ಮೈಸೂರಿನಲ್ಲಿ ಸಂಭ್ರಮದ ಸಂಕ್ರಾಂತಿ: ರಾಸುಗಳ ಕಿಚ್ಚು ಹಾಯಿಸಿದ ರೈತರು
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಂಕ್ರಾಂತಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ನಗರದ ಸಿದ್ದಲಿಂಗಪುರದಲ್ಲಿ ನಡೆದ ರೈತರ ರಾಸುಗಳ ಕಿಚ್ಚು ಹಾಯಿಸುವುದನ್ನು ಸಾರ್ವಜನಿಕರು ಕಾತರದಿಂದ ಕಣ್ತುಂಬಿಕೊಂಡರು.
ಈ ಬಾರಿ ಸಂಕ್ರಾಂತಿ ಹಬ್ಬ ಸೋಮವಾರ ಬಂದಿರುವ ಕಾರಣ ಒಂದು ದಿನ ಮುಂಚಿವಾಗಿಯೇ ರಾಸುಗಳಿಗೆ ಕಿಚ್ಚು ಹಾಯಿಸಲಾಯಿತು. ಉರಿಯೋ ಬೆಂಕಿಯ ಉಂಡೆಯನ್ನೇ ಸೀಳಿ ಬಂದ ರಾಸುಗಳು, ಮೈನವಿರೇಳಿಸೋ ದೃಶ್ಯಗಳನ್ನು ಜನರು ಕಣ್ಣುಂಬಿಕೊಂಡರು.

ರಾಸುಗಳ ಜೋಡಿ ಒಂದಕ್ಕಿಂತಲೂ ಮತ್ತೊಂದು ಕಣ್ಮನ ಸೆಳೆಯುತ್ತಿದ್ದವು. ಸಿದ್ದಲಿಂಗಪುರದಲ್ಲಿ ನಡೆ ಯುವ ಕಿಚ್ಚು ಹಾಯಿಸುವ ಪ್ರಕ್ರಿಯೆಯನ್ನು ಕಣ್ತುಂಬಿ ಕೊಳ್ಳಲು ಬೆಂಗಳೂರು ಸೇರಿದಂತೆ ವಿವಿಧೆಡೆ ಯಿಂದ ಪ್ರವಾಸಿಗರು, ಛಾಯಾಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ಸಂಭ್ರಮದ ಸಂಕ್ರಾಂತಿ
ಸೋಮವಾರ ಬೆಳಗ್ಗೆಯೇ ಎಳ್ಳು-ಬೆಲ್ಲ ಬೀರಲು ಯುವತಿಯರು, ಮಹಿಳೆಯರು ಹಾಗೂ ಮಕ್ಕಳು ಸಾಮಗ್ರಿ ಹಾಗೂ ಹೊಸ ಉಡುಪುಗಳ ಖರೀದಿಯಲ್ಲಿ ನಿರತರಾಗಿದ್ದರೆ, ಗ್ರಾಮಾಂತರ ಪ್ರದೇಶದಲ್ಲಿ ದನಗಳಿಗೆ ಕಿಚ್ಚು ಹಾಯಿಸಲು ಸಂಭ್ರಮದ ಸಿದ್ಧತೆ ನಡೆದಿದೆ.
ನಗರದ ದೇವರಾಜ ಮಾರುಕಟ್ಟೆಯಲ್ಲಿ ಸಂಕ್ರಾಂತಿ ಖರೀದಿಗಾಗಿ ಜನ ಸಮೂಹವೇ ಸೇರಿದ್ದು, ಹಬ್ಬಕ್ಕೆ ಬೇಕಾದ ಸಾಮಾನು ಖರೀದಿ ಮಾಡಿ, ಮನೆಗಳಿಗೆ ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿತ್ತಯ. ಈ ಬಾರಿ ಶಕ್ತಿ ಯೋಜನೆಯಡಿ ಉಚಿತ ಬಸ್ ಸೌಲಭ್ಯವಿರುವುದರಿಂದ ಅತಿ ಹೆಚ್ಚು ಮಹಿಳೆಯರು ಹಬ್ಬದ ಖರೀದಿಗಾಗಿ ಮಾರುಕಟ್ಟೆಗೆ ಬರುತ್ತಿರುವುದು ವಿಶೇಷವಾಗಿದೆ.
ಸೋಮವಾರ ಬೆಳಗ್ಗೆಯಿಂದ ಸಂಜೆವರೆಗೂ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಲಿದ್ದು, ಭಕ್ತರು ದೇವರ ದರ್ಶನ ಪಡೆದು ಪರಸ್ಪರ ಸಂಕ್ರಾಂತಿ ಶುಭಾಶಯ ವಿನಿಮಯ ಮಾಡಿಕೊಳ್ಳಲಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ಸಂಜೆ ಸೂರ್ಯಾಸ್ತವಾಗುತ್ತಿದ್ದಂತೆಯೇ ರಸ್ತೆ, ಸರ್ಕಲ್ ಗಳಲ್ಲಿ ಹುಲ್ಲು, ಹುಲ್ಲಿಗೆ ಬೆಂಕಿ ಹಾಕಿ ದನಕರುಗಳ ಕಿಚ್ಚು ಹಾಯಿಸಿ ರೈತರು ಸಂಭ್ರಮಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.












Click it and Unblock the Notifications