Mysuru: ಮೈಸೂರಿನ ಪಾರಂಪರಿಕ ಲಲಿತ ಮಹಲ್ ಪ್ಯಾಲೇಸ್ ಹೋಟೆಲ್ ನವೀಕರಣ
ಮೈಸೂರು: ಮೈಸೂರಿನ ಪಾರಂಪರಿಕ ಕಟ್ಟಡಗಳಲ್ಲಿ ಒಂದಾದ ಲಲಿತ ಮಹಲ್ ಪ್ಯಾಲೇಸ್ ಹೋಟೆಲ್‌ನ ಸಂರಕ್ಷಣೆಗೆ ಕೊನೆಗೂ ಕಾಲ ಕೂಡಿ ಬಂದಿದೆ.
ರಾಜ್ಯ ಸರ್ಕಾರದ ಜಂಗಲ್ ಲಾಡ್ಜಸ್ ಆ್ಯಂಡ್ ರೆಸಾರ್ಟ್ ಸುಪರ್ದಿಯಲ್ಲಿರುವ ಲಲಿತ ಮಹಲ್ ಹೋಟೆಲ್ ಕಳೆದ 10 ವರ್ಷಗಳಿಂದ ಸೂಕ್ತ ನಿರ್ವಹಣೆಯಿಲ್ಲದೇ ಶಿಥಿಲಾವಸ್ಥೆ ತಲುಪಿತ್ತು. ಇದೀಗ ಮೈಸೂರಿನ ಪಾರಂಪರಿಕ ಲಲಿತಮಹಲ್ ಪ್ಯಾಲೇಸ್ ಹೋಟೆಲ್ ಕಟ್ಟಡದ ನವೀಕರಣಕ್ಕೆ ಶೀಘ್ರವೇ ಟೆಂಡರ್ ಕರೆಯಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.

ಶತಮಾನೋತ್ಸವದ ಸಂಭ್ರಮ
ಲಲಿತ ಮಹಲ್ ಪ್ಯಾಲೇಸ್ ಹೋಟೆಲ್‌ಗೆ ಇದೀಗ ಶತಮಾನದ ಸಂಭ್ರಮ. ಮೈಸೂರು ರಾಜ ಮನೆತನದ ಪಾರಂಪರಿಕತೆಯ ಕುರುಹಾಗಿ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಲಲಿತ ಮಹಲ್ ಪ್ಯಾಲೇಸ್ ಕಟ್ಟಲಾಗಿತ್ತು. ಕಟ್ಟಡದ ಸಂರಕ್ಷಣೆಗೆ ಸಮಗ್ರ ಯೋಜನಾ ವರದಿ ಈ ಹಿಂದೆಯೇ ಸಿದ್ದವಾಗಿತ್ತು.
ಆದರೆ, ಕೋವಿಡ್ ಕಾರಣದಿಂದ ನವೀಕರಣ ಕೆಲಸ ನನೆಗುದಿಗೆ ಬಿದ್ದಿತ್ತು. ಕಳೆದ 2023ರ ನವೆಂಬರ್‌ನಲ್ಲಿ ಜೆಎಲ್‌ಆರ್‌ನ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್, ಲಲಿತ ಮಹಲ್ ನವೀಕರಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಕೋರಿದ ಹಿನ್ನೆಲೆಯಲ್ಲಿ ಲಲಿತ ಮಹಲ್ ಪಾರಂಪರಿಕ ಕಟ್ಟಡದ ಪುನರುಜ್ಜೀವನ ಮತ್ತು ಸಂರಕ್ಷಣೆಗಾಗಿ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪಾರಂಪರಿಕ ಇಲಾಖೆಯು 38 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ದಪಡಿಸುತ್ತಿದೆ.
ಸಚಿವರು ಹೇಳಿದ್ದೇನು?
ಜಂಗಲ್ ಲಾಡ್ಡಸ್ ಮತ್ತು ರೆಸಾರ್ಟ್ ಸುಪರ್ದಿಯಲ್ಲಿರುವ ಲಲಿತ ಮಹಲ್ ಪ್ಯಾಲೇಸ್ ಕಟ್ಟಡ ಪಾರಂಪರಿಕ ಕಟ್ಟಡವಾಗಿದ್ದು, ನಿರ್ವಹಣೆ ಕೊರತೆಯಿಂದಾಗಿ ಶಿಥಿಲಾವಸ್ಥೆಗೊಂಡಿದೆ. ಈ ಹಿನ್ನೆ ಲೆಯಲ್ಲಿ ನವೀಕರಣ ಸಂಬಂಧ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವಂತೆ ಪುರಾತತ್ವ ಇಲಾಖೆಗೆ ನಿರ್ದೇಶನ ನೀಡಲಾಗಿತ್ತು. ಇಲಾಖೆಯ ಪಾರಂಪರಿಕ ಸಮಿತಿ ಕಟ್ಟಡದ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ವರದಿಯನ್ನು ಇಲಾಖೆಗೆ ನೀಡಿದ್ದು, ಇಲಾಖೆ ಸರಕಾರಕ್ಕೆ ಡಿಪಿಆರ್ ಸಲ್ಲಿಸಿದೆ. ಶೀಘ್ರದಲ್ಲಿಯೇ ಟೆಂಡರ್ ಕರೆಯುವ ಮೂಲಕ ಲಲಿತ ಮಹಲ್ ಕಟ್ಟಡ ನವೀಕರಣಕ್ಕೆ ಚಾಲನೆ ನೀಡಲಾಗುವುದು," ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.
ಇತಿಹಾಸ ತಜ್ಞರು ಹೇಳಿದ್ದೇನು?
ಇತಿಹಾಸ ತಜ್ಞ ಪ್ರೊ.ಎಸ್.ಎನ್.ರಂಗರಾಜು ನೇತೃತ್ವದಲ್ಲಿ ಪಾರಂಪರಿಕ ಸಂರಕ್ಷಣಾ ಉಪ ಸಮಿತಿಯ ಸದಸ್ಯರು, ಕಟ್ಟಡದ ಸ್ಥಿತಿಗತಿಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಕಟ್ಟಡದ ಚಾವಣಿ ಸೇರಿದಂತೆ ಗೋಡೆ ನೀರು ಸೋರಿಕೆ ಯಿಂದ ಶಿಥಿಲಾವಸ್ಥೆಗೊಂಡಿರುವುದರೊಂದಿಗೆ ಗಿಡಗಳು ಬೆಳೆದುಕೊಂಡಿರುವುದನ್ನು ಗುರುತಿಸಲಾಗಿದೆ. ಜತೆಗೆ ಗೋಪುರಗಳು ಬಿರುಕು ಬಿಟ್ಟಿರುವುದು, ಕಟ್ಟಡ ಪ್ಲಾಸ್ಟರಿಂಗ್ ಕಿತ್ತು ಬಂದಿರುವುದು, ಚಾವಣಿಯಿಂದ ಪೈಪ್ ಲೈನ್ ಗಳು ಒಡೆದು ನೀರು ಹರಿಯುತ್ತಿರುವುದು ಸೇರಿದಂತೆ ಹಲವು ಲೋಪಗಳನ್ನು ಗುರುತಿಸಿದ್ದಾರೆ.
"ಲಲಿತ ಮಹಲ್ ಪ್ಯಾಲೇಸ್ ನವೀಕರಣಕ್ಕೆ ಪಾರಂಪರಿಕ ಸಂರಕ್ಷಣಾ ಉಪ ಸಮಿತಿ ನೀಡುವ ವರದಿ ಆಧಾರದ ಮೇಲೆ ಅಂದಾಜು 30 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಯೋಜನಾ ವರದಿ ಸಿದ್ದಪಡಿಸಿ ಸರಕಾರಕ್ಕೆ ಸಲ್ಲಿಸಲಾಗುವುದು'' ಎಂದು ಪುರಾತತ್ವ ಸಂಗ್ರಹಾಲಯಗಳು ಮತ್ತು ಪಾರಂಪರಿಕ ಇಲಾಖೆಯ ಆಯುಕ್ತರಾದ ಎ.ದೇವರಾಜು ತಿಳಿಸಿದ್ದಾರೆ.












Click it and Unblock the Notifications