ತೂಗುಯ್ಯಾಲೆಯಲ್ಲಿ ಎಚ್ ವಿಶ್ವನಾಥ್ ರಾಜಕೀಯ ಭವಿಷ್ಯ!
ಮೈಸೂರು, ಏಪ್ರಿಲ್ 28: ಈ ಬಾರಿಯ ಬಿಜೆಪಿ ವರಿಷ್ಠರ ನಡೆ ಕೆಲವು ಕ್ಷೇತ್ರಗಳಲ್ಲಿ ಜೆಡಿಎಸ್ ನತ್ತ ಮೃದು ಧೋರಣೆ ತಳೆದಂತೆ ಕಂಡು ಬಂದಿದ್ದು, ಇದರಿಂದ ಖುದ್ದು ಪಕ್ಷದ ಕಾರ್ಯಕರ್ತರೇ ಬೆಚ್ಚಿ ಬೀಳುವಂತಾಗಿದೆ. ಇದಕ್ಕೆ ಬಹಳಷ್ಟು ಕಡೆಗಳಲ್ಲಿ ಪ್ರಭಾವಿ ನಾಯಕರನ್ನು ಬದಿಗೆ ಸರಿಸಿ ನಾಮಕಾವಸ್ಥೆಯ ನಾಯಕರನ್ನು ಕಣಕ್ಕಿಳಿಸಿರುವುದು ಕಂಡು ಬರುತ್ತಿದೆ.
ಮೈಸೂರು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಪೈಕಿ ಹುಣಸೂರು ಕ್ಷೇತ್ರ ಈ ಬಾರಿ ಹೆಚ್ಚು ಗಮನಸೆಳೆಯುತ್ತಿದೆ. ಇದಕ್ಕೆ ಇಲ್ಲಿ ಜೆಡಿಎಸ್ ನಿಂದ ಸ್ಪರ್ಧೆ ಮಾಡುತ್ತಿರುವ ಸಂಸದ ಎಚ್.ವಿಶ್ವನಾಥ್ ಕಾರಣ. ಕಾಂಗ್ರೆಸ್ ತೊರೆದು ಜೆಡಿಎಸ್ ಗೆ ಬಂದಿರುವ ಇವರು ಸಿಎಂ ಆಪ್ತ ಎಚ್.ಪಿ.ಮಂಜುನಾಥ್ ವಿರುದ್ಧ ಕಣಕ್ಕಿಳಿದಿದ್ದಾರೆ. ಅಷ್ಟೇ ಅಲ್ಲ ಹುಣಸೂರಿನಲ್ಲಿ ಜೆಡಿಎಸ್ ನಿಂದ ಗೆಲ್ಲಲೇ ಬೇಕೆಂಬ ಹಠಕ್ಕೆ ಬಿದ್ದಿದ್ದಾರೆ.
ಹಾಗೆನೋಡಿದರೆ ಹುಣಸೂರು ಕ್ಷೇತ್ರದಲ್ಲಿ ಜೆಡಿಎಸ್ ನ ಪ್ರಭಾವಿ ನಾಯಕ ಜಿ.ಟಿ.ದೇವೇಗೌಡರ ಹವಾ ಇದೆ. ಹೀಗಾಗಿ ಅವರು ತಮ್ಮ ಪುತ್ರನನ್ನು ಶಾಸಕನನ್ನಾಗಿ ಮಾಡುವ ಆಲೋಚನೆ ಮಾಡಿದ್ದರು. ಅದರಂತೆ ಮಗ ಹರೀಶ್‍ಗೌಡ ಕಳೆದ ಐದು ವರ್ಷಗಳಿಂದ ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡು ಬಂದಿದ್ದರು. ಆದರೆ ಯಾವಾಗ ವಿಶ್ವನಾಥ್ ಅವರು ಜೆಡಿಎಸ್ ಸೇರಿದರೋ ಆಗಲೇ ಹರೀಶ್ ಬಯಕೆಗೆ ಎಳ್ಳುನೀರು ಬಿಡಲಾಯಿತು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗೆಲುವಿಗಾಗಿ ಪಟ್ಟು ಹಿಡಿದಿರುವ ವಿಶ್ವನಾಥ್
ಸದ್ಯ ಎಚ್.ವಿಶ್ವನಾಥ್ ಹುಣಸೂರು ಕ್ಷೇತ್ರದಲ್ಲಿ ಗೆಲುವಿಗಾಗಿ ಪಣತೊಟ್ಟು ನಿಂತಿದ್ದಾರೆ. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡಿರುವ ಅವರಿಗೆ ಇದೊಂದು ಅಗ್ನಿಪರೀಕ್ಷೆ. ಇಲ್ಲಿ ಗೆಲುವು ಕಂಡರೆ ಮಾತ್ರ ಅವರ ಮುಂದಿನ ರಾಜಕೀಯ ನಡೆ ಅಡೆತೆಯಿಲ್ಲದೆ ಸಾಗಲು ಸಾಧ್ಯ. ಇಲ್ಲದೆ ಹೋದರೆ ತೆರೆಗೆ ಸರಿಯಲೇ ಬೇಕಾಗುತ್ತದೆ. ಹೀಗಾಗಿ ರಾಜ್ಯ ರಾಜಕೀಯದಲ್ಲಿ ಉಳಿಯಬೇಕಾದರೆ ಮತ್ತು ಸಿಎಂ ಸಿದ್ದರಾಮಯ್ಯ ಅವರ ಮುಂದೆ ತಲೆ ಎತ್ತಿ ನಿಲ್ಲಬೇಕಾದರೆ ಗೆಲುವು ಅನಿವಾರ್ಯವಾಗಿದೆ.

ಕಾಂಗ್ರೆಸ್ ಅಭ್ಯರ್ಥಿಯಿಂದ ತೀವ್ರ ಪೈಪೋಟಿ
ಇನ್ನೊಂದೆಡೆ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಹಾಲಿ ಶಾಸಕ ಎಚ್.ಪಿ.ಮಂಜುನಾಥ್ ಅವರನ್ನು ಮಣಿಸುವುದು ಅಷ್ಟು ಸುಲಭದ ಕೆಲಸವಲ್ಲ. ಏಕೆಂದರೆ ಈಗಾಗಲೇ ಕ್ಷೇತ್ರದಲ್ಲಿ ಒಂದಷ್ಟು ಅಭಿವೃದ್ಧಿ ಕಾರ್ಯ ಮಾಡುವುದರೊಂದಿಗೆ ಸದಾ ಸಾರ್ವಜನಿಕರ ಒಡನಾಟದಲ್ಲಿರುವ ಶಾಸಕರು ತನ್ನದೇ ಆದ ಓಟ್ ಬ್ಯಾಂಕ್ ಹೊಂದಿದ್ದಾರೆ. ಜೊತೆಗೆ ಸಿಎಂನ ಕೃಪಾಕಟಾಕ್ಷವೂ ಇದೆ. ಹೀಗಿರುವಾಗ ಅವರನ್ನು ಬಗ್ಗು ಬಡಿಯುವುದು ಸುಲಭವೇನಲ್ಲ. ಈಗಿನ ಪರಿಸ್ಥಿತಿಯನ್ನು ನೋಡಿದರೆ ಬಿಜೆಪಿ ನಾಯಕರ ನಡೆ ವಿಶ್ವನಾಥ್ ಅವರ ಗೆಲುವಿಗೆ ರಹದಾರಿ ಮಾಡಿಕೊಟ್ಟಂತಿದೆ. ಇದು ಕ್ಷೇತ್ರದಲ್ಲಿ ಒಳಒಪ್ಪಂದದ ಮತ್ತೊಂದು ಮುಖವಾಗಿ ಕಂಡು ಬರುತ್ತಿದೆ. ಏಕೆಂದರೆ ಕ್ಷೇತ್ರದ ಬಿಜೆಪಿಯಲ್ಲಿ ಪ್ರಭಾವಿ ನಾಯಕರಿದ್ದರೂ ಅವರಿಗೆ ಟಿಕಟ್ ನೀಡಿಲ್ಲ.

ಪ್ರತಾಪ್ ಸಿಂಹಗೂ ಒಲವಿತ್ತು
ಹುಣಸೂರು ಕ್ಷೇತ್ರದತ್ತ ಸಂಸದ ಪ್ರತಾಪ್ ಸಿಂಹ ಒಲವು ಹೊಂದಿದ್ದರು. ಅದಕ್ಕಾಗಿ ಹುಣಸೂರಿನಲ್ಲಿ ಹಲವು ಆಗಾಗ್ಗೆ ಕಾಣಿಸಿಕೊಂಡಿದ್ದರು, ಅವರಲ್ಲದೆ ತಾಲೂಕು ಬಿಜೆಪಿ ಅಧ್ಯಕ್ಷ ಹಾಗೂ ಹಿರಿಯ ನ್ಯಾಯವಾದಿ ಬಿ.ಎಸ್.ಯೋಗನಂದಕುಮಾರ್ ಆಕಾಂಕ್ಷಿಗಳಾಗಿದ್ದರು, ಇವರೊಂದಿಗೆ ಇತ್ತೀಚೆಗಷ್ಟೇ ಹುಣಸೂರಿಗೆ ಕಾಲಿಟ್ಟು ನಾನು ಮೂಲ ಹುಣಸೂರಿಗ ಎಂದು ಬಿಂಬಿಸಿಕೊಳ್ಳುತ್ತಾ ಹಣದ ಹೊಳೆ ಹರಿಸಿಸುತ್ತಾ ಒಂದಷ್ಟು ಬೆಂಬಲಿಗರೊಂದಿಗೆ ಒಡಾಡುತ್ತಿದ್ದ ಯಡಿಯೂರಪ್ಪ ಆಪ್ತ ವಂಸತ್ ಕುಮಾರ್ ಗೌಡ ಎಂಬುವರು ಕೂಡ ಟಿಕೆಟ್ ಗಾಗಿ ಕಸರತ್ತು ನಡೆಸಿದ್ದರು.

ಬಿಜೆಪಿ ಆಟಕ್ಕುಂಟು ಲೆಕ್ಕಕ್ಕಿಲ್ಲ
ಆದರೆ ಕೊನೆಗಳಿಗೆಯಲ್ಲಿ ವರಿಷ್ಠರು ಯಾವುದನ್ನು ಲೆಕ್ಕಿಸದೆ ಜಿ.ಪಂ. ಮಾಜಿ ಸದಸ್ಯ ಜಾಬಗೆರೆ ರಮೇಶ್ ಕುಮಾರ್ ಅವರಿಗೆ ನೀಡಿದ್ದಾರೆ. ಅವರು ಪ್ರಾಮಾಣಿಕ ವ್ಯಕ್ತಿ ಹೌದು ಆದರೆ ಪ್ರಭಾವಿ ಅಲ್ಲ. ಹೀಗಾಗಿ ಹುಣಸೂರು ಕ್ಷೇತ್ರದಲ್ಲಿ ಬಿಜೆಪಿ ಲೆಕ್ಕಕ್ಕುಂಟು ಆಟಕ್ಕಿಲ್ಲ ಎಂಬಂತಾಗಿದೆ. ಇದು ಬಿಜೆಪಿ ಕಾರ್ಯಕರ್ತರ ಅಸಮಾಧಾನಕ್ಕೂ ಕಾರಣವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದು ಏನೇ ಇರಲಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸುವಲ್ಲಿ ವರಿಷ್ಠರು ತೆಗೆದುಕೊಂಡ ನಿರ್ಧಾರದ ಹಿಂದೆ ಎಚ್.ವಿಶ್ವನಾಥ್ ಅವರಿಗೆ ಅನುಕೂಲ ಮಾಡಿಕೊಡುವ ತಂತ್ರಗಳು ಅಡಕವಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಇದರ ಲಾಭವನ್ನು ಜೆಡಿಎಸ್ ನ ಎಚ್.ವಿಶ್ವನಾಥ್ ಅವರು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಕಾಲವೇ ಹೇಳಬೇಕಿದೆ.












Click it and Unblock the Notifications