Upendra: ಉಪೇಂದ್ರ ಹೇಳಿಕೆ ಅವರ ಕೊಳಕು ಮನಸ್ಥಿತಿಯನ್ನು ತೋರಿಸುತ್ತದೆ-ಎಚ್.ಸಿ ಮಹದೇವಪ್ಪ
ಮೈಸೂರು, ಆಗಸ್ಟ್ 14: ದಸರಾ ಮಹೋತ್ಸವದಲ್ಲಿ ಮೈಸೂರು-ಚಾಮರಾಜನಗರ-ಹಾಸನ-ಕೊಡಗು-ಚಿಕ್ಕಮಗಳೂರು ಒಳಗೊಂಡಂತೆ ಪ್ರಮುಖ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಟೂರಿಸ್ಟ್ ಸರ್ಕ್ಯೂಟ್ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
ಮೈಸೂರಿನಲ್ಲಿ ನಡೆದ ದಸರಾ ಕಾರ್ಯಕಾರಿ ಸಮಿತಿ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದಸರಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚುನಾಯಿತ ಜನಪ್ರತಿನಿಧಿಗಳು ಭಾಗಿಯಾಗಿ ಹಲವಾರು ಸಲಹೆಗಳನ್ನು ಕೊಟ್ಟಿದ್ದಾರೆ. ಈ ಬಾರಿಯ ದಸರಾ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಆಯೋಜಿಸಲಾಗುವುದು. ಸೆಪ್ಟೆಂಬರ್ 1ಕ್ಕೆ ಗಜಪಯಣ ಸಮಾರಂಭ ನಡೆಯಲಿದೆ. ದಸರಾ ಆನೆಗಳು ಸೆಪ್ಟೆಂಬರ್ 4ಕ್ಕೆ ಅರಮನೆ ಆವರಣ ಪ್ರವೇಶಿಸಲಿವೆ ಎಂದರು.

ದಸರಾ ಆಚರಣೆಗೆ ಉಪ ಸಮಿತಿ ರಚನೆ
ದಸರಾ ಆಚರಣೆಗಾಗಿ 16 ಉಪ ಸಮಿತಿ ರಚಿಸಲಾಗಿದೆ. ಅಗತ್ಯ ಬಿದ್ದರೆ ಮತ್ತೆ ಮೂರು ಸಮಿತಿಗಳನ್ನು ರಚಿಸಲಾಗುತ್ತದೆ. ಈ ಬಾರಿ ಬ್ಯ್ರಾಂಡ್ ಮೈಸೂರು ಸ್ಪರ್ಧೆ ಆಯೋಜಿಸಲಾಗುವುದು. ದಸರಾಗೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುತ್ತದೆ.
ಕಳೆದ ಸಲಕ್ಕಿಂತ ಈ ಬಾರಿ ಅದ್ಧೂರಿಯಾಗಿ ದಸರಾ ಆಚರಣೆ ಮಾಡುತ್ತೇವೆ. ಮೈಸೂರು ದಸರಾ ಮಹೋತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಉಪೇಂದ್ರ ಅವರದು ಕೊಳಕು ಮನಸ್ಥಿತಿ
ನಟ ಉಪೇಂದ್ರ ವಿವಾದಾತ್ಮಕ ಹೇಳಿಕೆ ವಿಚಾರ ಸಂಬಂಧ ಮಾತನಾಡಿದ ಸಚಿವ ಡಾ.ಹೆಚ್.ಸಿ ಮಹದೇವಪ್ಪ, ಉಪೇಂದ್ರ ಹೇಳಿಕೆ ಅವರ ಕೊಳಕು ಮನಸ್ಥಿತಿಯನ್ನು ತೋರಿಸುತ್ತದೆ. ಸಮಾಜಕ್ಕೆ ಮಾರ್ಗದರ್ಶನ ಮಾಡುವವರೇ ಈ ರೀತಿ ಮಾತನಾಡುವುದು ಎಷ್ಟು ಸರಿ. ಶತಮಾನಗಳಿಂದ ಶೋಷಿತವಾಗಿರುವ ಸಮುದಾಯವನ್ನು ಮತ್ತೆ ಮತ್ತೆ ಯಾಕೆ ನೋಯಿಸುತ್ತೀರಾ. ಉಪೇಂದ್ರ ಹೇಳಿಕೆಯಿಂದ ಇಡಿ ಶೋಷಿತ ಸಮಾಜಕ್ಕೆ ನೋವಾಗಿದೆ. ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ. ಈಗಾಗಲೇ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳುತ್ತದೆ ಎಂದರು.
ಏಳು ತಿಂಗಳಿನಲ್ಲಿ ರಾಜ್ಯ ಸರ್ಕಾರ ಬೀಳುತ್ತದೆ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಬಿಜೆಪಿಯವರು ಹಗಲು ಕನಸು ಕಾಣುತ್ತಿದ್ದಾರೆ. ಆನೆ ಹೋಗುತ್ತಿರುತ್ತದೆ, ನರಿ ಅದೇನೋ ಬೀಳುತ್ತದೆ ಎಂದು ಕಾಯುತ್ತಿರುತ್ತದೆ. ಬಿಜೆಪಿಯವರ ಪಾಡು ಈ ರೀತಿಯೇ ಆಗಿದೆ. ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತಿದೆ. ಅದನ್ನು ಕೆಡಿಸಲು ಈ ರೀತಿಯ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಅಪರೇಷನ್ ಕಮಲ ಯಾವುದೂ ಕರ್ನಾಟಕದಲ್ಲಿ ನಡೆಯುವುದಿಲ್ಲ. ಅಂತಹ ಅಪರೇಷನ್ ನಡೆಸಿದ್ದಕ್ಕೆ ಅವರಿಗೆ ಇವತ್ತು ಈ ಸ್ಥಿತಿ ಬಂದಿದೆ. ಇಲ್ಲಿ ಬಿಜೆಪಿಯ ಯಾವ ಆಟವೂ ನಡೆಯುವುದಿಲ್ಲ. ರಾಜ್ಯ ಸರ್ಕಾರ ಸುಭದ್ರವಾಗಿದೆ ಎಂದರು.












Click it and Unblock the Notifications