Makkala Dasara: ಚಿಣ್ಣರ ಖುಷಿ ಹೆಚ್ಚಿಸಿದ ಮಕ್ಕಳ ದಸರಾ
ಮಕ್ಕಳು ತಮ್ಮಲ್ಲಿರುವ ಪ್ರತಿಭೆಗಳನ್ನು ಅನಾವರಣಗೊಳಿಸಲು ದಸರಾ ಮಹೋತ್ಸವದಲ್ಲಿ ಆಯೋಜಿಸಿರುವ ಮಕ್ಕಳ ದಸರಾ ಕಾರ್ಯಕ್ರಮವು ಉತ್ತಮ ವೇದಿಕೆ. ಮಕ್ಕಳ ದಸರಾವನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗಿದೆ. ಮಕ್ಕಳು ಧರ್ಮ, ಜಾತಿ ಮೀರಿದ ನಿರ್ಮಲ ಮನಸ್ಸುಳ್ಳವರು. ಅವರಲ್ಲಿ ಸಾಂಸ್ಕೃತಿಕ ಅಭಿರುಚಿಯನ್ನು ಬೆಳೆಸಲು ಪೋಷಕರು ನೆರವಾಗಬೇಕು ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ತಿಳಿಸಿದರು.
ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ವತಿಯಿಂದ ಕಲಾಮಂದಿರದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಶೈಕ್ಷಣಿಕ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ ಮಾತನಾಡಿ, ಶಿಕ್ಷಕರು ಕೂಡ ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಅವರು ಪ್ರಬುದ್ಧ ನಾಗರಿಕರಾಗಿ ಜೀವಿಸಲು ಅತ್ಯುತ್ತಮ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.

ಮಕ್ಕಳನ್ನು ಅತ್ಯಂತ ಎಚ್ಚರಿಕೆಯಿಂದ ಮುತುವರ್ಜಿವಹಿಸಿ ಬಾಲ್ಯದಲ್ಲಿ ಗುಣಾತ್ಮಕ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ನಡೆವಳಿಕೆಗಳನ್ನು ಕಲಿಸಬೇಕು. ನಮ್ಮ ದೇಶದ ಸಂವಿಧಾನದ ಆಶಯದಂತೆ ಮಕ್ಕಳು ಉತ್ತಮ ಪ್ರಜೆಗಳಾಗಬೇಕು ಎಂದರು.
ಯೋಗ ಸರಪಳಿಯಲ್ಲಿ 4000 ಮಂದಿ ಭಾಗಿ
ಮೈಸೂರು ದಸರಾದ ಐದನೇ ದಿನವಾದ ಸೋಮವಾರ ಯೋಗ ದಸರಾ ಉಪ ಸಮಿತಿ ವತಿಯಿಂದ ಅರಮನೆಯ ಆವರಣದಲ್ಲಿ "ಯೋಗ ಸರಪಳಿ - ಪ್ರಜಾಪ್ರಭುತ್ವಕ್ಕಾಗಿ ಯೋಗ" ಕಾರ್ಯಕ್ರಮ ಆಯೋಜಿಸಲಾಗಿತ್ತು. ಯೋಗ ಸರಪಳಿಯಲ್ಲಿ ಯೋಗಪಟುಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೇರಿದಂತೆ ಮೈಸೂರಿನ ವಿವಿಧೆಡೆಯಿಂದ ಆಗಮಿಸಿದ್ದ, ಸುಮಾರು 4000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದು, ಬೆಳಗ್ಗೆ 6 ಗಂಟೆಗೆ ಅರಮನೆಯ ಮೈದಾನ ಸಾವಿರಾರು ಜನರಿಂದ ತುಂಬಿತ್ತು. ಈ ದೃಶ್ಯವು ಯೋಗದ ತವರೂರೆನಿಸಿಕೊಳ್ಳುವ ಮೈಸೂರಿನ ಸೊಬಗನ್ನು ಹೆಚ್ಚಿಸಿತು.

ಸಂವಿಧಾನ ಪೀಠಿಕೆ ಬೋಧನೆ, ಪ್ರಜಾಪ್ರಭುತ್ವದ ಆಶಯಗಳನ್ನು ಸಾರಿದ ಯೋಗ ಗುಚ್ಚ ಪ್ರದರ್ಶನ, ಯೋಗ ಗುಚ್ಚ ನೃತ್ಯ, ವಿವಿಧ ಶಾಲೆಯ ವಿದ್ಯಾರ್ಥಿಗಳಿಂದ ಯೋಗ ನೃತ್ಯ ಪ್ರದರ್ಶನ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ನೆರದಿದ್ದಂತಹ ಜನರು ಕಣ್ತುಂಬಿಕೊoಡರು.
ಯೋಗಪಟುಗಳಿಂದ ಯೋಗ ಸರಪಳಿಯ ನಿರ್ಮಾಣ, ಸೂರ್ಯ ನಮಸ್ಕಾರ, ವಜ್ರಾಸನ, ತ್ರಿಕೋನಾಸನ, ಸಿದ್ಧಾಸನ, ಅರ್ಧಚಕ್ರಾಸನ ಸೇರಿದಂತೆ ಯೋಗದ ವಿವಿಧ ಭಂಗಿಗಳನ್ನು ಪ್ರದರ್ಶಿಸಿದರು.












Click it and Unblock the Notifications