೆ ಎಂಬ ಆತಂಕ ಇತ್ತು. ಆದರೆ ಮನೆಯಲ್ಲಿ ಎಲ್ಲರೂ ಲಸಿಕೆ ಪಡೆಕೊಂಡರೆ ಒಳ್ಳೆಯದು. ನಾವೆಲ್ಲಾ ಲಸಿಕೆ ತೆಗೆದುಕೊಂಡಿದ್ದೇವೆ ಎಂದು ಧೈರ್ಯ ತುಂಬಿದರು. ಹಾಗಾಗಿ ನಾನು ಲಸಿಕೆ ಪಡೆದುಕೊಂಡೆ. ತುಂಬಾ ಖುಷಿ ಆಗುತ್ತಿದೆ" ಎಂದರು.
ಡಿಎಚ್‌ಒ ಡಾ. ಕೆ. ಎಚ್. ಪ್ರಸಾದ್ ಮಾತನಾಡಿ, "ಮಕ್ಕಳು ಲಸಿಕೆ ಪಡೆದುಕೊಳ್ಳಲು ಕೋವಿನ್ ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಇದಕ್ಕೆ ಅಗತ್ಯವಿರುವ ಆಧಾರ್ ಕಾರ್ಡ್ ತರುವುದು ಕಡ್ಡಾಯವಾಗಿದೆ. ಮೊಬೈಲ್ ತರುವ ಅಗತ್ಯವಿಲ್ಲ" ಎಂದು ಹೇಳಿದರು.
"ಕೋವಿಡ್-19 ಲಸಿಕೆಯ ಬಗ್ಗೆ ಪೋಷಕರು ವದಂತಿಗಳಿಗೆ ಕಿವಿಗೊಡಬಾರದು. 2007ನೇ ಇಸವಿಯಲ್ಲಿ ಜನಿಸಿರುವ ಮಕ್ಕಳು ಮತ್ತು 2007ನೇ ಇಸವಿಗೂ ಮುನ್ನ ಜನಿಸಿರುವ ಮಕ್ಕಳು ಲಸಿಕೆ ಪಡೆಯಬಹುದಾಗಿದೆ. ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಪೋಷಕರು ಸ್ವಯಂ ಪ್ರೇರಿತವಾಗಿ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ, ಲಸಿಕೆ ಪಡೆಯಬೇಕು" ಎಂದು ಮನವಿ ಮಾಡಿದರು.
44 ಲಕ್ಷ ಜನರಿಗೆ ಲಸಿಕೆ; ಮೈಸೂರು ಜಿಲ್ಲೆಯಲ್ಲಿ ಇದುವರೆಗೆ 44.50 ಲಕ್ಷ ಜನರಿಗೆ ಕೋವಿಡ್ ಲಸಿಕಾ ಡೋಸ್‌ಗಳನ್ನು ನೀಡಲಾಗಿದೆ. ಲಸಿಕೆ ನೀಡುವಲ್ಲಿ ರಾಜ್ಯದಲ್ಲಿ ಗಮನಾರ್ಹ ಪ್ರಗತಿಯನ್ನು ಮೈಸೂರಿನಲ್ಲಿ ಸಾಧಿಸಲಾಗಿದೆ.
ಡಿಸೆಂಬರ್ 25ರಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದಂತೆ ಭಾರತದಲ್ಲಿ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯ ಸೋಮವಾರ ಆರಂಭಗೊಂಡಿದೆ. ಕರ್ನಾಟಕದಲ್ಲಿ 31.75 ಲಕ್ಷ ಮಕ್ಕಳು ಲಸಿಕಾಕರಣಕ್ಕೆ ಒಳಪಡಲಿದ್ದಾರೆ.
ರಾಜ್ಯದ ಆರೋಗ್ಯ ಇಲಾಖೆ ಮಾಹಿತಿಯಂತೆ 16 ಲಕ್ಷ ಡೋಸ್ ಕೋವ್ಯಾಕ್ಸಿನ್ ಲಸಿಕೆ ಸಂಗ್ರಹ ರಾಜ್ಯದಲ್ಲಿದೆ. 31.75 ಲಕ್ಷ ಮಕ್ಕಳು ಲಸಿಕೆ ಪಡೆಯಲಿದ್ದಾರೆ. ಮೊದಲ ದಿನವೇ ನಾಲ್ಕು ಸಾವಿರಕ್ಕಿಂತ ಹೆಚ್ಚು ಕೇಂದ್ರಗಳಲ್ಲಿ 6 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಲಸಿಕೆ ನೀಡುವ ಗುರಿ ಇದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಟ್ವೀಟ್ ಮಾಡಿದ್ದು, "ರಾಜ್ಯಾದ್ಯಂತ ಇಂದಿನಿಂದ 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ಅಭಿಯಾನ ಪ್ರಾರಂಭ, ತಪ್ಪದೇ ಲಸಿಕೆ ಪಡೆಯಿರಿ. ಮಾಸ್ಕ್ ಧರಿಸಿ, ಭೌತಿಕ ಅಂತರ ಕಾಯ್ದುಕೊಳ್ಳಿ, ನೈರ್ಮಲ್ಯ ಪಾಲಿಸಿ, ಸುರಕ್ಷತಾ ನಿಯಮಗಳನ್ನು ನಿರ್ಲಕ್ಷಿಸಬೇಡಿ. ಆತಂಕ ಬೇಡ, ಮುನ್ನೆಚ್ಚರಿಕೆ ಇರಲಿ" ಎಂದು ಕರೆ ನೀಡಿದ್ದಾರೆ.












Click it and Unblock the Notifications