ಪಾಸ್‌ಪೋರ್ಟ್, ಮೊಬೈಲ್ ಕಳೆದರೆ ಆನ್‌ಲೈನ್‌ನಲ್ಲಿ ದೂರು ಕೊಡಿ
ಮೈಸೂರು, ಜೂ. 12 : ಪಾಸ್ ಪೋರ್ಟ್, ಮೊಬೈಲ್, ಲ್ಯಾಪ್ ಟಾಪ್ ಕಳೆದು ಹೋದರೆ ಇನ್ನು ಮುಂದೆ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡಬೇಕಾಗಿಲ್ಲ. ಆನ್‌ಲೈನ್ ಮೂಲಕ ದೂರು ಸಲ್ಲಿಸಿ ಸ್ವೀಕೃತಿ ಪತ್ರವನ್ನು ಪಡೆಯುವ ವ್ಯವಸ್ಥೆಯನ್ನು ಮೈಸೂರು ಪೊಲೀಸರು ಜಾರಿಗೆ ತಂದಿದ್ದಾರೆ.
ಮೈಸೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಈ ನೂತನ ಸೇವೆಗೆ ಚಾಲನೆ ನೀಡಿದ್ದಾರೆ. ಮೈಸೂರಿನ ಜನರು www.mysorecitypolice.gov.in. ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಕೆಳೆದುಕೊಂಡ ವಸ್ತುವಿನ ಕುರಿತು ದೂರು ನೀಡಬಹುದಾಗಿದೆ. [ಪೊಲೀಸರಿಗೆ ವಾಟ್ಸಪ್ ಮೂಲಕ ದೂರು ಕೊಡಿ]

ಆನ್‌ಲೈನ್ ಮೂಲಕ ಮೊಬೈಲ್, ಲ್ಯಾಪ್‌ಟಾಪ್, ಪಾಸ್‌ಪೋರ್ಟ್ ಸೇರಿದಂತೆ ಎಲೆಕ್ಟ್ರಾನಿಕ್ ಮತ್ತು ದಾಖಲಾತಿಗಳನ್ನು ಕಳೆದುಕೊಂಡ ಬಗ್ಗೆ ಮಾತ್ರ ದೂರು ನೀಡಬಹುದಾಗಿದೆ. ಅಪರಾಧ ಪ್ರಕರಣಗಳ ಬಗ್ಗೆ ದೂರು ನೀಡಲು ಸಾಧ್ಯವಿಲ್ಲ ಎಂದು ಪೊಲೀಸ್ ಆಯುಕ್ತರು ಸ್ಪಷ್ಷನೆ ನೀಡಿದ್ದಾರೆ. [ಟ್ವಿಟ್ಟರಿಗೆ ಬಂದ ಮೈಸೂರು ಪೊಲೀಸರು]
ಮೈಸೂರು ನಗರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಅವರಿಗೆ ಸಹಾಯಕವಾಗಲಿ ಎಂದು ಈ ಆನ್‌ಲೈನ್ ಸೇವೆಯನ್ನು ಆರಂಭಿಸಲಾಗಿದೆ. ದೂರು ದಾಖಲು ಮಾಡಿದ ನಂತರ ಜನರಿಗೆ ಸ್ವೀಕೃತಿ ಪತ್ರ ದೊರೆಯಲಿದ್ದು, ಅದನ್ನು ಡೌಲ್‌ಲೋಡ್ ಮಾಡಿಕೊಳ್ಳಬೇಕು ಎಂದು ದಯಾನಂದ ಅವರು ತಿಳಿಸಿದ್ದಾರೆ. [ದೂರು ಕೊಡಲು ಇಲ್ಲಿ ಕ್ಲಿಕ್ ಮಾಡಿ]
ವಾಟ್ಸಪ್ ಸೇವೆ : ಅಪರಾಧ ಪ್ರಕರಣಗಳ ಬಗ್ಗೆ ವಾಟ್ಸಪ್ ಮೂಲಕ ದೂರು ನೀಡುವ ಸೇವೆಗೆ ಮೈಸೂರು ಪೊಲೀಸರು ಗುರುವಾರ ಚಾಲನೆ ನೀಡಿದ್ದಾರೆ. 8861786385 ನಂಬರ್ ಮೂಲಕ ಸಾರ್ವಜನಿಕರು ಪೊಲೀಸರಿಗೆ ನೇರವಾಗಿ ದೂರನ್ನು ನೀಡಬಹುದಾಗಿದೆ.












Click it and Unblock the Notifications