ಫಲಿತಾಂಶ ಬಳಿಕ ಸಿದ್ದು ಸಂಪುಟಕ್ಕೆ10 ಮಂದಿ ಹೊಸಬರು
ಮೈಸೂರು, ಮಾರ್ಚ್ 24- ಕಳೆದ ವಾರ 'ಕಾಂಗ್ರೆಸ್ ಪರ ಅಂಡರ್ ಕರೆಂಟ್ ಇದೆ. ಗೆಲುವು ಕಾಂಗ್ರೆಸ್ ಪಕ್ಷದ್ದೇ ಎಂದು ತುಂಬು ವಿಶ್ವಾಸ ವ್ಯಕ್ತಪಡಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಸಭಾ ಚುನಾವಣೆ ಮುಗಿದ ನಂತರವೂ ತಾವೇ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರಿಯುವುದು ನಿಶ್ಚಿತ ಎಂದು ಮೈಸೂರುನಲ್ಲಿ ಹೇಳಿದ್ದಾರೆ.
ಮೈಸೂರು ಜಿಲ್ಲೆಯವರೇ ಸಿಎಂ ಸಿದ್ದರಾಮಯ್ಯ ಅವರು ಇಂದು ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಈಗಲೂ ನಾನೇ ಮುಖ್ಯಮಂತ್ರಿ, ಲೋಕಸಭಾ ಚುನಾವಣೆ ನಂತರವೂ ನಾನೇ ಮುಖ್ಯಮಂತ್ರಿ. ಐದು ವರ್ಷಗಳ ಕಾಲವೂ ನಾನೇ ಸಿಎಂ. ಯಾವ ಬದಲಾವಣೆಯೂ ಆಗೋದಿಲ್ಲ' ಎಂದು ಖಚಿತ ದನಿಯಲ್ಲಿ ಹೇಳಿದರು.
ಇದೇ ವೇಳೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ವಿರುದ್ಧ ಹರಿಹಾಯ್ದ ಅವರು 'ಹರಹರ ಮೋದಿ ಅಲ್ಲ. ಬದಲಾಗಿ ನರಮೇಧ ನಡೆಸಿದ ನರಹರ, ಕೋರ್ಟ್ ಅವರಿಗೆ ಕ್ಲಿನ್ ಚಿಟ್ ನೀಡಿದರೂ ಅವರು ಮುಗ್ಧರಲ್ಲ' ಎಂದು ವಾಗ್ದಾಳಿ ಮಾಡಿದರು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
'ಕಾರ್ಪೋರೇಟ್ ಸಂಸ್ಥೆಗಳಿಂದ ಅಕ್ರಮ ಹಣ ಸಂಪಾದನೆ ಮಾಡಿ ಅದನ್ನು ರಾಜಕೀಯಕ್ಕೆ ಬಳಕೆ ಮಾಡುವ ಬುದ್ಧಿ ಮತ್ತು ಶಕ್ತಿ ಪಡೆದುಕೊಂಡಿರುವುದಕ್ಕಾಗಿ ಮೋದಿಯನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದೆ. ಅದನ್ನು ಬಿಟ್ಟರೆ ಮೋದಿಗೆ ಬೇರೆ ಯಾವುದೇ ಅರ್ಹತೆ ಇಲ್ಲ'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

ಕುರ್ಚಿ ಸುಭದ್ರಪಡಿಸಿಕೊಳ್ಳಲು ಸಿದ್ದು ಮಾಸ್ಟರ್ ಪ್ಲಾನ್
ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣೆ ನಂತರವೂ ತಾವೇ ಸಿಎಂ ಎಂದು ಹೇಳಿರುವ ಹೊತ್ತಿನಲ್ಲೇ ಅತ್ತ ಬೆಂಗಳೂರಿನಿಂದ ಬೇರೆಯದೇ ಸುದ್ದಿ ಕೇಳಿಬಂದಿದೆ. ಲೋಕಸಭೆ ಚುನಾವಣೆ ನಂತರ ಸಿದ್ದರಾಮಯ್ಯ ಅವರ ಸೀಟು ಅಲುಗಾಡಲಿದೆ ಎಂದು ಪ್ರತಿಪಕ್ಷಗಳು ಲೆಕ್ಕಾಚಾರ ಹಾಕುತ್ತಿವೆ. ಆದರೆ ಸಿದ್ದರಾಮಯ್ಯ ಅವರು ತಮ್ಮ ಸಂಪುಟವನ್ನು ಮತ್ತಷ್ಟು ಭದ್ರ ಪಡಿಸಿಕೊಂಡು, ಕುರ್ಚಿಯನ್ನೂ ಗಟ್ಟಿಗೊಳಿಸಿಕೊಳ್ಳಲು ಮಾಸ್ಟರ್ ಪ್ಲಾನ್ ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಸಂಪುಟ ವಿಸ್ತರಣೆ?:
ಲೋಕಸಭೆ ಚುನಾವಣೆಯನ್ನು ಪ್ರಮುಖ ಮಾನದಂಡವಾಗಿಟ್ಟುಕೊಂಡು ಸಂಪುಟ ಪುನಾರಚನೆ ಕಸರತ್ತು ನಡೆಯಲಿದೆ. ಲೋಕ ಚುನಾವಣೆ ಮುಗಿಯುತ್ತಿದ್ದಂತೆ ಸಚಿವ ಸಂಪುಟದಲ್ಲಿ ಭಾರೀ ಬದಲಾವಣೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ತಯಾರಿ ನಡೆಸಿದ್ದಾರೆ. ಅನೇಕ ಸಚಿವರು ತನ್ನ ಸ್ಥಾನಗಳನ್ನು ಕಳೆದುಕೊಳ್ಳಲಿದ್ದಾರೆ. ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಸಚಿವ ಸಂಪುಟ ವಿಸ್ತರಣೆಗೆ ಮುಖ್ಯಮಂತ್ರಿ ಕೈ ಹಾಕಲಿದ್ದಾರೆ. ಯುವ ಉತ್ಸಾಹಿ ಯುವಕರಿಗೆ ಆದ್ಯತೆ ನೀಡುವುದರ ಜತೆಗೆ, ಅನುಭವಿಗಳಿಗೆ ಮತ್ತು ಪಕ್ಷ ನಿಷ್ಠರಿಗೂ ಅವಕಾಶ ದೊರೆಯಲಿದೆ ಎಂದು ತಿಳಿದುಬಂದಿದೆ.

ಸಂಪುಟಕ್ಕೆ ಚುನಾವಣೆ ಫಲಿತಾಂಶವೇ ಮಾನದಂಡ
ಹಾಗಾಗಿ, ಆಯಾ ಜಿಲ್ಲೆಗಳ ಸಚಿವರುಗಳು ತಮ್ಮ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡುವುದು ಅನಿವಾರ್ಯವಾಗಿದೆ. ಈಗಾಗಲೇ ಗೆದ್ದೇ ಗೆಲ್ಲುತೇವೆ ಎಂದು ಲೆಕ್ಕಾಚಾರ ಹಾಕಿರುವ ಕ್ಷೇತ್ರಗಳಲ್ಲಿ ಒಂದು ವೇಳೆ ಕಾಂಗ್ರೆಸ್ ಅಭ್ಯರ್ಥಿ ಸೋಲು ಕಂಡರೇ ಅದಕ್ಕೆ ಜಿಲ್ಲಾ ಸಚಿವರನ್ನೇ ನೇರ ಹೊಣೆ ಮಾಡಲಾಗುವುದು ಎಂದು ತಿಳಿಸಲಾಗಿದೆ. ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ಕೇಳಲು ಹಾಗೂ ನಿಗಮ-ಮಂಡಳಿಗಳಲ್ಲಿ ಅವಕಾಶ ಗಿಟ್ಟಿಸಲು ಲೋಕಸಭೆ ಚುನಾವಣೆಯಲ್ಲಿ ಮಾಡುವ ಕೆಲಸವೇ ಮಾನದಂಡವಾಗಲಿದೆ.

ಫಲಿತಾಂಶದ ನಂತರ ಸಂಪುಟಕ್ಕೆ10 ಮಂದಿ ಹೊಸಬರು
ಚುನಾವಣೆ ಪೂರ್ವ ಕಾಲಮಾನದಲ್ಲಿ ಸುಮಾರು 6 ಮಂದಿ ಸಚಿವರಿಗೆ ಕೊಕ್ ನೀಡಲು ಲೆಕ್ಕಚಾರ ಹಾಕಲಾಗಿದೆ. ಬಾಕಿ ಇರುವ ಸ್ಥಾನಗಳೂ ಸೇರಿ ಒಟ್ಟು 10 ಮಂದಿ ಹೊಸಬರಿಗೆ ಅವಕಾಶ ನೀಡಲು ಚಿಂತನೆ ನಡೆದಿದೆ. ನಿರೀಕ್ಷೆಯಂತೆ ರಾಜ್ಯದಲ್ಲಿ 18 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೂಪರ್ ಪವರ್ ಬರಲಿದ್ದು ಹೈಕಮಾಂಡಿನ ಕೃಪಾಕಟಾಕ್ಷ ಇನ್ನಷ್ಟು ಹೆಚ್ಚಾಗಲಿದೆ.


Click it and Unblock the Notifications
