ತಿಹಾರ್ ಜೈಲಿಗೆ ಹೋಗಿ ಬಂದವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ-ಈಶ್ವರಪ್ಪ
ಡಿ.ಕೆ.ಶಿವಕುಮಾರ್ ತಿಹಾರ್ ಜೈಲಿಗೆ ಹೋಗಿ ಬಂದಿದ್ದಾರೆ. ತಿಹಾರ್ ಜೈಲಿಗೆ ಹೋಗಿ ಬಂದಿರುವವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಲೇವಡಿ ಮಾಡಿದ್ದಾರೆ.
ಮೈಸೂರು, ಮಾರ್ಚ್ 4: ಕಾಂಗ್ರೆಸ್‌ನವರಿಗೆ ಹಣ ಕೊಟ್ಟು ಜನರನ್ನು ಕರೆಸುವುದು ಅಭ್ಯಾಸವಾಗಿದೆ. ಹಾಗಾಗಿ, ಬಿಜೆಪಿಯವರು ಹಣ ಕೊಟ್ಟು ಜನರನ್ನು ಕರೆಸುತ್ತಿದ್ದಾರೆಂದು ಹೇಳುತ್ತಿದ್ದಾರೆ. 500 ರೂ. ಕೊಟ್ಟು ಜನರನ್ನು ಸಭೆಗೆ ಕರೆತರುವಂತೆ ಸಿದ್ದರಾಮಯ್ಯ ಹೇಳಿರುವುದನ್ನು ಇಡೀ ದೇಶದ ಜನರು ನೋಡಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಮೈಸೂರು ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭಯೋತ್ಪಾದನೆ ಬೆಂಬಲಿಸುವ ಸಂಘಟನೆಗಳ ಮತ ನಮಗೆ ಬೇಕಾಗಿಲ್ಲ. ವಿಜಯಸಂಕಲ್ಪ ಯಾತ್ರೆಗೆ ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗುತ್ತಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನ ಗೆದ್ದು ಮತ್ತೆ ಅಧಿಕಾರ ಹಿಡಿಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾನು ಅಲ್ಪಸಂಖ್ಯಾತರ ಮತ ಬೇಡ ಎಂದು ಹೇಳಿಲ್ಲ. ಪಿಎಫ್‌ಐ, ಎಸ್‌ಡಿಪಿಐನಂತಹ ಮತಗಳು ನಮಗೆ ಬೇಕಾಗಿಲ್ಲ. ರಾಷ್ಟ್ರೀಯವಾದಿ ಮುಸ್ಲಿಮರು ನಮ್ಮೊಂದಿಗಿದ್ದು, ನಮಗೆ ಮತ ಹಾಕುತ್ತಾರೆ. ನರೇಂದ್ರ ಮೋದಿ, ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ನೇತೃತ್ವ, ಸಂಘಟನೆ ಹಾಗೂ ನಾವು ಮಾಡಿರುವ ಅಭಿವೃದ್ಧಿ ಹಾಗೂ ನಾವು ಸಂಸ್ಕೃತಿ ಉಳಿಸಲು ಮಾಡುತ್ತಿರುವ ಯತ್ನಗಳ ಆಧಾರದ ಮೇಲೆ ಮತ ಕೇಳುತ್ತಿದ್ದೇವೆ ಎಂದರು.
ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಲೋಕಾಯುಕ್ತ ಬಲೆಗೆ ಬಿದ್ದ ವೇಳೆ ಕೋಟ್ಯಂತರ ರೂ. ಪತ್ತೆಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು ಸಿಎಂ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಡಿ.ಕೆ.ಶಿವಕುಮಾರ್ ತಿಹಾರ್ ಜೈಲಿಗೆ ಹೋಗಿ ಬಂದಿದ್ದಾರೆ. ತಿಹಾರ್ ಜೈಲಿಗೆ ಹೋಗಿ ಬಂದಿರುವವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದರು.
ಈ ವೇಳೆ ಉಪಸ್ಥಿತರಿದ್ದ ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಮಾತನಾಡಿ, ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಚುನಾವಣೆ ವ್ಯವಸ್ಥಿತವಾಗಿ ನಡೆಯುತ್ತಿದೆ. ಸರ್ಕಾರದ ಕೆಲಸ ಕಾರ್ಯಗಳನ್ನು ಜನರ ಮುಂದಿಡುತ್ತಿದ್ದೇವೆ. ಕಾಂಗ್ರೆಸ್, ಜೆಡಿಎಸ್ ಕೇವಲ ಪ್ರಚಾರಕ್ಕಾಗಿ ಯಾತ್ರೆ ಮಾಡುತ್ತಿದ್ದಾರೆ. ನಾವು ನಮ್ಮ ಕಾರ್ಯಗಳನ್ನು ಮೌಲ್ಯಮಾಪನ, ತುಲನೆ ಮಾಡಿ ಮತಕೊಡಿ ಎಂದು ಕೇಳುತ್ತಿದ್ದೇವೆ. ನಮ್ಮ ಕೆಲಸಗಳು ಎಲ್ಲರನ್ನೂ ಮುಟ್ಟಿರುವುದರಿಂದ ಜನರ ಸ್ಪಂದನೆಯೂ ಉತ್ತಮವಾಗಿದೆ. ಘೋಷಣೆಗಳ ಆಧಾರದ ಮೇಲೆ ಚುನಾವಣೆ ಮಾಡದೆ ಸಾಧನೆಗಳ ಮೇಲೆ ಚುನಾವಣೆ ಎದುರಿಸುತ್ತಿದ್ದೇವೆ ಎಂದರು.
ವಿಜಯಸಂಕಲ್ಪ ಯಾತ್ರೆಗೆ ಸಚಿವ ವಿ.ಸೋಮಣ್ಣ ಗೈರಾಗಿದ್ದರ ಕುರಿತು ಸ್ಪಷ್ಟನೆ ನೀಡಿದ ಅವರು, ಪೂರ್ವನಿಯೋಜಿತ ಕಾರ್ಯಕ್ರಮವಿದ್ದ ಕಾರಣ ಸೋಮಣ್ಣ ಗೈರಾದರು. ಇದರಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ರಾಜೇಂದ್ರ, ನಗರಾಧ್ಯಕ್ಷ ಶ್ರೀವತ್ಸ, ಗ್ರಾಮಾಂತರ ಅಧ್ಯಕ್ಷೆ ಮಂಗಳಾ ಸೋಮಶೇಖರ್, ಸಹ ಸಂಚಾಲಕ ದತ್ತಾತ್ರೇಯ, ಜಿಲ್ಲಾ ಸಂಚಾಲಕ ಮಹದೇವು, ಸಂಘಟನಾ ಕಾರ್ಯದರ್ಶಿ ಮೈವಿ ರವಿಶಂಕರ್, ಮುಖಂಡರಾದ ಕಾಪು ಸಿದ್ದಲಿಂಗಸ್ವಾಮಿ ಹಾಗೂ ವಸಂತಕುಮಾರ್ ಉಪಸ್ಥಿತರಿದ್ದರು.












Click it and Unblock the Notifications