ಲೋಕಸಭೆ ಚುನಾವಣೆ: ಮೈಸೂರು ಜಿಲ್ಲೆಯಲ್ಲಿ 26 ಲಕ್ಷ ಮತದಾರರು
ಮೈಸೂರು: ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ, ಹೆಸರು ಸೇರ್ಪಡೆ, ತಿದ್ದುಪಡಿ ಮುಕ್ತಾಯಗೊಂಡಿದ್ದು, ಅಂತಿಮ ಮತದಾರರ ಕರಡು ಪಟ್ಟಿ ಪ್ರಕಟಗೊಂಡಿದೆ. ಮೈಸೂರು ಜಿಲ್ಲೆಯಲ್ಲಿ ಒಟ್ಟು 26,99,835 ಮತದಾರರಿದ್ದಾರೆ.
ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು, ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಿಂದ ಪುರುಷರು 13,31,772, & 13,67,843 ಮತ್ತು ತೃತೀಯ ಲಿಂಗಿಗಳು 220 ಮತದಾರರಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಚುನಾವಣೆ ಸಿದ್ಧತೆ ಆರಂಭ
ಲೋಕಸಭಾ ಚುನಾವಣೆಯ ಸಾರ್ವತ್ರಿಕ ಚುನಾವಣೆಯ ಪೂರ್ವ ಸಿದ್ಧತೆ ಕಾರ್ಯಗಳು ಚಾಲ್ತಿಯಲ್ಲಿದ್ದು, ಚುನಾವಣೆ ಸಂಬಂಧ ಈಗಾಗಲೇ ನೇಮಕ ಮಾಡಲಾಗಿರುವ ಸೆಕ್ಟರ್ ಅಧಿಕಾರಿಗಳು, ಫೈಯಿಂಗ್ ಸ್ಕ್ವಾಡ್ ತಂಡ, ಸ್ಟಾಟಿಕ್ ಸರ್ವೆಯಲನ್ಸ್ ತಂಡ, ವೀಡಿಯೊ ಸರ್ವೆಯಲನ್ಸ್ ತಂಡಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
"ಜಿಲ್ಲೆಯಲ್ಲಿ 16726 ಮತದಾರರು ಮೃತರಾಗಿದ್ದಾರೆ. 19482 ಮಂದಿ ಸ್ಥಳಾಂತರಗೊಂಡಿದ್ದಾರೆ, 6495 ಮತದಾರರು ಪುನರಾವರ್ತನೆ ಇದ್ದು, ಜಿಲ್ಲೆಯಲ್ಲಿ ಒಟ್ಟು 42,704 ಮತದಾರರನ್ನು ಪಟ್ಟಿಯಿಂದ ಕೈ ಬಿಡಲಾಗಿದೆ" ಎಂದು ವಿವರಿಸಿದರು.
50 ಸಾವಿರ ಯುವ ಮತದಾರರು
50696 ಯುವ ಮತದಾರರು ನೋಂದಾಯಿಸಿಕೊಂಡಿದ್ದಾರೆ. 27159 ಪುರುಷರು, 23770 ಮಹಿಳೆಯರು, ನಾಲ್ವರು ತೃತೀಯ ಲಿಂಗಿ ಮತದಾರರಿದ್ದಾರೆ. ಕರಡು ಮತದಾರರ ಪಟ್ಟಿಯಲ್ಲಿ 34070 ಮತದಾರರಿದ್ದರು. ಅಂತಿಮ ಮತದಾರರ ಪಟ್ಟಿಯಲ್ಲಿ 16899 ಯುವ ಮತದಾರರ ಏರಿಕೆಯಾಗಿದೆ ಎಂದರು.
ಸಹಾಯವಾಣಿ ಸ್ಥಾಪನೆ:
ಹೆಸರು ಸೇರ್ಪಡೆ ಖಾತ್ರಿಪಡಿಸಿಕೊಳ್ಳಲು ಸಹಾಯವಾಣಿ 1077, ಮತದಾರರ ಪಟ್ಟಿಯ ಪರಿಷ್ಕರಣೆ ಸಹಾಯವಾಣಿ 1950 ಸಂಪರ್ಕಿಸುವಂತೆ ಮನವಿ ಮಾಡಿದರು. ಮತದಾನದ ಪ್ರಮಾಣ ಹೆಚ್ಚಿಸಲು ಜ. 25ರಂದು ರಾಷ್ಟ್ರೀಯ ಮತದಾರರ ದಿನಾಚರಣೆ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಅಂದು ಯುವ ಮತದಾರರಿಗೆ ಗುರುತಿನ ಚೀಟಿ ವಿತರಣೆ, ಉತ್ತಮವಾಗಿ ಕಾರ್ಯನಿರ್ವಹಿಸಿದ ಬಿಎಲ್‌ಗಳನ್ನು ಅಭಿನಂದಿಸುವುದಾಗಿ ಹೇಳಿದರು.
ಜಿಲ್ಲೆಯಲ್ಲಿ 31631 ವಿಶೇಷಚೇತನ ಮತದಾರರಿದ್ದಾರೆ. 1148 ಸೇವಾ ಮತದಾರರು, ಗ್ರಾಪಂ ಅಧ್ಯಕ್ಷರು, ಜನಪ್ರತಿನಿಧಿಗಳ ಸೇರಿ 2862 ಗಣ್ಯ ಮತದಾರರನ್ನು ಪಟ್ಟಿ ಮಾಡಲಾಗಿದೆ ಎಂದು ತಿಳಿಸಿದರು.
10 ಮತಗಟ್ಟೆ ಹೆಚ್ಚಳ
ಕಳೆದ ಚುನಾವಣೆಯಲ್ಲಿ 2905 ಮತಗಟ್ಟೆಗಳಿದ್ದವು. 10 ಮತಗಟ್ಟೆಗಳನ್ನು ಹೆಚ್ಚಳ ಮಾಡಲಾಗಿದೆ. ಮತದಾರರಿಗೆ ಗೊಂದಲವಾಗದಂತೆ ಮತಗಟ್ಟೆ ಕೇಂದ್ರದಲ್ಲಿ ಹೆಸರು, ಮತದಾರರ ಸಂಖ್ಯೆ ನಮೂದಿಸಲಾಗುವುದು ಎಂದು ತಿಳಿಸಿದರು.












Click it and Unblock the Notifications