ಮುಡಾ ಸಮಿತಿ ರದ್ದು ಮಾಡಲು ಶಿಫಾರಸ್ಸು: ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ
ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಕಾನೂನಾತ್ಮಕವಾಗಿಯೇ ನಿವೇಶನ ಪಡೆದಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಅವರ ಭಾಮೈದ ಮಲ್ಲಿಕಾರ್ಜುನ 2004 ರಲ್ಲಿ ಜಮೀನನ್ನು ಖರೀದಿಸಿ 2010 ರಲ್ಲಿ ತಮ್ಮ ತಂಗಿ ಪಾವರ್ತಿ ಅವರಿಗೆ ದಾನವಾಗಿ ನೀಡಿದ್ದಾರೆ. 1985ರಲ್ಲಿ ಜವರ ಎಂಬುವವರು 100 ರೂಪಾಯಿ ಕೊಟ್ಟು ಆ ಜಮೀನು ಖರೀದಿಸಿದ್ದಾರೆ. ಅಲ್ಲಿಗೆ ಅದು ದಲಿತ ಸಮುದಾಯಕ್ಕೆ ನೀಡಿದ ಗ್ರ್ಯಾಂಟ್ ಲ್ಯಾಂಡ್ ಅಲ್ಲ ಎಂದು ಸಮರ್ಥನೆ ನೀಡಿದರು.

ಮುಡಾದಲ್ಲಿ ಇರುವ ಜನಪ್ರತಿನಿಧಿಗಳು, ಅಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ರದ್ದು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲಹೆ ಕೊಟ್ಟಿದ್ದೇನೆ. ಇದಕ್ಕೆ ಮುಖ್ಯಮಂತ್ರಿಗಳು ಕೂಡ ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಹಗರಣದಲ್ಲಿ ಇರುವ ಭ್ರಷ್ಟರ ಪತ್ತೆಗಾಗಿಯೇ ತನಿಖೆ ನಡೆಯುತ್ತಿದೆ. ನಾವು ಯಾರನ್ನೂ ಬಿಡಲ್ಲ, ಕಾನೂನು ಉಲ್ಲಂಘನೆ ಮಾಡಿ ಸಂಸ್ಥೆಗೆ ನಷ್ಟ ಉಂಟು ಮಾಡಿರುವವರಿಗೆ ಕಠಿಣ ಶಿಕ್ಷೆ ಆಗಬೇಕು. ತನಿಖಾ ವರದಿ ಬಂದ ಮೇಲೆ ಎಲ್ಲರ ಮೇಲೂ ಕ್ರಮ ಕೈಗೊಳ್ಳುತ್ತೇವೆ ಎಂದರು.
ಎಲ್ಲದಕ್ಕೂ ಸಿಬಿಐ ಅಂದ್ರೆ ಹೇಗೆ?
ಮುಡಾ ಬಹುಕೋಟಿ ಹಗರಣ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂಬ ಕೂಗು ಕೇಳಿ ಬರುತ್ತಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಕೋಪಗೊಂಡ ಮಹದೇವಪ್ಪ, ಬಿಜೆಪಿ ಅಧಿಕಾರದಲ್ಲಿದ್ದಾಗ ಎಷ್ಟು ಪ್ರಕರಣವನ್ನು ಸಿಬಿಐಗೆ ಕೊಡಲಾಗಿದೆ. ನಮ್ಮ ನೆಲದ ಪೊಲೀಸರ ಮೇಲೆ ನಂಬಿಕೆ ಯಾಕಿಲ್ಲ? ನಮ್ಮ ಅಧಿಕಾರಿಗಳು ತನಿಖೆ ಮಾಡುವಲ್ಲಿ ಸಮರ್ಥರಿದ್ದಾರೆ. ಒಳ್ಳೆಯವರದ್ದಕ್ಕೂ, ಕಳ್ಳರದ್ದಕ್ಕೂ ಒಂದೇ ಮಾಡಬೇಡಿ ಎಂದು ತಿಳಿಸಿದರು.
ಪಟ್ಟಿ ಬಿಡುಗಡೆ
ಇದುವರೆಗೂ ಮುಡಾದಲ್ಲಿ 50-50 ಅನುಪಾತದಲ್ಲಿ ಬದಲಿ ಭೂಮಿ ಪಡೆದವರ ಪಟ್ಟಿ ಬಿಡುಗಡೆ ಮಾಡುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ಯಾವ ಪಕ್ಷದವರೇ ಇರಲಿ, ಅಧಿಕಾರಿ ಇರಲಿ, ಪ್ರಭಾವಿ ಇರಲಿ. ಅವರ ಪಟ್ಟಿಯನ್ನು ಸಾರ್ವಜನಿಕರಿಗೆ ತಿಳಿಯುವಂತೆ ಜಾಹೀರಾತು ಮೂಲಕ ಬಹಿರಂಗಪಡಿಸಲಾಗುತ್ತದೆ ಎಂದರು.












Click it and Unblock the Notifications