ನವೆಂಬರ್‌ನಲ್ಲಿ ಲಲಿತಮಹಲ್ ಪ್ಯಾಲೇಸ್ ಶತಮಾನೋತ್ಸವ ಕಾರ್ಯಕ್ರಮ
ಮೈಸೂರು, ಆಗಸ್ಟ್ 26: "ಮೈಸೂರಿನ ಲಲಿತಮಹಲ್ ಪ್ಯಾಲೇಸ್‌ಗೆ ನೂರು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ನವೆಂಬರ್ ತಿಂಗಳಿನಲ್ಲಿ ಶತಮಾನೋತ್ಸವ ಸಮಾರಂಭವನ್ನು ವರ್ಣರಂಜಿತವಾಗಿ ಆಚರಿಸಲಾಗುವುದು," ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.
ಮೈಸೂರು ನಗರದ ಲಲಿತಮಹಲ್ ಪ್ಯಾಲೇಸ್ ಸಭಾಂಗಣದಲ್ಲಿ ಪೂರ್ವ ಸಿದ್ಧತಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ 1921ರಲ್ಲಿ ನಿರ್ಮಿಸಿರುವ ಲಲಿತಮಹಲ್ ಪ್ಯಾಲೇಸ್‌ಗೆ ನೂರು ವರ್ಷವಾಗುತ್ತಿದ್ದು, ಅದರ ಸವಿನೆನಪಿಗಾಗಿ ಹಲವಾರು ಕಾರ್ಯಕ್ರಮ ರೂಪಿಸಲಾಗಿದೆ," ಎಂದರು.
"ನ.21ರಿಂದ ಒಂದು ವಾರಗಳ ಕಾಲ ಶತಮಾನೋತ್ಸವ ಆಚರಣೆ ನಡೆಯಲಿದೆ. ಐತಿಹಾಸಿಕ ಹಿನ್ನೆಲೆಯುಳ್ಳ ಲಲಿತಮಹಲ್ ಕಟ್ಟಡದ ಜವಾಬ್ದಾರಿಯನ್ನು ಕೇಂದ್ರ ಸಚಿವರಾಗಿದ್ದ ಅನಂತ ಕುಮಾರ್, ಭಾರತೀಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಸುಪರ್ದಿಯಿಂದ ರಾಜ್ಯ ಸರ್ಕಾರದ ವಶಕ್ಕೆ ನೀಡಿದ್ದರು. ಇದನ್ನು ರಾಜ್ಯ ಪ್ರವಾಸೋದ್ಯಮ ಇಲಾಖೆಗೆ ವಹಿಸಿತ್ತು. ನಂತರ, ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಗೆ ವಹಿಸಿಕೊಟ್ಟಿದ್ದರಿಂದ ಸುಸೂತ್ರವಾಗಿ ನಡೆಯುತ್ತಿದೆ," ಎಂದು ಹೇಳಿದರು.

"ಪ್ರವಾಸೋದ್ಯಮ ಸಚಿವರನ್ನು ಭೇಟಿ ಮಾಡಿ ರೂಪಿಸಿರುವ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡಲಾಗುವುದು. ಈಗ ತಯಾರಾಗಿರುವ ಪಟ್ಟಿಯಲ್ಲಿ ಹೊಸದನ್ನು ಸೇರಿಸಬಹುದು ಅಥವಾ ಕೈಬಿಡಬಹುದು. ಇದಲ್ಲದೆ, ಶತಮಾನೋತ್ಸವ ಕಾರ್ಯಕ್ರಮಕ್ಕೆ ಅನುದಾನ ನೀಡುವಂತೆ ಮುಖ್ಯಮಂತ್ರಿಗಳು, ಇಲಾಖೆ ಸಚಿವರಿಗೆ ಕೋರಲಾಗುತ್ತದೆ. ಪ್ರವಾಸೋದ್ಯಮಕ್ಕೆ ಪೂರಕವಾಗಿ ಕಾರ್ಯಕ್ರಮ ರೂಪಿಸುತ್ತೇವೆ," ಎಂದು ತಿಳಿಸಿದರು.
"ಶತಮಾನೋತ್ಸವ ಆಚರಣೆ ಸಂದರ್ಭದಲ್ಲಿ ಪ್ಯಾಲೇಸ್‌ನ ಇತಿಹಾಸದ ಬಗ್ಗೆ ಸಾರ್ವಜನಿಕರಿಗೆ ತಿಳಿಸುತ್ತೇವೆ. ಇದಲ್ಲದೆ, ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ರನ್ನು ಭೇಟಿ ಮಾಡಿ ಸಲಹೆ ಪಡೆದು, ಅದನ್ನೂ ಸೇರಿಸಿಕೊಳ್ಳುತ್ತೇವೆ," ಎಂದರು.

"ಶತಮಾನೋತ್ಸವ ಸಮಾರಂಭದ ಉದ್ಘಾಟನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಪ್ರವಾಸೋದ್ಯಮ ಸಚಿವರನ್ನು ಆಹ್ವಾನಿಸಲಾಗುವುದು. ಈ ಕಟ್ಟಡ ಮೈಸೂರಿನ ಪ್ರಮುಖ ತಾಣವಾಗಿದೆ. ಕೇಂದ್ರದ ಅನೇಕ ನಾಯಕರು, ರಾಜ- ಮಹಾರಾಜರು ಉಳಿದಿದ್ದಾರೆ," ಎಂದು ಹೇಳಿದರು.
ಶತಮಾನೋತ್ಸವ ಕಾರ್ಯಕ್ರಮಗಳು
"ಲಲಿತಮಹಲ್ ಕಟ್ಟಡದ ಮುಂಭಾಗದಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಸ್ಥಾಪಿಸಲಾಗುವುದು. ಮಹಾರಾಜರು ರಾಜ್ಯಕ್ಕೆ ನೀಡಿದ ಕೊಡುಗೆಗಳನ್ನು ಹಾಗೂ ಅವರ ಸಾಧನೆಗಳನ್ನು ಒಂದು ತಾತ್ಕಾಲಿಕ ಮ್ಯೂಸಿಯಂ ಸ್ಥಾಪಿಸಿ ಮಹಾರಾಜರಿಗೆ ನಮನ ಸಲ್ಲಿಸಲಾಗುತ್ತದೆ. ನಂತರದ ದಿನಗಳಲ್ಲಿ ಶಾಶ್ವತವಾಗಿ ಸ್ಥಾಪಿಸಲು ಯೋಜನೆ ರೂಪಿಸಲಾಗುತ್ತದೆ," ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.

"ಒಟ್ಟು ಏಳು ದಿನ ಸಾಂಸ್ಕತಿಕ ಕಾರ್ಯಕ್ರಮ ನಡೆಯಲಿದ್ದು, ಸ್ಥಳೀಯ ಕಲಾವಿದರಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಶತಮಾನೋತ್ಸವದ ಕಾರ್ಯಕ್ರಮದ ಅನುದಾನಕ್ಕೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದ್ದು, ಕಟ್ಟಡದ ಬಣ್ಣ ಮತ್ತು ಇತರೆ ಕಾಮಗಾರಿಗಳನ್ನು ಅಕ್ಟೋಬರ್ ಒಳಗೆ ಮುಗಿಸಬೇಕಿದೆ. ಸಾರ್ವಜನಿಕರಿಗೆ ಮುದ ನೀಡಲು ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗುತ್ತದೆ," ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ, ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ ಅಧ್ಯಕ್ಷ ಎಂ. ಅಪ್ಪಣ್ಣ, ವಿಧಾನ ಪರಿಷತ್ ಸದಸ್ಯರಾದ ಎಸ್. ಸಂದೇಶ್ ನಾಗರಾಜ್, ಆರ್. ಧರ್ಮಸೇನ, ಮೇಯರ್ ಸುನಂದಾ ಪಾಲನೇತ್ರ, ಮುಡಾ ಅಧ್ಯಕ್ಷ ಎಚ್.ವಿ. ರಾಜೀವ್, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಮುಡಾ ಆಯುಕ್ತ ಡಾ.ಡಿ.ಬಿ. ನಟೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎ.ಎಂ. ಯೋಗೀಶ್, ನಗರಪಾಲಿಕೆ ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ, ಅಪರ ಜಿಲ್ಲಾಧಿಕಾರಿ ಬಿ.ಎಸ್. ಮಂಜುನಾಥಸ್ವಾಮಿ, ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕ ಜನಾರ್ಧನ್ ಸೇರಿದಂತೆ ಹಲವರು ಇದ್ದರು.












Click it and Unblock the Notifications