ಐತಿಹಾಸಿಕ ಪ್ರವಾಸಿ ತಾಣ ಚುಂಚನಕಟ್ಟೆಯಲ್ಲಿ ಸಮಸ್ಯೆಗಳದ್ದೇ ಕಾರುಬಾರು, ಪ್ರವಾಸಿಗರು ಹೇಳುವುದೇನು?
ಮೈಸೂರು, ನವೆಂಬರ್, 07: ಜಿಲ್ಲೆಯ ಕೆ.ಆರ್.ನಗರ ತಾಲೂಕು ವ್ಯಾಪ್ತಿಯಲ್ಲಿರುವ ಚುಂಚನಕಟ್ಟೆಯು ಭಕ್ತರ ಇಷ್ಟಾರ್ಥ ನೆರವೇರಿಸುವ ಪವಿತ್ರ ಕ್ಷೇತ್ರವಾಗಿಯೂ, ಪ್ರಕೃತಿ ಪ್ರಿಯರ ಸೆಳೆಯುವ ಪ್ರವಾಸಿ ತಾಣವಾಗಿಯೂ ಗುರುತಿಸಿಕೊಂಡಿದ್ದು, ಪ್ರತಿನಿತ್ಯವೂ ಇಲ್ಲಿಗೆ ನಾಸ್ತಿಕ, ಆಸ್ತಿಕರೆನ್ನದೆ ಎಲ್ಲರೂ ಭೇಟಿ ನೀಡುತ್ತಾರೆ. ಆದರೆ ಈ ಕ್ಷೇತ್ರಕ್ಕೆ ಬಂದವರು ಇಲ್ಲಿನ ಅವ್ಯವಸ್ಥೆ ನೋಡಿದ ಬಳಿಕ ಹಿಡಿಶಾಪ ಹಾಕಿಕೊಂಡು ಹಿಂತಿರುಗುವುದು ಮಾಮೂಲಿಯಾಗಿದೆ.
ದೈವಿಕ ತಾಣವಾಗಿಯೂ ಪ್ರವಾಸಿ ಸ್ಥಳವಾಗಿಯೂ ಗುರುತಿಸಿಕೊಂಡು ಪ್ರತಿನಿತ್ಯ ನೂರಾರು ಮಂದಿಯನ್ನು ಸೆಳೆಯುವ ಸ್ಥಳ ಅಭಿವೃದ್ಧಿ ಹೊಂದಿಲ್ಲದೆ ಹೋದರೂ ಸ್ವಚ್ಛವಾಗಿಯಾದರೂ ಇರಬೇಕಿತ್ತು. ಆದರೆ ಅದ್ಯಾವುದೂ ಇಲ್ಲದೆ ಗಬ್ಬೆದ್ದು ನಾರುತ್ತಿರುವುದು ಇಲ್ಲಿಗೆ ಭೇಟಿ ನೀಡಿದವರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಊರಿನ ಅಶುಚಿತ್ವ, ಮೂಲಸೌಕರ್ಯದ ಕೊರತೆ ನೋಡಿದಾಗ ಸ್ಥಳೀಯ ಆಡಳಿತ ಸಂಸ್ಥೆಗಳು ಏನು ಮಾಡುತ್ತಿವೆ? ಅಧಿಕಾರಿಗಳಿಗಾಗಲೀ, ಜನಪ್ರತಿನಿಧಿಗಳಿಗಾಗಲೀ ಇಲ್ಲಿನ ಸಮಸ್ಯೆ ಕಾಣಿಸುತ್ತಿಲ್ವ ಎಂಬ ಪ್ರಶ್ನೆಗಳು ಮೂಡುತ್ತಿವೆ.

ಚುಂಚನಕಟ್ಟೆ ಇತಿಹಾಸ, ಸ್ಥಳದ ಮಹತ್ವ ಮತ್ತು ನಿಸರ್ಗ ಸೌಂದರ್ಯದ ಬಗ್ಗೆ ಅರಿತು ಹತ್ತಿರದಿಂದ ನೋಡುವ ಖುಷಿಯಲ್ಲಿ ತೆರಳಿದರೆ ಅಲ್ಲಿನ ದುಸ್ಥಿತಿ ಕಣ್ಣಿಗೆ ರಾಚುತ್ತದೆ. ಇನ್ನು ಗ್ರಾಮದೊಳಗೆ ಹೋಗಿ ಜನರನ್ನು ಮಾತನಾಡಿಸಿದರೆ ಸಮಸ್ಯೆಗಳ ಸರಮಾಲೆಯನ್ನೇ ಬಿಚ್ಚಿಡುತ್ತಾರೆ. ಒಂದು ಪ್ರಸಿದ್ಧ ಸ್ಥಳಕ್ಕೆ ಇಂತಹ ಪರಿಸ್ಥಿತಿ ಬಂದಿರುವುದು ಬೇಸರದ ಸಂಗತಿಯಾಗಿದೆ.
ಇನ್ನು ಇಲ್ಲಿಗೆ ತೆರಳಿ ಕಣ್ಣು ಹಾಯಿಸಿದರೆ ರಸ್ತೆಯಲ್ಲೇ ಹರಿಯುವ ನೀರು, ಕೆಟ್ಟು ನಿಂತ ಕೈ ಪಂಪುಗಳು, ದುಸ್ಥಿತಿಯಲ್ಲಿರುವ ಕುಡಿಯುವ ನೀರಿನ ಟ್ಯಾಂಕ್, ಸ್ವಚ್ಛತೆ ಕಾಣದ ಚರಂಡಿಗಳು, ವೃತ್ತ ಹಾಗೂ ರಸ್ತೆಗಳಲ್ಲಿ ಗಬ್ಬೆದ್ದು ನಾರುತ್ತಿರುವ ಕಸದ ರಾಶಿ ಸ್ವಾಗತಿಸುತ್ತದೆ.
ಮೇಲ್ನೋಟಕ್ಕೆ ಪ್ರವಾಸಿಗರು ಆಗಮಿಸುವ ಸ್ಥಳಗಳಲ್ಲಿ ಅಭಿವೃದ್ಧಿ ಮಾಡಿರುವುದು ಕಂಡು ಬಂದರೂ ಇಲ್ಲಿ ವಾಸಿಸುವ ಗ್ರಾಮಸ್ಥರ ಬದುಕು ಮಾತ್ರ ಮೂರಾಬಟ್ಟೆಯಾಗಿದೆ. ಗ್ರಾಮದಲ್ಲಿ ಸ್ವಚ್ಛತೆ ಮಾಯವಾಗಿ ಕಸದ ರಾಶಿ ಮೇಳೈಸುತ್ತಿದೆ. ಇದರಿಂದ ಹೊರ ಬರುವ ದುರ್ವಾಸನೆ ಗ್ರಾಮದಲ್ಲಿ ಸಮರ್ಪಕವಾಗಿ ಕಸ ವಿಲೇವಾರಿಯಾಗುತ್ತಿಲ್ಲ ಎಂಬುದನ್ನು ಮನದಟ್ಟು ಮಾಡುತ್ತಿದೆ. ಮುಖ್ಯ ರಸ್ತೆ, ಬದಿಗಳಲ್ಲೇ ಕಸದ ರಾಶಿ ಬಿದ್ದಿದ್ದರೂ ಅದನ್ನು ವಿಲೇವಾರಿ ಮಾಡುತ್ತಿಲ್ಲ. ಅದಕ್ಕಿಂತ ಹೆಚ್ಚಾಗಿ ಅಂಗಡಿ ಮುಂಗಟ್ಟು ಹಾಗೂ ಹೋಟೆಲ್‌ಗಳಿಂದ ತಂದು ತ್ಯಾಜ್ಯ ಸುರಿಯುವುದನ್ನು ತಡೆಯದ ಕಾರಣ ತ್ಯಾಜ್ಯದ ರಾಶಿಗಳು ಹೆಚ್ಚಾಗುತ್ತಿವೆ.
ಕಾಲಕಾಲಕ್ಕೆ ಬೀದಿಯ ರಸ್ತೆಗಳ ಚರಂಡಿಯ ಹೂಳನ್ನು ತೆಗೆದು ಸ್ವಚ್ಛಗೊಳಿಸದ ಕಾರಣ ಅನೈರ್ಮಲ್ಯ ತಾಂಡವವಾಡುತ್ತಿದೆ. ಜೊತೆಗೆ ಚರಂಡಿಗಳಲ್ಲಿ ಗಿಡಗಂಟಿಗಳು ಬೆಳೆದು, ತ್ಯಾಜ್ಯ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ಅಲ್ಲಲ್ಲಿ ನಿಂತು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗಗಳ ಭಯವೂ ಜನರನ್ನು ಕಾಡುತ್ತಿದೆ. ಕುಡಿಯುವ ನೀರಿನ ಪೈಪ್ ಲೈನ್ ಅಲ್ಲಲ್ಲಿ ಒಡೆದು ರಂಧ್ರಗಳಾಗಿರುವುದರಿಂದ ನೀರು ಸೋರಿಕೆಯಾಗಿ ರಸ್ತೆಯಲ್ಲಿಯೇ ಹರಿದು ಪೋಲಾಗುತ್ತಿದೆ.
ಗ್ರಾಮದ ಜನರ ನೀರಿನ ಕೊರತೆ ನೀಗಿಸಲು 4 ಕೈಪಂಪುಗಳನ್ನು ಅಳವಡಿಸಲಾಗಿದ್ದು, ಅದರಲ್ಲಿ 2 ಕೆಟ್ಟುನಿಂತು ಹಲವು ವರ್ಷಗಳೇ ಕಳೆದಿದ್ದು, ಇದುವರೆಗೆ ದುರಸ್ತಿಯಾಗಿಲ್ಲ. ಎರಡು ಪುಟ್ಟ ನೀರಿನ ಟ್ಯಾಂಕ್‌ಗಳನ್ನು ತೆರವುಗೊಳಿಸಿ ಕಾಮಗಾರಿಯನ್ನು ನಡೆಸಲಾಗಿತ್ತು. ಆದರೆ ಅದನ್ನು ಮರುಜೋಡಣೆ ಮಾಡದ ಕಾರಣ ಜನರಿಗೆ ತೊಂದರೆಯಾಗಿದೆ. ಚುಂಚನಕಟ್ಟೆ ಪುರಾಣ ಪ್ರಸಿದ್ಧ ಕ್ಷೇತ್ರವಾಗಿದ್ದು, ಇಲ್ಲಿಗೆ ಆಗಮಿಸುವ ಭಕ್ತರು ಮತ್ತು ಪ್ರವಾಸಿಗರಿಂದ ಸ್ಥಳೀಯ ಪಂಚಾಯಿತಿಗೆ ಆದಾಯ ಬರುತ್ತಿದ್ದರೂ ಚುಂಚನಕಟ್ಟೆ ಗ್ರಾಮದ ಅಭಿವೃದ್ಧಿಗೆ ಯಾವುದೇ ರೀತಿಯ ಗಮನಹರಿಸದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಚುಂಚನಕಟ್ಟೆ ಕ್ಷೇತ್ರಕ್ಕೆ ಮುಡಿ ಇನ್ನಿತರ ಹರಕೆ ತೀರಿಸಲು ರಾಜ್ಯ ಹಾಗೂ ಹೊರ ರಾಜ್ಯಗಳ ವಿವಿಧ ಕಡೆಗಳಿಂದ ಭಕ್ತರು ಆಗಮಿಸಿದರೆ, ಕಾವೇರಿ ನದಿ ವೈಭವ ನೋಡಲು, ಸ್ಥಳೀಯ ರಾಮದೇಗುಲದ ರಾಮನ ದರ್ಶನ ಮಾಡಿ ಸುತ್ತಲಿನ ನಿಸರ್ಗ ಸೌಂದರ್ಯ ಸವಿಯಲು ಜನ ಇತ್ತ ಬರುತ್ತಿರುತ್ತಾರೆ. ಹೀಗೆ ಬರುವ ಭಕ್ತರಿಗೆ ಇಲ್ಲಿನ ಸಮಸ್ಯೆಗಳು ಬೇಸರ ತರಿಸುತ್ತಿವೆ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನ ಹರಿಸಬೇಕಿದೆ.
ಚುಂಚನಕಟ್ಟೆಯ ಇತಿಹಾಸವೇನು?
ಇದೆಲ್ಲದರ ನಡುವೆ ಚುಂನಕಟ್ಟೆಯ ಕ್ಷೇತ್ರದ ಮಹಿಮೆಯ ಬಗ್ಗೆ ಹೇಳಲೇಬೇಕು. ಅದು ಏನೆಂದರೆ ಹಿಂದಿನ ಕಾಲದಲ್ಲಿ ಈ ಕ್ಷೇತ್ರವು ದಟ್ಟ ಕಾಡಿನಿಂದ ಕೂಡಿದ ಅರಣ್ಯವಾಗಿತ್ತು. ಇದನ್ನು ದಂಡಕಾರಣ್ಯವೆಂದು ಕರೆಯಲಾಗುತ್ತಿತ್ತು. ಹೀಗಿರುವಾಗ ಇಲ್ಲಿಗೆ ಆಗಮಿಸಿದ ತೃಣಬಿಂಧು ಮಹರ್ಷಿಗಳು ಈ ಸ್ಥಳವನ್ನು ನೋಡಿ ತಮ್ಮ ತಪಸ್ಸಿಗೆ ಇದು ಸೂಕ್ತ ಸ್ಥಳವೆಂದು ನಿರ್ಧರಿಸುತ್ತಾರೆ. ಆದರೆ ತಪಸ್ಸು ಮಾಡುವ ಮುನ್ನ ಸ್ನಾನ, ಜಪ ಮಾಡಲು ನದಿ ಅವಶ್ಯಕತೆಯಿರುವುದರಿಂದ ಅವರು ನದಿಗಾಗಿ ಹುಡುಕಾಡುತ್ತಾರೆ. ಆಗ ಅವರಿಗೆ ಅಲ್ಲಿ ಗುಪ್ತಗಾಮಿನಿಯಾಗಿ ಹರಿಯುವ ಕಾವೇರಿ ನದಿ ಕಾಣಿಸುವುದಿಲ್ಲ.
ಅವರು ನದಿಗಾಗಿ ನಾರಾಯಣನನ್ನು ಕುರಿತು ತಪಸ್ಸು ಮಾಡಲು ಆರಂಭಿಸುತ್ತಾರೆ. ಅವರ ತಪಸ್ಸಿಗೆ ಒಲಿದ ನಾರಾಯಣ ಗುಪ್ತಗಾಮಿನಿಯಾದ ಹರಿಯುತ್ತಿದ್ದ ಕಾವೇರಿಯನ್ನು ತೋರಿಸುತ್ತಾರೆ. ಅಷ್ಟೇ ಅಲ್ಲದೆ ತ್ರೇತಾಯುಗದಲ್ಲಿ ರಾಮನ ಅವತಾರವೆತ್ತಿ ರಾವಣನನ್ನು ಸಂಹಾರ ಮಾಡಿ ನಿಮ್ಮ ಇಷ್ಟಾರ್ಥವನ್ನು ನೆರವೇರಿಸಿಕೊಡುತ್ತೇನೆ ಎಂದು ಮಾತು ನೀಡುತ್ತಾನೆ.
ಧನುಷ್ಕೋಟಿ ಸೃಷ್ಟಿಯಾಗಿದ್ದು ಹೇಗೆ?
ಕಾಲಾಂತರದಲ್ಲಿ ತ್ರೇತಾಯುಗದಲ್ಲಿ ಶ್ರೀರಾಮ, ಸೀತೆ ಲಕ್ಷ್ಮಣರಾದಿಯಾಗಿ ಸೇನೆಯು ಲಂಕೆಯಲ್ಲಿ ರಾವಣನನ್ನು ಸಂಹಾರ ಮಾಡಿ ಹಿಂತಿರುಗುವಾಗಿ ಈ ಕ್ಷೇತ್ರಕ್ಕೆ ಬಂದಿದ್ದರೆಂದೂ ಈ ವೇಳೆ ಲಕ್ಷ್ಮಣನಿಗೆ ರಾಮ ಬಂಡೆಯನ್ನು ಒಡೆಯಲು ಹೇಳುತ್ತಾನೆ. ಲಕ್ಷ್ಮಣ ಹೊಡೆದ ಬಾಣಕ್ಕೆ ಬಂಡೆ ಚೂರಾಗಿ ಒಡೆದು ಕಾವೇರಿ ಉಕ್ಕಿ ಹರಿದಳು ಎಂಬ ಪೌರಾಣಿಕ ಕಥೆಯಿದೆ. ಇನ್ನು ಲಕ್ಷ್ಮಣ ಬಾಣ ಬಿಟ್ಟ ಸ್ಥಳದಲ್ಲಿ ಜಲಪಾತ ಸೃಷ್ಟಿಯಾಗಿದ್ದು, ಅದುವೇ ಧನುಷ್ಕೋಟಿಯಾಗಿದೆ.
ಈ ಕ್ಷೇತ್ರಕ್ಕೆ ಚುಂಚನಕಟ್ಟೆ ಎಂಬ ಹೆಸರು ಹೇಗೆ ಬಂತು ಎಂಬುದಕ್ಕೂ ಪೌರಾಣಿಕ ಹಿನ್ನಲೆಯಿದೆ. ಶಾಪಕ್ಕೊಳಗಾಗಿದ್ದ ಚುಂಚ, ಚುಂಚಿ ಎಂಬ ಬೇಡ ದಂಪತಿ ಈ ದಂಡಕಾರಣ್ಯ ಪ್ರದೇಶದಲ್ಲಿ ವಾಸವಾಗಿದ್ದುಕೊಂಡು ಜನರನ್ನು ಹೆದರಿಸಿ, ಬೆದರಿಸಿ, ಅವರ ವಸ್ತುಗಳನ್ನು ಕಿತ್ತುಕೊಂಡು ಕೊಂದು ತಿನ್ನುವ ನರಭಕ್ಷಕರಾಗಿದ್ದರು. ಆದರೆ ಇಲ್ಲಿಗೆ ಆಗಮಿಸಿದ ತೃಣಬಿಂದು ಮಹರ್ಷಿಗಳನ್ನು ನೋಡಿದ ತಕ್ಷಣ ಅವರಿಗೆ ಶರಣಾಗುತ್ತಾರೆ.
ಶಾಪ ವಿಮೋಚನೆಯಾದ ಸ್ಥಳ
ಆಗ ತೃಣಬಿಂದು ಮಹರ್ಷಿಗಳು ಬೇಡದಂಪತಿಗೆ ಅವರ ಪೂರ್ವ ಜನ್ಮದ ಬಗ್ಗೆ ತಿಳಿಸುತ್ತಾರೆ. ಹಿಂದೆ, ನೀವು ಕಾಶಿ ದೇಶದಲ್ಲಿ ಬ್ರಾಹ್ಮಣ ದಂಪತಿಗಳಾಗಿದ್ದಿರಿ. ನೀವು ಅಮವಾಸ್ಯೆಯ ದಿವಸ ಅಭ್ಯಂಜನ ಸ್ನಾನ (ಎಣ್ಣೆ ನೀರಿನ) ಮಾಡಿದ್ದಕ್ಕಾಗಿ ಈ ತೆರನಾದ ಶಾಪ ಬಂದಿದೆ. ಅದು ವಿಮೋಚನೆಯಾಗುವ ಕಾಲ ಸನ್ನಿಹಿತವಾಗಿದೆ. ಅದರಂತೆ ಒಬ್ಬ ಬಡವ ನಿಮ್ಮ ಬಳಿಗೆ ಬಂದು ಅಡುಗೆ ಮಾಡಿಕೊಳ್ಳಲು ಸ್ವಲ್ಪ ಸ್ಥಳ ಕೇಳುತ್ತಾನೆ. ಅದಕ್ಕೆ ನೀವು ಒಪ್ಪಿ ಸ್ಥಳಾವಕಾಶ ಮಾಡಿಕೊಡಬೇಕು. ಆಗ ನೀವು ಶಾಪದಿಂದ ಮುಕ್ತಿ ಹೊಂದುತ್ತೀರಿ ಎನ್ನುತ್ತಾರೆ. ಅದರಂತೆ ಅವರ ಶಾಪವು ವಿಮೋಚನೆಯಾಗುತ್ತದೆ. ಚುಂಚ, ಚುಂಚಿ ವಾಸವಿದ್ದ ಸ್ಥಳ ಚುಂಚನಕಟ್ಟೆಯಾಗಿದೆ ಎಂದು ಜನ ಹೇಳುತ್ತಾರೆ.
ಅದು ಏನೇ ಇರಲಿ ಚುಂಚನಕಟ್ಟೆ ಇವತ್ತು ಪವಿತ್ರ ತಾಣವಾಗಿದೆ. ಇಲ್ಲಿ ಪ್ರತಿನಿತ್ಯವೂ ಪೂಜಾ ಕೈಂಕರ್ಯಗಳು ನಡೆಯುವುದಲ್ಲದೆ, ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯು ಬಹಳ ಪ್ರಸಿದ್ಧಿ ಹೊಂದಿದೆ. ಇಂತಹ ಕ್ಷೇತ್ರದಲ್ಲಿ ವಾಸವಿರುವ ಜನರಿಗೆ ಮೂಲ ಸೌಕರ್ಯವನ್ನು ಒದಗಿಸಿ ಅವರು ನೆಮ್ಮದಿಯಿಂದ ಜೀವನ ನಡೆಸಲು ಸಂಬಂಧಿಸಿದವರು ಮುಂದಾಗಬೇಕಿದೆ.












Click it and Unblock the Notifications